×
Ad

ಕೇರಳ ವಿಶ್ವವಿದ್ಯಾನಿಲಯಗಳ ‘‘ಕೇಸರೀಕರಣ’’ವಿರೋಧಿಸಿ ಎಸ್ಎಫ್ಐ ಪ್ರತಿಭಟನೆ

Update: 2025-07-08 21:29 IST

PC : PTI 

ತಿರುವನಂತಪುರಂ: ಸಂಘ ಪರಿವಾರದ ಒತ್ತಡಕ್ಕೊಳಗಾಗಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ‘‘ಕೇಸರೀಕರಣಗೊಳಿಸುವ’’ಪ್ರಯತ್ನಗಳನ್ನು ವಿರೋಧಿಸಿ ಮಂಗಳವಾರ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್ಎಫ್ಐ)ದ ಕಾರ್ಯಕರ್ತರು ಕೇರಳದ ಪ್ರಮುಖ ವಿಶ್ವವಿದ್ಯಾನಿಲಯಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ.

ಪ್ರತಿಭಟನಾಕಾರರು, ವಿಶ್ವವಿದ್ಯಾನಿಲಯಗಳ ಕುಲಪತಿಯೂ ಆಗಿರುವ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ವಿರುದ್ಧ ಘೋಷಣೆಗಳನ್ನು ಕೂಗಿದರು.

ಪ್ರತಿಭಟನಾಕಾರರು ಕಣ್ಣೂರು ವಿಶ್ವವಿದ್ಯಾನಿಲಯದ ಹೊರಗಡೆ ಪೊಲೀಸ್ ತಡೆಬೇಲಿಗಳನ್ನು ಸರಿಸಿ ಮುನ್ನಡೆದರು. ಆಗ ಪೊಲೀಸರು ಜಲಫಿರಂಗಿ ಧಾರೆಯನ್ನು ಹರಿಸಿ ವಿದ್ಯಾರ್ಥಿಗಳನ್ನು ಚದುರಿಸಲು ಪ್ರಯತ್ನಿಸಿದರು. ಆದರೆ, ಉಪಕುಲಪತಿಯ ಕಚೇರಿ ತಲುಪುವಲ್ಲಿ ಯಶಸ್ವಿಯಾದ ಅವರು ಅಲ್ಲಿ ಧರಣಿ ನಡೆಸಿದರು.

ಕ್ಯಾಲಿಕಟ್ ವಿಶ್ವವಿದ್ಯಾನಿಲಯದಲ್ಲೂ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಜಟಾಪಟಿ ನಡೆಯಿತು.

ತಿರುವನಂತಪುರಂನಲ್ಲಿರುವ ಕೇರಳ ವಿಶ್ವವಿದ್ಯಾನಿಲಯದಲ್ಲಿ ಪ್ರವೇಶ ದ್ವಾರದ ಬಾಗಿಲನ್ನು ಬಲವಂತವಾಗಿ ತೆರೆದ ಪ್ರತಿಭಟನಾಕಾರರು ಒಳಗೆ ಪ್ರವೇಶಿಸಿ ರಾಜ್ಯಪಾಲ ಮತ್ತು ಉಪಕುಲಪತಿ ಮೋಹನನ್ ಕುನ್ನುಮ್ಮಲ್ ವಿರುದ್ಧ ಘೋಷಣೆಗಳನ್ನು ಕೂಗಿದರು.

ಕ್ಯಾಲಿಕಟ್ ಮತ್ತು ಕೇರಳ ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳು ಸಂಘ ಪರಿವಾರದ ಸಿದ್ಧಾಂತಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ರಾಜೀನಾಮೆ ನೀಡುವಂತೆ ಅವರನ್ನು ಒತ್ತಾಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News