×
Ad

24 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಸರಣಿ ಹಂತಕನ ಬಂಧನ!

Update: 2025-07-06 15:18 IST

Photo credit: NDTV

ಹೊಸದಿಲ್ಲಿ: ಕ್ಯಾಬ್ ಚಾಲಕರನ್ನು ಗುರಿಯಾಗಿಸಿಕೊಂಡು ಅವರನ್ನು ಹತ್ಯೆಗೈದು, ನಂತರ ಅವರ ವಾಹನಗಳನ್ನು ಮಾರಾಟ ಮಾಡುತ್ತಿದ್ದ ಸರಣಿ ಹಂತಕನೊಬ್ಬ 24 ವರ್ಷಗಳ ನಂತರ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ದಿಲ್ಲಿ ಅಪರಾಧ ವಿಭಾಗದ ಪೊಲೀಸರು ಅಜಯ್ ಲಂಬಾ ಎಂಬ ಆರೋಪಿಯನ್ನು ಬಂಧಿಸಿದ್ದು, ಆತ ನಾಲ್ಕು ಹತ್ಯೆ ಮತ್ತು ದರೋಡೆ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಿದ್ದ ಆರೋಪಿಯಾಗಿದ್ದ. ಆತ ಕಳೆದ ಸುಮಾರು ಎರಡು ದಶಕಗಳಿಂದ ತಲೆಮರೆಸಿಕೊಂಡಿದ್ದ ಎಂದು ವರದಿಯಾಗಿದೆ.

ಆರೋಪಿ ಲಂಬಾ ಹಾಗೂ ಆತನ ಸಹಚರರು ಟ್ಯಾಕ್ಸಿಯನ್ನು ಬಾಡಿಗೆ ಪಡೆದು, ಉತ್ತರಾಖಂಡಕ್ಕೆ ಪ್ರಯಾಣಿಸುತ್ತಿದ್ದರು. ನಂತರ, ಟ್ಯಾಕ್ಸಿ ಚಾಲಕನ ಪ್ರಜ್ಞೆ ತಪ್ಪಿಸುತ್ತಿದ್ದ ಅವರು, ಆತನನ್ನು ಉಸಿರುಗಟ್ಟಿಸಿ ಕೊಂದು, ಮೃತದೇಹವನ್ನು ಗಿರಿ ಪ್ರದೇಶಗಳಲ್ಲಿ ವಿಸರ್ಜಿಸುತ್ತಿದ್ದರು. ಇದಾದ ಬಳಿಕ ಗಡಿಯಿಂದ ಟ್ಯಾಕ್ಸಿಯನ್ನು ಕಳ್ಳಸಾಗಣೆ ಮಾಡುತ್ತಿದ್ದ ಆರೋಪಿಗಳು, ಅದನ್ನು ನೇಪಾಳದಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಹೇಳಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ದಿಲ್ಲಿ ಉಪ ಪೊಲೀಸ್ ಆಯುಕ್ತ ಆದಿತ್ಯ ಗೌತಮ್, “ದರೋಡೆಕೋರ ಹಾಗೂ ಹಂತಕನಾದ ಆರೋಪಿಯು, 2001ರಲ್ಲಿ ದಿಲ್ಲಿ, ಉತ್ತರ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ತನ್ನ ಸಹಚರರೊಂದಿಗೆ ಟ್ಯಾಕ್ಸಿಯನ್ನು ಬಾಡಿಗೆ ಪಡೆದು, ಟ್ಯಾಕ್ಸಿ ಚಾಲಕರನ್ನೇ ಗುರಿಯಾಗಿಸಿಕೊಂಡು ನಾಲ್ಕು ಭೀಕರ ಹತ್ಯೆ ಮತ್ತು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಟ್ಯಾಕ್ಸಿಗಳನ್ನು ತನ್ನ ಸಹಚರರೊಂದಿಗೆ ಬಾಡಿಗೆ ಪಡೆಯುತ್ತಿದ್ದ ಆತ, ನಂತರ ಟ್ಯಾಕ್ಸಿ ಚಾಲಕರನ್ನು ಹತ್ಯೆಗೈದು, ಮೃತ ದೇಹಗಳು ಪತ್ತೆಯಾಗುವುದನ್ನು ತಪ್ಪಿಸಲು ದೂರದ ಕಣಿವೆ ಪ್ರದೇಶಗಳಲ್ಲಿ ವಿಲೇವಾರಿ ಮಾಡುತ್ತಿದ್ದ” ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇನ್ನೂ ಹಲವು ಹತ್ಯೆಗಳಲ್ಲಿ ಲಂಬಾ ಹಾಗೂ ಆತನ ತಂಡದ ಸದಸ್ಯರು ಭಾಗಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮೃತಪಟ್ಟಿರುವ ಮೂವರು ಸಂತ್ರಸ್ತ ಚಾಲಕರ ಪೈಕಿ, ಈವರೆಗೆ ಕೇವಲ ಓರ್ವ ಚಾಲಕನ ಮೃತದೇಹವನ್ನು ಮಾತ್ರ ವಶಪಡಿಸಿಕೊಳ್ಳಲಾಗಿದೆ. ಇದಕ್ಕೂ ಮುನ್ನ, ಲಂಬಾ ತಂಡದ ಇಬ್ಬರು ಸದಸ್ಯರನ್ನು ಬಂಧಿಸಲಾಗಿತ್ತು. ಇದೀಗ ತಮ್ಮ ವಶದಲ್ಲಿರುವ ಲಂಬಾನನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

48 ವರ್ಷದ ಲಂಬಾ ದಿಲ್ಲಿಯ ನಿವಾಸಿಯಾಗಿದ್ದು, ಆರನೆ ತರಗತಿ ವಿದ್ಯಾರ್ಥಿಯಾಗಿದ್ದಾಗಲೇ ಶಾಲೆ ತೊರೆದಿದ್ದ ಎನ್ನಲಾಗಿದೆ. ನಂತರ, ಉತ್ತರ ಪ್ರದೇಶದ ಬರೇಲಿಗೆ ಸ್ಥಳಾಂತರಗೊಂಡಿದ್ದ ಆತ, ಕ್ಯಾಬ್ ಚಾಲಕರ  ಹತ್ಯೆಗೆ ಧೀರೇಂದ್ರ ಹಾಗೂ ದಿಲೀಪ್ ನೇಗಿ ಎಂಬ ಆರೋಪಿಗಳೊಂದಿಗೆ ಕೈಜೋಡಿಸಿದ್ದ. ಲಂಬಾ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪವೂ ಸೇರಿದಂತೆ ಹಲವು ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News