×
Ad

ದಿಲ್ಲಿ-ಎನ್ಸಿಆರ್ ವ್ಯಾಪ್ತಿಯಲ್ಲಿ ದೀಪಾವಳಿ ವೇಳೆ ಹಸಿರು ಪಟಾಕಿ ಮಾರಾಟಕ್ಕೆ ಸುಪ್ರೀಂ ಅನುಮತಿ

Update: 2025-10-15 12:46 IST

Photo credit: PTI

ಹೊಸದಿಲ್ಲಿ: ದೀಪಾವಳಿ ಹಬ್ಬದ ವೇಳೆ ದಿಲ್ಲಿ-ಎನ್ಸಿಆರ್ ವ್ಯಾಪ್ತಿಯಲ್ಲಿ ಹಸಿರು ಪಟಾಕಿ ಮಾರಾಟ ಮಾಡಲು ಹಾಗೂ ಸಿಡಿಸಲು ಬುಧವಾರ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.

ಹಬ್ಬಗಳ ಸಮಯದಲ್ಲಿ ಹಸಿರು ಪಟಾಕಿ ಮೇಲಿನ ನಿರ್ಬಂಧವನ್ನು ತೆರವುಗೊಳಿಸುವಂತೆ ಕೇಂದ್ರ ಮತ್ತು ದಿಲ್ಲಿ ಸರಕಾರಗಳು ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದ್ದವು.

ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ನ್ಯಾ. ವಿನೋದ್ ಚಂದ್ರನ್ ಅವರಿದ್ದ ನ್ಯಾಯಪೀಠ, ಹಸಿರು ಪಟಾಕಿ ಮೇಲಿನ ನಿರ್ಬಂಧವನ್ನು ತೆರವುಗೊಳಿಸಿತು.

“ದೀಪಾವಳಿ ಪ್ರಯುಕ್ತ ಅಕ್ಟೋಬರ್ 18ರಿಂದ ಅಕ್ಟೋಬರ್ 21ರವರೆಗೆ ಹಸಿರು ಪಟಾಕಿ ಸಿಡಿಸಲು ಅನುಮತಿ ನೀಡಲಾಗಿದೆ. ಈ ವೇಳೆ ಆಗುವ ಮಾಲಿನ್ಯ ಮಟ್ಟವನ್ನು ಪರಿಶೀಲಿಸಿ, ವರದಿ ಸಲ್ಲಿಸುವಂತೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚಿಸಲಾಗಿದೆ” ಎಂದು ನ್ಯಾಯಪೀಠ ಹೇಳಿತು.

ದಿಲ್ಲಿಗೆ ಅಕ್ರಮವಾಗಿ ಪಟಾಕಿಗಳನ್ನು ತರಲಾಗುತ್ತಿದೆ. ಹಸಿರು ಪಟಾಕಿಗಳಿಗಿಂತ ಅವು ಪರಿಸರಕ್ಕೆ ಹೆಚ್ಚು ಹಾನಿಯನ್ನುಂಟು ಮಾಡುತ್ತವೆ. ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ನಾವು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಹೇಳಿದರು.

ದಿಲ್ಲಿಯ ಹೊರಗೆ ತಯಾರಾಗುವ ಪಟಾಕಿಗಳನ್ನು ಇಲ್ಲಿ ಮಾರುವಂತಿಲ್ಲ. ಒಂದು ವೇಳೆ ಇಂತಹ ಪ್ರಕರಣಗಳನ್ನು ಪತ್ತೆಯಾದರೆ, ಮಾರಾಟಗಾರರ ಪರವಾನಗಿಯನ್ನು ರದ್ದುಗೊಳಿಸಲಾಗುವುದು ಎಂದೂ ನ್ಯಾಯಪೀಠ ಎಚ್ಚರಿಸಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News