×
Ad

ಬಲಪಂಥೀಯ ಚಿತ್ರಗಳಲ್ಲಿ ನಟಿಸಲು ಬಾಲಿವುಡ್ ನಟರು ಮುಂದೆ: ನಟ ಮುಹಮ್ಮದ್ ಜೀಶನ್ ಅಯ್ಯೂಬ್ ಟೀಕೆ

"ಕೆಲವು ನಟರು ತಮ್ಮ ಚಿತ್ರಗಳ ಮೂಲಕ ಸಮಾಜದಲ್ಲಿ ವಿಭಜನೆ ಮತ್ತು ಗಲಭೆಗಳನ್ನು ಉತ್ತೇಜಿಸುತ್ತಿದ್ದಾರೆ"

Update: 2025-09-30 17:16 IST

ನಟ ಮುಹಮ್ಮದ್ ಜೀಶನ್ ಅಯ್ಯೂಬ್ | Photo Credit : X\ @Mdzeeshanayyub 

ಮುಂಬೈ: ಶಾರುಖ್ ಖಾನ್ ಜೊತೆ ಸಹ ನಟನಾಗಿ ನಟಿಸಿರುವ ಬಾಲಿವುಡ್ ನಟ ಮುಹಮ್ಮದ್ ಜೀಶನ್ ಅಯ್ಯೂಬ್, ತಮ್ಮ ಸಹೋದ್ಯೋಗಿಗಳ ಬಗ್ಗೆ ತೀವ್ರ ಟೀಕೆ ಮಾಡಿದ್ದಾರೆ. ಅವರು ಕೆಲವು ತಾರೆಯರು ರಾಜಕೀಯೇತರರಾಗಿ ಇರುವಂತೆ ನಟಿಸುತ್ತಾರೆ. ಆದರೆ ತಮ್ಮ ಚಿತ್ರಗಳ ಮೂಲಕ ಸಮಾಜದಲ್ಲಿ ವಿಭಜನೆ ಮತ್ತು ಗಲಭೆಗಳನ್ನು ಉತ್ತೇಜಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಜೀಶನ್ ಅವರು ಈ ನಟರು ರಾಜಕೀಯ ಹಿನ್ನೆಲೆ ಇರುವ ಚಿತ್ರಗಳಿಂದ ದೂರವಿದ್ದು, ಬಲಪಂಥೀಯ ವಿಚಾರಧಾರೆಯ ಪ್ರಚಾರದ ಚಿತ್ರಗಳಲ್ಲಿ ನಟಿಸಲು ಯಾವಾಗಲೂ ಮುಂದಿರುತ್ತಾರೆ ಎಂದು ಹೇಳಿದ್ದಾರೆ.

ಜೀಶನ್ ಅವರು ಯಾವುದೇ ಉದಾಹರಣೆ ನೀಡದೆ ಕೆಲ ಚಿತ್ರಗಳನ್ನು ಟೀಕಿಸಿದ್ದು, “ಇವುಗಳ ಬಗ್ಗೆ ಯೋಚಿಸಿದಾಗ ನನ್ನ ರಕ್ತ ಕುದಿಯುತ್ತದೆ” ಎಂದು ಹೇಳಿದ್ದಾರೆ. ಮಾನವೀಯತೆಯ ಧ್ವನಿಯನ್ನು ಪ್ರತಿಬಿಂಬಿಸುವುದು ಮತ್ತು ನಟನೆಯ ಮೂಲಕ ಸತ್ಯವನ್ನು ತೋರಿಸುವುದು ಅತ್ಯಂತ ಮುಖ್ಯ ಎಂದು ಜೀಶನ್ ಅಭಿಪ್ರಾಯಪಟ್ಟಿದ್ದಾರೆ.

ನೋ ಟೈಮ್ ಯೂಟ್ಯೂಬ್ ಚಾನೆಲ್‌ನಲ್ಲಿ ನಡೆದ ಸಂದರ್ಶನದಲ್ಲಿ, ಜೀಶನ್ ಅವರು ತಮ್ಮ ನಟನೆಯ ಪಾಠಗಳನ್ನು ಹಿರಿಯ ಕಲಾವಿದರಿಂದ ಕಲಿತದ್ದನ್ನು ನೆನಪಿಸಿಕೊಂಡು, “ನಾಲ್ಕು ದಿನ ಹಸಿವಿನಿಂದ ಬಳಲದವನು ಬಡ ವ್ಯಕ್ತಿಯ ಅನುಭವವನ್ನು ನಿಜವಾಗಿಯೂ ತೋರಿಸಲು ಸಾಧ್ಯವಿಲ್ಲ. ನಟನೆ ಎಂದರೆ ವ್ಯಕ್ತಿಯ ಅನುಭವದ ಆಳತೆಯನ್ನು ತೋರಿಸುವುದು. ಸವಲತ್ತಿನಲ್ಲಿ ಬೆಳೆದವರು ಅದನ್ನು ಅರ್ಥಮಾಡಿಕೊಳ್ಳಲಾರರು” ಎಂದರು.

ರಾಜಕೀಯದ ಹಿನ್ನೆಲೆಯಿರುವ ಚಿತ್ರಗಳಲ್ಲಿ ನಟರು ಹಿಂದೇಟು ಹಾಕುವುದರ ಕುರಿತೂ ಅವರು ಮಾತನಾಡಿದ್ದಾರೆ. “ಇದೊಂದು ರೀತಿಯ ವಂಚನೆ. ನಾನು ಮೊದಲು ಈ ಸಮಾಜದ ಸದಸ್ಯ. ಸಮಾಜವೇ ನನ್ನ ಮೊದಲ ವೇದಿಕೆ. ಹಲವರು ತಮ್ಮ ನಟನೆಯ ಮೂಲಕ ಸತ್ಯವನ್ನು ