ಕಳಪೆ ಗುಣಮಟ್ಟದ ದಾಲ್ ವಿವಾದ: ಮುಂಬೈ ಎಂಎಲ್ಎ ಕ್ಯಾಂಟೀನ್ ನಲ್ಲಿ ಸಿಬ್ಬಂದಿಗೆ ಹಲ್ಲೆ ಮಾಡಿದ ಶಾಸಕ
Photo credit: NDTV
ಮುಂಬೈ: ಮುಂಬೈನ ಎಂಎಲ್ಎ ಕ್ಯಾಂಟೀನ್ ನಲ್ಲಿ ಬಡಿಸಿದ ದಾಲ್ (ಬೇಳೆ)ನ ಗುಣಮಟ್ಟ ಚೆನ್ನಾಗಿಲ್ಲ ಎಂದು ಮಹಾರಾಷ್ಟ್ರದ ಬುಲ್ದಾನಾ ಕ್ಷೇತ್ರದ ಶಾಸಕ ಸಂಜಯ್ ಗಾಯಕ್ವಾಡ್ ಅವರು, ಕ್ಯಾಂಟೀನ್ ನಿರ್ವಹಿಸುವ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚುನಾಯಿತ ಪ್ರತಿನಿಧಿಗಳ ನಡವಳಿಕೆ ಕುರಿತು ಗಂಭೀರ ಚರ್ಚೆ ಹುಟ್ಟು ಹಾಕಿದೆ.
ಚರ್ಚ್‌ಗೇಟ್ ನ ಆಕಾಶವಾಣಿ ಎಂಎಲ್ಎ ಕ್ಯಾಂಟೀನ್‌ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಶಾಸಕರು ತರಿಸಿದ ಊಟದ ಥಾಲಿಯಲ್ಲಿದ್ದ ದಾಲ್ ನಿಂದ ದುರ್ವಾಸನೆ ಬರುತ್ತಿದೆ ಎಂದು ಅವರು ದೂರಿದ್ದಾರೆ. ಸ್ವಲ್ಪವಷ್ಟೇ ದಾಲ್ ಸೇವಿಸಿದ ಬಳಿಕ ವಾಂತಿ ಬಂದ ಅನುಭವವಾಯಿತು ಎಂದು ಅವರು ಆರೋಪಿಸಿದ್ದಾರೆ.
ಈ ಸಂದರ್ಭ ಟವೆಲ್ ಸುತ್ತಿಕೊಂಡು ಕ್ಯಾಂಟೀನ್ ಗೆ ನೇರವಾಗಿ ತೆರಳಿದ ಶಾಸಕ, ಈ ದಾಲ್ ಅನ್ನು ಯಾರು ತಯಾರು ಮಾಡಿದ್ದಾರೆ ಎಂದು ಪ್ಯಾಕ್ ಮಾಡಲಾದ ದಾಲ್ ನ ವಾಸನೆಯನ್ನು ನೋಡುವಂತೆ ಸಿಬ್ಬಂದಿಗೆ ತೋರಿಸಿದ್ದಾರೆ. ಒಬ್ಬ ಶಾಸಕನಿಗೆ ನೀವು ಈ ಕಳಪೆ ಆಹಾರ ಕೊಡುತ್ತೀರಾದರೆ ಸಾಮಾನ್ಯ ವ್ಯಕ್ತಿಗೆ ಯಾವ ರೀತಿಯ ಆಹಾರ ಕೊಡುತ್ತಿರಬಹುದು ಎಂದು ಅವರು ಪ್ರಶ್ನಿಸಿದ್ದಾರೆ. ಇದನ್ನು ತಿಂದವರು ಸಾಯಬಹುದು ಎಂದು ಅವರು ಹೇಳಿದ್ದಾರೆ.
