×
Ad

ದುಬೈನಲ್ಲಿ 4,000 ಕೋಟಿ ರೂ.ಮೌಲ್ಯದ ‘ಕೈಗೆಟಕುವ’ ಆಸ್ತಿಯನ್ನು ಪ್ರಕಟಿಸಿದ ಶಾರುಕ್ ಖಾನ್

Update: 2025-11-15 20:16 IST

ಶಾರುಕ್ ಖಾನ್ | Photo Credit : PTI 

ಮುಂಬೈ,ನ.15: ಬಾಲಿವುಡ್ ನಟ ಶಾರುಕ್ ಖಾನ್ ಅವರು ಅಧಿಕೃತವಾಗಿ ಬಿಲಿಯಾಧೀಶನಾದ ಬಳಿಕ ಈಗ ದುಬೈನ ಮರಳಿನಲ್ಲಿ ತನ್ನ ಗುರುತನ್ನು ಸ್ಥಾಪಿಸಲು ಸಜ್ಜಾಗಿದ್ದಾರೆ. ದುಬೈನ ರಿಯಲ್ ಎಸ್ಟೇಟ್ ಕಂಪನಿ ಡ್ಯಾನುಬ್ ಪ್ರಾಪರ್ಟಿಸ್ ಶಾರುಕ್ ಹೆಸರಿನ ಗಗನಚುಂಬಿ ಕಟ್ಟಡವೊಂದನ್ನು ನಿರ್ಮಿಸಲು ತಾನು ಯೋಜಿಸಿರುವುದಾಗಿ ಇತ್ತೀಚಿಗೆ ಪ್ರಕಟಿಸಿದೆ. ‘ಶಾರುಕ್ಝ’ ಎಂದು ಕರೆಯಲ್ಪಡುವ ಈ ಆಸ್ತಿಯು ತನ್ನ ಮುಂಭಾಗದಲ್ಲಿ ಶಾರುಕ್ ಅವರ ಪ್ರತಿಮೆಯನ್ನೂ ಹೊಂದಿರಲಿದೆ.

ಮುಂಬೈನಲ್ಲಿ ಕಾರ್ಯಕ್ರವೊಂದರಲ್ಲಿ ಈ ವಿಷಯವನ್ನು ಪ್ರಕಟಿಸಿದ ಶಾರುಕ್,‘ನನ್ನ ತಾಯಿ ಬದುಕಿದ್ದರೆ ಇದನ್ನು ನೋಡಿ ಹೆಮ್ಮೆ ಪಡುತ್ತಿದ್ದರು’ ಎಂದು ಹೇಳಿದರು.‘ಇದು ಬಹು ದೊಡ್ಡ ಗೌರವ ಎಂದು ನಾನು ಭಾವಿಸಿದ್ದೇನೆ. ಈಗ ನಾನು ನನ್ನ ಮಕ್ಕಳೊಂದಿಗೆ ದುಬೈಗೆ ಭೇಟಿ ನೀಡಿದರೆ ಕಟ್ಟಡದತ್ತ ಬೆಟ್ಟು ಮಾಡಿ ‘ದೇಖೋ ಪಾಪಾ ಕಿ ಬಿಲ್ಡಿಂಗ್ ಹೈ(ನೋಡಿ ನಿಮ್ಮ ತಂದೆಯ ಕಟ್ಟಡ)’ ಎಂದು ಹೇಳುತ್ತೇನೆ. ಇದು ಅದ್ಭುತವಾಗಿದೆ ಎಂದು ನಾನು ಭಾವಿಸಿದ್ದು,ಕಳೆದೆರಡು ತಿಂಗಳುಗಳಿಂದಲೂ ಯೋಜನೆಯ ವಿವರಗಳನ್ನು ನೋಡುತ್ತಿದ್ದೇನೆ. ಎಲ್ಲವೂ ತುಂಬ ಸುಂದರವಾಗಿದೆ ಮತ್ತು ಅತ್ಯಾಧುನಿಕವಾಗಿದೆ’ ಎಂದರು.

ಡ್ಯಾನುಬ್‌ ನ ಈ ಆಸ್ತಿಯು ವಿಶೇಷವಾಗಿ ದುಬೈನಲ್ಲಿ ಹೊಸದಾಗಿ ತಮ್ಮ ಜೀವನವನ್ನು ಆರಂಭಿಸುವವರಿಗೆ ಅತ್ಯಂತ ಕೈಗೆಟಕುವ ಬೆಲೆಯಲ್ಲಿದೆ. ಇದು ಅವರಿಗೆ ಬಹು ದೊಡ್ಡ ವರದಾನವಾಗಲಿದೆ ಮತ್ತು ಸ್ಫೂರ್ತಿಯಾಗಲಿದೆ ಎಂದು ತಾನು ಆಶಿಸಿದ್ದೇನೆ ಎಂದು ಹೇಳಿದ ಅವರು, ಗಗನಚುಂಬಿ ಕಟ್ಟಡದ ಸಂಪೂರ್ಣ ಮೌಲ್ಯ ಸುಮಾರು 4,000 ಕೋಟಿ ರೂ.ಗಳಷ್ಟಿರಲಿದೆ ಎಂದು ತಿಳಿಸಿದರು.

ಕಟ್ಟಡಕ್ಕೆ ತನ್ನ ಹೆಸರನ್ನಿರಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ಶಾರುಕ್, ಇಂತಹ ಆಸ್ತಿಯೊಂದು ತನ್ನ ಹೆಸರನ್ನು ಹೊಂದಿರುವುದು ಇದೇ ಮೊದಲ ಸಲವಾಗಿದೆ ಎಂದು ಹೇಳಿದರು.

2029ರ ವೇಳೆಗೆ ಪೂರ್ಣಗೊಳ್ಳಲಿರುವ ಕಟ್ಟಡವು 10 ಲಕ್ಷ ಚದರಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಳ್ಳಲಿದೆ. ಇದು ನಿವಾಸಿಗಳಿಗಾಗಿ ಉಚಿತ ಕ್ಲಬ್‌ಗಳು, ಹೊರಾಂಗಣ ಲಾಂಜ್‌ ಗಳು,ಜಿಮ್‌ ಗಳು ಮತ್ತು ಹೆಲಿಪ್ಯಾಡ್‌ನಂತಹ 40ಕ್ಕೂ ಅಧಿಕ ಸೌಲಭ್ಯಗಳನ್ನು ಹೊಂದಿರಲಿದೆ. ಒಂದು ಲಕ್ಷ ಚದರಡಿಗಳ ಬಿಲ್ಟ್-ಅಪ್ ಏರಿಯಾ 56 ಅಂತಸ್ತುಗಳಲ್ಲಿ ಹರಡಿಕೊಳ್ಳಲಿದೆ. ಇಲ್ಲಿಯ ಫ್ಲ್ಯಾಟ್‌ಗಳ ಬೆಲೆ 4.2 ಕೋಟಿ ರೂ.ಗಳಿಂದ ಆರಂಭಗೊಳ್ಳಲಿದೆ ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News