ಸಾವರ್ಕರ್ ಕುರಿತು ಹೇಳಿಕೆ | ರಾಹುಲ್ ಗಾಂಧಿ ಮುಖಕ್ಕೆ ಮಸಿ ಬಳಿಯುವುದಾಗಿ ಶಿವಸೇನಾ (ಯುಬಿಟಿ) ನಾಯಕನಿಂದ ಬೆದರಿಕೆ
ರಾಹುಲ್ ಗಾಂಧಿ | PC : PTI
ಹೊಸದಿಲ್ಲಿ: ವಿನಾಯಕ ದಾಮೋದರ್ ಸಾವರ್ಕರ್ ಕುರಿತು ಮಾನ ಹಾನಿಕರ ಹೇಳಿಕೆ ನೀಡಿರುವುದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮುಖಕ್ಕೆ ಮಸಿ ಬಳಿಯಲಾಗುವುದು ಎಂದು ಶಿವಸೇನಾ (ಯುಬಿಟಿ)ದ ಸ್ಥಳೀಯ ಪದಾಧಿಕಾರಿಯೊಬ್ಬರು ಬುಧವಾರ ಬೆದರಿಕೆ ಒಡ್ಡಿದ್ದಾರೆ.
ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾದ ನಾಸಿಕ್ ಘಟಕದ ಉಪಾಧ್ಯಕ್ಷರಾಗಿರುವ ಬಾಲಾ ದರಾಡೆ ಅವರ ಈ ಹೇಳಿಕೆ ಮಹಾ ವಿಕಾಸ ಅಘಾಡಿಗೆ ಧಕ್ಕೆ ಉಂಟು ಮಾಡುವ ಸಾಧ್ಯತೆ ಇದೆ.
ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಜನ್ಮಭೂಮಿಯಲ್ಲಿ ಜೀವಿಸುತ್ತಿರುವುದಕ್ಕೆ ನಮಗೆ ಹೆಮ್ಮೆ ಇದೆ. ಸಾವರ್ಕರ್ ಅವರನ್ನು ‘ಮಾಫಿ-ವೀರ್’ ಎಂದು ಉಲ್ಲೇಖಿಸಿರುವ ರಾಹುಲ್ ಗಾಂಧಿ ಅವರ ಹೇಳಿಕೆ ಅವಮಾನಕರ. ನಾವು ಈ ಹೇಳಿಕೆಯನ್ನು ಖಂಡಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಅವರು ನಾಸಿಕ್‌ಗೆ ಆಗಮಿಸಿದರೆ, ನಾವು ಅವರ ಮುಖಕ್ಕೆ ಮಸಿ ಬಳಿಯಲಿದ್ದೇವೆ. ಒಂದು ವೇಳೆ ನಮಗೆ ಹಾಗೆ ಮಾಡಲು ಸಾಧ್ಯವಾಗದೇ ಇದ್ದರೆ, ಅವರ ಬೆಂಗಾವಲು ವಾಹನಕ್ಕೆ ಕಲ್ಲೆಯಸಲಿದ್ದೇವೆ ಎಂದು ಅವರು ಹೇಳಿದ್ದಾರೆ.
ಶಿವಸೇನಾ (ಯುಬಿಟಿ) ಮಹಾ ವಿಕಾಸ ಅಘಾಡಿಯಲ್ಲಿ ಕಾಂಗ್ರೆಸ್‌ನ ಮಿತ್ರ ಪಕ್ಷ. ಅಲ್ಲದೆ, ಇವೆರೆಡೂ ‘ಇಂಡಿಯಾ’ದ ಸದಸ್ಯ ಪಕ್ಷಗಳಾಗಿವೆ.
ರಾಹುಲ್ ಗಾಂಧಿ ಅವರು ಸಾವರ್ಕರ್ ವಿರುದ್ಧ ನೀಡಿದ ಕೆಲವು ಹೇಳಿಕೆಗಳು ತನ್ನ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದೆ ಎಂದು ಪ್ರತಿಪಾದಿಸಿ ನಾಸಿಕ್ ನಿವಾಸಿ ದೇವೇಂದ್ರ ಭುಟಾಡಾ ಅವರು ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸಿದ್ದಾರೆ.
‘‘ಸಾವರ್ಕರ್ ಅವರ ವಿರುದ್ಧ ಯಾರೊಬ್ಬರೂ ನಿಂದನಾತ್ಮಕ ಭಾಷೆ ಬಳಸುವುದನ್ನು ನಾವು ಸಹಿಸುವುದಿಲ್ಲ. ಮಹಾ ವಿಕಾಸ ಅಘಾಡಿಯ ಭವಿಷ್ಯ ಏನೇ ಆಗಿರಲಿ, ಸಾವರ್ಕರ್ ಅವರಿಗೆ ಅವಮಾನ ಅಗುವುದನ್ನು ನಾವು ಸಹಿಸಲಾರೆವು’’ ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸೇನಾ (ಯುಬಿಟಿ) ವಕ್ತಾರೆ ಸುಶ್ಮಾ ಅಂಧಾರೆ ಅವರು, ದರಾಡೆ ಅವರ ನಿಲುವು ಅವರ ಸ್ವಂತದ್ದು. ಅದು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾದ ಅಭಿಪ್ರಾಯಲ್ಲ ಎಂದಿದ್ದಾರೆ.