ವೈರಲ್ ವೀಡಿಯೊದಲ್ಲಿ, ಶಾಸಕರು ಕ್ಯಾಂಟೀನ್ ನಿರ್ವಹಿಸುವ ಸಿಬ್ಬಂದಿಗೆ ಈ ಕುರಿತು ಪ್ರಶ್ನಿಸಿ ಮುಖಕ್ಕೆ ಬಲವಾಗಿ ಗುದ್ದಿದ್ದಾರೆ. ಪರಿಣಾಮವಾಗಿ ಸಿಬ್ಬಂದಿ ನೆಲಕ್ಕೆ ಬಿದ್ದಿರುವುದು ಕಂಡುಬಂದಿದೆ.
ಈ ಕುರಿತು NDTV ಗೆ ಪ್ರತಿಕ್ರಿಯಿಸಿದ ಸಂಜಯ್ ಗಾಯಕ್ವಾಡ್, “ಅದು ಕೊಳೆತ ದಾಲ್. ಅಲ್ಲಿನ ಆಹಾರದ ಗುಣಮಟ್ಟ ವರ್ಷಗಳಿಂದ ಹಾಗೆಯೇ ಇದೆ. ವರ್ಷಗಳ ಕಾಲ ಸರಿ ಮಾಡುವಂತೆ ಹೇಳಿದ್ದರು ಯಾವುದೇ ಸುಧಾರಣೆ ಆಗಿಲ್ಲ. ಜನರ ಆರೋಗ್ಯದ ಜೊತೆ ಆಟವಾಡಲಾಗುತ್ತಿದೆ. ನನಗೆ ಆರೋಗ್ಯ ಸಮಸ್ಯೆ ಉಂಟಾದ ಬಳಿಕ ಮಾತ್ರ ನಾನು ಈ ಕ್ರಮಕ್ಕೆ ಮುಂದಾದೆ. ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ನಾನು ಗಾಂಧಿವಾದಿ ಅಲ್ಲ. ಬಾಳಾಸಾಹೇಬ್ ಠಾಕ್ರೆ ಕಲಿಸಿದ ಶೈಲಿಯೇ ನನ್ನದು. ಇದು ಶಿವಸೇನೆಯ ಶೈಲಿ . ಪದೇಪದೇ ಎಚ್ಚರಿಕೆ ಕೊಟ್ಟರೂ ಸುಧಾರಣೆಯಾಗದಿದ್ದಾಗ ಅಂತಿಮವಾಗಿ ನಾನು ಕಠಿಣ ರೀತಿಯಲ್ಲಿ ಪ್ರತಿಕ್ರಿಯಿಸಬೇಕಾಯಿತು. ನನಗೆ ಯಾವುದೇ ವಿಷಾದವಿಲ್ಲ. ನಾನು ಈ ವಿಷಯವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸುವೆ” ಎಂದು ಅವರು ಉಲ್ಲೇಖಿಸಿದರು.
ಈ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಕ್ಯಾಂಟೀನ್ ಗೆ ಭೇಟಿ ನೀಡುವ ಗ್ರಾಹಕರ ಪೈಕಿ ಹೆಚ್ಚಿನವರು ಆಹಾರದ ಗುಣಮಟ್ಟ ಉತ್ತಮಗೊಳ್ಳಬೇಕೆಂದು ಒತ್ತಾಯಿಸಿದರು. ಶಾಸಕರು ಹಲ್ಲೆ ಮಾಡಿದ್ದು ತಪ್ಪು ಎಂದು ಸಂಪೂರ್ಣವಾಗಿ ಖಂಡಿಸಿದ್ದಾರೆ. ಶಾಸಕರು ಹಲ್ಲೆಗೆ ಮುಂದಾಗಬಾರದಿತ್ತು ಎಂದೂ ಅವರು ಹೇಳಿದ್ದಾರೆ. ಕ್ಯಾಂಟೀನ್ ಸಿಬ್ಬಂದಿ ಹಲ್ಲೆ ಮಾಡಿದ್ದನ್ನು ಖಂಡಿಸಿದ್ದಾರೆ.