×
Ad

ಕೇಂದ್ರೀಯ ವಿವಿಗಳಲ್ಲಿ ಎಸ್‌ಸಿ, ಎಸ್‌ಟಿ, ಓಬಿಸಿ ಹುದ್ದೆಗಳು ಖಾಲಿ

Update: 2025-07-25 20:51 IST

 ಸಾಂದರ್ಭಿಕ ಚಿತ್ರ | PTI

 

ಹೊಸದಿಲ್ಲಿ,ಜು.25: ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ(ಎಸ್‌ಟಿ) ಹಾಗೂ ಇತರ ಹಿಂದುಳಿದ ವರ್ಗ (ಓಬಿಸಿ)ಗಳ ಅಭ್ಯರ್ಥಿಗಳಿಗೆ ಮೀಸಲಾದ ಹುದ್ದೆಗಳನ್ನು ಖಾಲಿ ಬಿಟ್ಟಿರುವುದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಅವರು ಶುಕ್ರವಾರ ನರೇಂದ್ರ ಮೋದಿ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಇದು ಕೇವಲ ನಿರ್ಲಕ್ಷ್ಯ ಮಾತ್ರವಲ್ಲ, ‘ಬಹುಜನರನ್ನು ಶಿಕ್ಷಣ, ಸಂಶೋಧನೆ ಹಾಗೂ ನೀತಿ ನಿರೂಪಣೆಗಳಿಂದ ದೂರವಿರಿಸಲು ಅತ್ಯಂತ ವ್ಯವಸ್ಥಿತವಾಗಿ ರೂಪುಗೊಳಿಸಿರುವ ಸಂಚು ಕೂಡಾ ಆಗಿದೆ ಎಂದು ಅವರು ಆರೋಪಿಸಿದ್ದಾರೆ.

ಈ ಎಲ್ಲಾ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಬೇಕಾಗಿದೆ ಹಾಗೂ ಬಹುಜನರಿಗೆ ಹಕ್ಕುಗಳನ್ನು ನೀಡಬೇಕೇ ಹೊರತು ಅವರಿಗೆ ‘ಮನುವಾದಿ ಬಹಿಷ್ಕಾರ’ವನ್ನು ಹಾಕುವುದಲ್ಲ ಎಂದವರು ಹೇಳಿದ್ದಾರೆ.

ಮೋದಿ ಸರಕಾರವು ಸಂಸತ್‌ ನಲ್ಲಿ ಮಂಡಿಸಿದ ಅಂಕಿ ಅಂಶಗಳು ಬಹುಜನರು ಅವರ ಹಕ್ಕುಗಳಿಂದ ವಂಚಿತರಾಗಿದ್ದಾರೆಂಬುದಕ್ಕೆ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮನುವಾದದ ಉಪಸ್ಥಿತಿಯಿರುವುದಕ್ಕೆ ಒಂದು ದೃಢವಾದ ಪುರಾವೆಯಿದೆ ಎಂದರು.

ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲಿ ಪ್ರೊಫೆಸರ್ ಹುದ್ದೆಗಳಿಗೆ ಪರಿಶಿಷ್ಟ ಪಂಗಡ (ಎಸ್‌ಟಿ)ಗಳಿಗಾಗಿನ ಶೇ.83ರಷ್ಟು ಸೀಟುಗಳು, ಓಬಿಸಿಗಳಿಗಾಗಿನ ಶೇ.80ರಷ್ಟು ಹುದ್ದೆಗಳು ಹಾಗೂ ಎಸ್‌ ಸಿ ಗಳಿಗಾಗಿನ ಶೇ.51ರಷ್ಟು ಹುದ್ದೆಗಳು ಖಾಲಿ ಉಳಿದಿವೆ ಎಂದು ರಾಹುಲ್ ತಿಳಿಸಿದರು.

ಇದೇ ವೇಳೆ ಸಹಾಯ ಪ್ರೊಫೆಸರ್ ಹುದ್ದೆಗಳಲ್ಲಿ ಪರಿಶಿಷ್ಟ ಪಂಗಡದ ಶೇ.65 ಹಾಗೂ ಓಬಿಸಿಗಳಿಗಾಗಿನ ಶೇ.69 ಹಾಗೂ ಪರಿಶಿಷ್ಟ ಜಾತಿಗಳಿಗಾಗಿನ ಶೇ.64ರಷ್ಟು ಹುದ್ದೆಗಳನ್ನು ಉದ್ದೇಶಪೂರ್ವಕವಾಗಿ ಖಾಲಿ ಬಿಡಲಾಗಿದೆ. ಇದು ಕೇವಲ ನಿರ್ಲಕ್ಷ್ಯ ಮಾತ್ರವಲ್ಲ. ಶಿಕ್ಷಣ, ಸಂಶೋಧನೆ ಹಾಗೂ ನೀತಿಗಳಿಂದ ಬಹುಜನರನ್ನು ಹೊರಗಿಡಲು ನಡೆಸಿದ ಸಂಚೆಂದು ಕಾಂಗ್ರೆಸ್ ನಾಯಕ ಆಪಾದಿಸಿದರು.

ವಿಶ್ವವಿದ್ಯಾನಿಲಯಗಳಲ್ಲಿ ಬಹುಜನರ ಕೊರತೆಯಿರುವುದರಿಂದ, ಅವಕಾಶವಂಚಿತ ಸಮುದಾಯಗಳ ಸಮಸ್ಯೆಗಳನ್ನು ಸಂಶೋಧನೆ ಹಾಗೂ ಸಂವಾದಗಳಿಂದ ಉದ್ದೇಶಪೂರ್ವಕವಾಗಿ ಮರೆಮಾಚಲಾಗಿದೆ ಎಂದವರು ಹೇಳಿದರು.

ಮನುವಾದಿ ಚಿಂತನೆಯಡಿ ಯೋಗ್ಯ ಅಭ್ಯರ್ಥಿಗಳು ಸಿಕ್ಕಿಲ್ಲವೆಂಬ ನೆಪ ಹೇಳಿ ಪ್ರತಿ ವರ್ಷ ಸಾವಿರಾರು ಅರ್ಹ ಎಸ್‌ಸಿ, ಎಸ್‌ಟಿ, ಒಬಿಸಿ ಅಭ್ಯರ್ಥಿಗಳನ್ನು ಅನರ್ಹರೆಂದು ಘೋಷಿಸಲಾಗುತ್ತದೆ ಹಾಗೂ ಸರಕಾರವು ಯಾವುದೇ ಹೊಣೆಗಾರಿಕೆಯನ್ನು ವಹಿಸಿಕೊಳ್ಳಲು ಸಿದ್ಧವಿಲ್ಲ. ಸರಕಾರದ ಈ ನಿಲುವನ್ನು ಎಂದೂ ಒಪ್ಪಿಕೊಳ್ಳಲುಸಾಧ್ಯವಲ್ಲ. ತಕ್ಷಣವೇ ಈ ಎಲ್ಲಾ ಹುದ್ದೆಗಳನ್ನು ಭರ್ತಿಗೊಳಿಸಬೇಕಾಗಿದೆ. ಬಹುಜನರು ಅವರ ಹಕ್ಕುಗಳನ್ನು ಪಡೆಯಬೇಕೇ ಹೊರತು ಮನುವಾದಿ ಬಹಿಷ್ಕಾರವನ್ನಲ್ಲ ಎಂದು ರಾಹುಲ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News