ಸ್ವಯಂಘೋಷಿತ ದೇವಮಾನವ ರಾಂಪಾಲ್‌ಗೆ ವಿಧಿಸಿದ್ದ ಜೀವಾವಧಿ ಶಿಕ್ಷೆ ಅಮಾನತು: ಹೈಕೋರ್ಟ್ ತೀರ್ಪು
10 ವರ್ಷಗಳ ಬಳಿಕ ಬಿಡುಗಡೆ
File Photo (credit: NDTV)
ಚಂಡೀಗಢ: ಐದು ಅನುಯಾಯಿಗಳ ಸಾವಿನ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಸ್ವಯಂಘೋಷಿತ ದೇವಮಾನವ ರಾಂಪಾಲ್ ಗೆ 2018ರಲ್ಲಿ ಹಿಸಾರ್ ಜಿಲ್ಲಾ ನ್ಯಾಯಾಲಯವು ವಿಧಿಸಿದ್ದ ಶಿಕ್ಷೆಯನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಅಮಾನತುಗೊಳಿಸಿದೆ.
2014ರ ನವೆಂಬರ್ 19ರಂದು ಹಿಸಾರ್ ಜಿಲ್ಲೆಯ ಬರ್ವಾಲಾ ಸತ್ಲೋಕ್ ಆಶ್ರಮದಲ್ಲಿ ರಾಂಪಾಲ್ ಬೆಂಬಲಿಗರು ಹಾಗೂ ಪೊಲೀಸರ ನಡುವೆ ನಡೆದ ಘರ್ಷಣೆಯಲ್ಲಿ ನಾಲ್ವರು ಮಹಿಳೆಯರು ಸೇರಿದಂತೆ ಐದು ಮಂದಿ ಅನುಯಾಯಿಗಳು ಮೃತಪಟ್ಟಿದ್ದರು.
ಈ ಹಿನ್ನೆಲೆಯಲ್ಲಿ, ರಾಂಪಾಲ್ ಹಾಗೂ ಬೆಂಬಲಿಗರ ವಿರುದ್ಧ ಕೊಲೆ, ಅಕ್ರಮ ಬಂಧನ ಮತ್ತು ಕ್ರಿಮಿನಲ್ ಪಿತೂರಿ ಪ್ರಕರಣಗಳು ದಾಖಲಾಗಿದ್ದವು.
2018ರಲ್ಲಿ ಹಿಸಾರ್ ಜಿಲ್ಲಾ ನ್ಯಾಯಾಲಯವು ಸೆಕ್ಷನ್ 302 (ಕೊಲೆ), 343 (ಅಕ್ರಮ ಬಂಧನ) ಹಾಗೂ 120ಬಿ (ಕ್ರಿಮಿನಲ್ ಪಿತೂರಿ) ಅಡಿಯಲ್ಲಿ ರಾಂಪಾಲ್ ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ರಾಂಪಾಲ್ ಈ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಮೇಲ್ಮನವಿಯನ್ನು ಸಲ್ಲಿಸಿದ್ದರು.
ನ್ಯಾಯಮೂರ್ತಿಗಳಾದ ಗುರ್ವಿಂದರ್ ಸಿಂಗ್ ಗಿಲ್ ಮತ್ತು ದೀಪಿಂದರ್ ಸಿಂಗ್ ನಲ್ವಾ ನೇತೃತ್ವದ ಪೀಠವು, ಸಾಕ್ಷ್ಯಾಧಾರಗಳ ಕೊರತೆಯಿಂದ ಶಿಕ್ಷೆಯನ್ನು ಅಮಾನತುಗೊಳಿಸಿದೆ.
ಸಾವಿನ ನಿಖರ ಕಾರಣದ ಬಗ್ಗೆ ಸಂಶಯವಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಅಶ್ರುವಾಯು ಶೆಲ್‌ಗಳಿಂದ ಉಸಿರುಗಟ್ಟುವ ಪರಿಸ್ಥಿತಿ ನಿರ್ಮಾಣವಾಗಿ ಕಾಲ್ತುಳಿತ ಸಂಭವಿಸಿದೆ, ಎಂದು ನ್ಯಾಯಾಲಯವು ತೀರ್ಪಿನಲ್ಲಿ ಉಲ್ಲೇಖಿಸಿದೆ.
74 ವರ್ಷದ ರಾಂಪಾಲ್ ಈಗಾಗಲೇ 10 ವರ್ಷ, 8 ತಿಂಗಳು, 21 ದಿನಗಳ ಜೈಲು ಶಿಕ್ಷೆಯನ್ನು ಅನುಭವಿಸಿದ್ದಾರೆ.13 ಇತರ ಆರೋಪಿಗಳು ಈಗಾಗಲೇ ಜಾಮೀನಿನ ಮೇಲೆ ಬಿಡುಗಡೆಯಾಗಿರುವುದನ್ನು ಗಮನದಲ್ಲಿಟ್ಟುಕೊಂಡು, ಹೈಕೋರ್ಟ್ ರಾಂಪಾಲ್ ರನ್ನು ಬಿಡುಗಡೆ ಮಾಡಿದೆ.
ಅನುಯಾಯಿಗಳನ್ನು ಉತ್ತೇಜಿಸುವ ಚಟುವಟಿಕೆಗಳಲ್ಲಿ ತೊಡಗಬಾರದು. ಅನುಯಾಯಿಗಳನ್ನು ಸೇರಿಸುವ ಸಭೆಗಳಲ್ಲಿ ಭಾಗವಹಿಸಬಾರದು ಎಂಬ ಷರತ್ತು ವಿಧಿಸಿ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಒಂದು ವೇಳೆ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದರೆ, ರಾಜ್ಯ ಸರ್ಕಾರ ಜಾಮೀನು ರದ್ದುಪಡಿಸಬಹುದಾಗಿದೆ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.