×
Ad

ಸಲ್ಮಾನ್‌ ಖಾನ್ ನಿವಾಸಕ್ಕೆ ಆಕ್ರಮ ಪ್ರವೇಶ ಯತ್ನ; ಮಹಿಳೆ ಸಹಿತ ಇಬ್ಬರ ಬಂಧನ

Update: 2025-05-22 21:31 IST

ಮುಂಬೈ: ಬಾಲಿವುಡ್ ನಟ ಸಲ್ಮಾನ್‌ ಖಾನ್ ನಿವಾಸಕ್ಕೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ ಆರೋಪದಲ್ಲಿ ಓರ್ವ ಪುರುಷ ಹಾಗೂ ಇನ್ನೋರ್ವ ಮಹಿಳೆಯನ್ನು ಮುಂಬೈ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಈ ಆರೋಪಿಗಳು ಮಂಗಳವಾರ ಹಾಗೂ ಬುಧವಾರ ಪಶ್ಚಿಮ ಬಾಂದ್ರಾದಲ್ಲಿರುವ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಪ್ರವೇಶಿಸಲು ಪ್ರತ್ಯೇಕ ಯತ್ನಗಳನ್ನು ನಡೆಸಿದ್ದರು. ಆರೋಪಿಗಳನ್ನು ಜಿತೇಂದ್ರ ಕುಮಾರ್ ಸಿಂಗ್ (23) ಹಾಗೂ ಇಶಾ ಛಾಬ್ರಾ (32) ಎಂದು ಗುರುತಿಸಲಾಗಿದೆ.

ಚತ್ತೀಸ್‌ಗಡದ ನಿವಾಸಿಯಾದ ಜಿತೇಂದ್ರ ಸಿಂಗ್ ಮಂಗಳವಾರ ಬೆಳಗ್ಗೆ 9.45ರ ವೇಳೆಗೆ ಸಲ್ಮಾನ್ ಖಾನ್ ನಿವಾಸದ ಸುತ್ತಲೂ ತಿರುಗಾಡುತ್ತಿರುವುದು ಕಂಡುಬಂದಿತ್ತು. ನಟನ ಭದ್ರತೆಗಾಗಿ ನಿಯೋಜಿತರಾಗಿದ್ದ ಪೊಲೀಸ್ ಒಬ್ಬರು, ಜಾಗ ಖಾಲಿ ಮಾಡುವಂತೆ ಸೂಚಿಸಿದಾಗ, ಆಕ್ರೋಶಗೊಂಡ ಆತ ತನ್ನ ಮೊಬೈಲ್ ಫೋನನ್ನು ನೆಲಕ್ಕೆ ಎಸೆದು ಹಿಂತಿರುಗಿದ್ದ.

ಅಂದು ಸಂಜೆ ಸಿಂಗ್ ಅದೇ ಕಟ್ಟಡದಲ್ಲಿ ವಾಸವಾಗಿದ್ದ ವ್ಯಕ್ತಿಯೊಬ್ಬರ ಸೇರಿದ ಕಾರಿನಲ್ಲಿ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಪ್ರವೇಶಿಸಿದ್ದ. ಆಗ ಮತ್ತೆ ತಡೆದ ಪೊಲೀಸ್ ಸಿಬ್ಬಂದಿಯು, ಆತನನ್ನು ಬಾಂದ್ರಾ ಪೊಲೀಸರಿಗೆ ಹಸ್ತಾಂತರಿಸಿದರು.

ತಾನು ಸಲ್ಮಾನ್‌ಖಾನ್ ಅವರನ್ನು ಭೇಟಿಯಾಗಲು ಬಯಸಿದ್ದಾಗಿ ಸಿಂಗ್ ವಿಚಾರಣೆಯ ವೇಳೆ ತಿಳಿಸಿದ್ದಾನೆ. ನಟನ ನಿವಾಸವಿರುವ ಕಟ್ಟಡವನ್ನು ಪ್ರವೇಶಿಸಲು ಅನುಮತಿ ನೀಡದೆ ಇರುವುದರಿಂದ ಆತ ಒಳನುಸುಳಲು ಯತ್ನಿಸಿದ್ದಾನೆಂದು ಅಧಿಕಾರಿ ತಿಳಿಸಿದ್ದಾರೆ.

ಗ್ಯಾಲಕ್ಸಿ ಅಪಾರ್ಟ್‌ಮೆಂಟ್ಸ್‌ನ ನಿವಾಸಿಯ ವಾಹನದೊಳಗೆ ಆತ ಹೇಗೆ ಸೇರಿಕೊಂಡನೆಂದು ತಕ್ಷಣವೇ ತಿಳಿದುಬಂದಿಲ್ಲ.

ಗುರುವಾರ ನಸುಕಿನಲ್ಲಿ 3.30ರ ವೇಳೆ ಛಾಬ್ರಾ ಎಂಬ ಯುವತಿ ಕೂಡಾ ಸಲ್ಮಾನ್ ನಿವಾಸಕ್ಕೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ್ದು, ಅಪಾರ್ಟ್‌ಮೆಂಟ್‌ನ ಲಿಫ್ಟ್‌ವರೆಗೂ ತಲುಪಲು ಸಫಲಳಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News