ಶಾರೂಖ್ ಖಾನ್, ದೀಪಿಕಾ ಪಡುಕೋಣೆ ಸೇರಿದಂತೆ ಆರು ಮಂದಿಯ ವಿರುದ್ಧ ಎಫ್ಐಆರ್; ಕಾರಣವೇನು
Photo credit: NDTV
ಭರತ್ ಪುರ್ (ರಾಜಸ್ಥಾನ): ಉತ್ಪಾದನಾ ದೋಷಗಳನ್ನು ಹೊಂದಿರುವ ಹ್ಯುಂಡೈ ಕಾರು ಖರೀದಿಸಿದ್ದ ರಾಜಸ್ಥಾನದ ಭರತ್ ಪುರ್ ನ ವ್ಯಕ್ತಿಯೊಬ್ಬರು, ಆ ಕಾರಿನ ರಾಯಭಾರಿಗಳಾಗಿದ್ದ ಬಾಲಿವುಡ್ ನಟರಾದ ಶಾರೂಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಸೇರಿದಂತೆ ಒಟ್ಟು ಆರು ಮಂದಿಯ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ.
ಈ ಸಂಬಂಧ ದೂರು ದಾಖಲಿಸಿರುವ ರಾಜಸ್ಥಾನದ ಭರತ್ ಪುರ್ ನಿವಾಸಿ ಕೀರ್ತಿ ಸಿಂಗ್ ಎಂಬವರು, ಹ್ಯುಂಡೈ ಕಾರನ್ನು ಖರೀದಿಸಿದಾಗಿನಿಂದಲೂ ಅದರಲ್ಲಿ ತಾಂತ್ರಿಕ ದೋಷ ಕಂಡು ಬರುತ್ತಿದೆ ಎಂದು ದೂರಿದ್ದಾರೆ. ಈ ಕುರಿತು ಪದೇ ಪದೇ ದೂರು ನೀಡಿದರೂ, ನನ್ನ ಸಮಸ್ಯೆಗಳನ್ನು ಕಾರು ಕಂಪನಿ ಪರಿಹರಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಭಾರತೀಯ ಕಾನೂನಿನ ಪ್ರಕಾರ, ಒಂದು ವೇಳೆ ತಾವು ಪ್ರಚಾರ ಮಾಡಿದ ಉತ್ಪನ್ನಗಳು ದೋಷಪೂರಿತವಾಗಿದ್ದರೆ ಅಥವಾ ದಾರಿ ತಪ್ಪಿಸುವಂತಿದ್ದರೆ, ಅಂತಹ ಉತ್ಪನ್ನಗಳ ರಾಯಭಾರಿಗಳ ವಿರುದ್ಧ ದೂರು ದಾಖಲಿಸಬಹುದಾದ್ದರಿಂದ, ಶಾರೂಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ವಿರುದ್ಧ ಎಪ್‌ಐಆರ್ ದಾಖಲಿಸಿಕೊಳ್ಳಿಲಾಗಿದೆ. ಗ್ರಾಹಕರ ರಕ್ಷಣಾ ಕಾಯ್ದೆ, 2019ರ ಪ್ರಕಾರ, ಸುಳ್ಳು ಅನುಮೋದನೆ ಅಥವಾ ದಾರಿ ತಪ್ಪಿಸುವ ಜಾಹೀರಾತುಗಳಲ್ಲಿ ಪಾಲ್ಗೊಂಡ ರಾಯಭಾರಿಗಳ ಮೇಲೆ ದಂಡ ವಿಧಿಸಲು ಕೇಂದ್ರ ಗ್ರಾಹಕರ ರಕ್ಷಣಾ ಪ್ರಾಧಿಕಾರಕ್ಕೆ ಅಧಿಕಾರ ನೀಡಲಾಗಿದೆ.
ಸಿನಿಮಾ ತಾರೆಯರು ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದುದರಿಂದ, ನಾನು ಆ ಕಾರನ್ನು ಖರೀದಿಸಿದೆ ಎಂದು ಕೀರ್ತಿ ಸಿಂಗ್ ಹೇಳಿಕೊಂಡಿದ್ದಾರೆ.
ಮೊದಲಿಗೆ ಈ ಪ್ರಕರಣವನ್ನು ಭರತ್ ಪುರ್ ನಲ್ಲಿನ 2ನೇ ಸಿಜೆಎಂ ನ್ಯಾಯಾಲಯದಲ್ಲಿ ಖಾಸಗಿ ದೂರನ್ನಾಗಿ ದಾಖಲಿಸಲಾಗಿತ್ತು. ಈ ಅರ್ಜಿಯನ್ನು ಆಧರಿಸಿ ನ್ಯಾಯಾಲಯವು ಮಥುರಾ ಗೇಟ್ ಪೊಲೀಸ್ ಠಾಣೆಗೆ ಎಫ್ಐಆರ್ ದಾಖಲಿಸಿಕೊಳ್ಳುವಂತೆ ನಿರ್ದೇಶನ ನೀಡಿದೆ. ನ್ಯಾಯಾಲಯದ ಸೂಚನೆಯನ್ನಾಧರಿಸಿ ಪೊಲೀಸರು ವಂಚನೆ ಹಾಗೂ ಇನ್ನಿತರ ಸೂಕ್ತ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.