ಲೈಂಗಿಕ ದೌರ್ಜನ್ಯ ಆರೋಪಿಯನ್ನು ಪೊಲೀಸ್ ಠಾಣೆಯಿಂದ ಹೊರಗೆಳೆದು ಗುಂಪು ಹತ್ಯೆ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಹಲವಾರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪವನ್ನು ಎದುರಿಸುತ್ತಿದ್ದ 19 ವರ್ಷದ ವ್ಯಕ್ತಿಯೊಬ್ಬನನ್ನು ಗುಂಪೊಂದು ಶುಕ್ರವಾರ ಮಧ್ಯಾಹ್ನ ಅರುಣಾಚಲಪ್ರದೇಶದ ಲೋವರ್ ದಿಬಂಗ್ ವ್ಯಾಲಿ ಜಿಲ್ಲೆಯ ರೊಯಿಂಗ್ ಪೊಲೀಸ್ ಠಾಣೆಯ ಹೊರಗೆ ಥಳಿಸಿ ಹತ್ಯೆ ಮಾಡಿದೆ.
ಅಸ್ಸಾಮ್ ನ ವಲಸೆ ಕಾರ್ಮಿಕ ಎನ್ನಲಾದ ಆರೋಪಿಯು ಶಾಲೆಯೊಂದರ ಸಮೀಪದ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಕೆಲಸ ಮಾಡುತ್ತಿದ್ದನು ಎನ್ನಲಾಗಿದೆ. ಅವನು ಆರು ಮತ್ತು ಒಂಭತ್ತು ವರ್ಷಗಳ ನಡುವಿನ ಕನಿಷ್ಠ ಏಳು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
‘‘ಶುಕ್ರವಾರ ಮಧ್ಯಾಹ್ನ 2:30- 3 ಗಂಟೆಯ ಸುಮಾರಿಗೆ 500-600 ರಷ್ಟಿದ್ದ ಜನರು ಪೊಲೀಸ್ ಠಾಣೆಯ ಎದುರು ಜಮಾಯಿಸಿದರು. ಅವರು ಪೊಲೀಸ್ ಠಾಣೆಯ ದ್ವಾರವನ್ನು ಮುರಿದು ಒಳಗೆ ನುಗ್ಗಿದರು. ನಾವು ಅವರನ್ನು ತಡೆಯಲು ಪ್ರಯತ್ನಿಸಿದೆವು. ಆದರೆ, ಅವರು ಆರೋಪಿಯನ್ನು ಹೊರಗೆ ಎಳೆದು ಥಳಿಸಿ ಕೊಂದರು’’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.