×
Ad

ಶಬರಿಮಲೆ ಚಿನ್ನ ನಾಪತ್ತೆ ಪ್ರಕರಣ: ದೇಗುಲದ ತಂತ್ರಿ ಪೊಲೀಸ್ ವಶಕ್ಕೆ

Update: 2026-01-09 20:12 IST

photo credit: PTI

ತಿರುವನಂತಪುರ,ಜ.9: ಶಬರಿಮಲೆ ಅಯ್ಯಪ್ಪ ದೇವಾಲಯದಲ್ಲಿ ಚಿನ್ನ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ಬೆಳವಣಿಗೆಯೊಂದರಲ್ಲಿ ದೇಗುಲದ ತಂತ್ರಿ ಕಂಡರಾರು ರಾಜೀವಾರು ಅವರನ್ನು ಶುಕ್ರವಾರ ಕೇರಳ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ರಾಜೀವಾರು ಅವರನ್ನು ವಿಶೇಷ ತನಿಖಾ ತಂಡವು ವಿಚಾರಣೆಗಾಗಿ ತಿರುವನಂತಪುರಕ್ಕೆ ಕರೆಸಿಕೊಂಡಿತ್ತು. ಅವರನ್ನು ವಿಚಾರಣೆಗೊಳಪಡಿಸಿದ ಬಳಿಕ ಅವರನ್ನು ಬಂಧಿಸಲಾಯಿತೆಂದು ವರದಿಗಳು ತಿಳಿಸಿವೆ.

ದೇವಾಲಯದಲ್ಲಿ ಅಳವಡಿಸಲಾಗಿದ್ದ ಬಂಗಾರದ ಲೇಪಗಳನ್ನು ರಿಪೇರಿಗಾಗಿ ತೆಗೆಯುವುದಕ್ಕೆ ತಾನು ಅನುಮತಿ ನೀಡಿದ್ದೆ. ಆದರೆ ಅದನ್ನು ದೇವಾಲಯದ ಆವರಣದಿಂದ ಹೊರಗೆ ಕೊಂಡೊಯ್ಯಲಾಗುತ್ತಿದೆಯೆಂಬುದು ತನಗೆ ತಿಳಿದಿರಲಿಲ್ಲವೆಂದು ಕಂಡರಾರು, ತನಿಖಾ ತಂಡಕ್ಕೆ ತಿಳಿಸಿದ್ದಾರೆನ್ನಲಾಗಿದೆ.

ಶಬರಿಮಲೆ ಚಿನ್ನ ನಾಪತ್ತೆ ವಿವಾದದಲ್ಲಿ ಓರ್ವ ‘ ದೈವಿಕ ವ್ಯಕ್ತಿ’ ಹಾಗೂ ‘ಸಸ್ಯಾಹಾರಿ’ ಶಾಮೀಲಾಗಿದ್ದಾನೆಂದು ತಿರುವಾಂಕೂರು ದೇವಸ್ವಂ ಮಂಡಳಿಯ ಮಾಜಿ ಅಧ್ಯಕ್ಷ ಎ. ಪದ್ಮಕುಮಾರ್ ಕೆಲವು ದಿನಗಳ ಹಿಂದೆಯಷ್ಟೇ ತಿಳಿಸಿದ್ದರು. ಪದ್ಮಕುಮಾರ್ ಅವರು ತಂತ್ರಿಯವರನ್ನೇ ಪ್ರಸ್ತಾವಿಸಿ ಈ ಮಾತುಗಳನ್ನಾಡಿದ್ದಾರೆಂಬ ಊಹಾಪೋಹಗಳುಂಟಾಗಿದ್ದವು.

ಅಲ್ಲದೆ, ರಾಜೀವಾರು ಅವರಿಗೆ ಪ್ರಕರಣದ ಪ್ರಮುಖ ಆರೋಪಿ ಬೆಂಗಳೂರು ಮೂಲದ ಉನ್ನಿಕೃಷ್ಣನ್ ಪೊಟ್ಟಿ ಜೊತೆ ವೈಯಕ್ತಿಕ ನಂಟುಗಳಿರುವುದು ಕೂಡ ತಿಳಿದುಬಂದಿದೆ.

ರಾಜೀವಾರು ಅವರು ಶಬರಿ ಮಲೆ ಅಯ್ಯಪ್ಪ ದೇವಾಲಯದ ತಂತ್ರಿಗಳ ಕುಟುಂಬ ‘ತಾಳಮನ ಮಡೊಮ್‌ನ ಹಿರಿಯ ಸದಸ್ಯರು. ಸಂಪ್ರದಾಯದ ಪ್ರಕಾರ ಈ ಕುಟುಂಬದ ಹಿರಿಯ ವ್ಯಕ್ತಿ, ದೇವಾಲಯದ ಧಾರ್ಮಿಕ ವಿಚಾರಗಳಲ್ಲಿ ಪರಮೋಚ್ಚ ಅಧಿಕಾರವನ್ನು ಹೊಂದಿರುತ್ತಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News