"ಕರೂರು ಕಾಲ್ತುಳಿತ ಘಟನೆಯಿಂದ ದೇಶದ ಆತ್ಮಸಾಕ್ಷಿಗೆ ಆಘಾತವಾಗಿದೆ": ಸಿಬಿಐ ತನಿಖೆಗೆ ಆದೇಶಿಸಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಕರೂರು ಕಾಲ್ತುಳಿತ ಘಟನೆಯಿಂದ ಗಂಭೀರ ಸ್ವರೂಪದ ಪರಿಣಾಮಗಳಾಗಿದ್ದು, ಅದರಿಂದ ನಾಗರಿಕರ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗಿದೆ ಎಂದು ಸೋಮವಾರ ಅಭಿಪ್ರಾಯ ಪಟ್ಟ ಸುಪ್ರೀಂ ಕೋರ್ಟ್, ಕರೂರು ಕಾಲ್ತುಳಿತ ಘಟನೆಯ ಕುರಿತು ಸಿಬಿಐ ತನಿಖೆಗೆ ಆದೇಶಿಸಿದೆ.
“ಕರೂರು ಕಾಲ್ತುಳಿತ ಘಟನೆಯ ದುರಂತವು ದೇಶದ ಆತ್ಮಸಾಕ್ಷಿಯನ್ನೇ ಅಲುಗಾಡಿಸಿದ್ದು, ಎಲ್ಲ ಪಕ್ಷಗಳ ಆತಂಕಗಳನ್ನು ಪರಿಹರಿಸಲು ಆಳವಾದ ತನಿಖೆಯ ಅಗತ್ಯವಿದೆ” ಎಂದು ಈ ಕುರಿತು ತೀರ್ಪು ನೀಡಿದ ನ್ಯಾ. ಜೆ. ಮಾಹೇಶ್ವರಿ ಅಭಿಪ್ರಾಯಪಟ್ಟರು.
ಅಲ್ಲದೆ, ಸಿಬಿಐ ತನಿಖೆಯ ಮೇಲುಸ್ತುವಾರಿ ನಡೆಸಲು ಹಾಗೂ ಪರಾಮರ್ಶೆಗಾಗಿ ಮೂರು ಮಂದಿ ಸದಸ್ಯರ ಮೇಲ್ವಿಚಾರಣಾ ಸಮಿತಿಯನ್ನೂ ನ್ಯಾಯಾಲಯ ರಚಿಸಿದೆ. ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಅಜಯ್ ರಸ್ತೋಗಿ ನೇತೃತ್ವದ ಈ ಸಮಿತಿಯಲ್ಲಿ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳಿರಲಿದ್ದಾರೆ. ಈ ಇಬ್ಬರು ಐಪಿಎಸ್ ಅಧಿಕಾರಿಗಳು ತಮಿಳುನಾಡಿನ ಕೇಡರ್ ಅಧಿಕಾರಿಗಳೇ ಆಗಿದ್ದರೂ, ಅವರು ತಮಿಳುನಾಡಿನ ನಿವಾಸಿಗಳಾಗಿರುವುದಿಲ್ಲ. ಈ ಸಮಿತಿಯು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ವಿಷಯಗಳ ಕುರಿತು ವಿಚಾರಣೆಯನ್ನೂ ನಡೆಸಬಹುದಾಗಿದೆ.
ಪ್ರಕರಣದ ತನಿಖೆ ಕೈಗೆತ್ತಿಕೊಳ್ಳಲಿರುವ ಸಿಬಿಐಗೆ ತನಿಖಾ ಪ್ರಗತಿಯ ಮಾಹಿತಿಗಳನ್ನು ಪ್ರತಿ ತಿಂಗಳು ಸುಪ್ರೀಂ ಕೋರ್ಟ್ ಗೆ ಸಲ್ಲಿಸಬೇಕು ಎಂದೂ ಸೂಚಿಸಲಾಗಿದೆ.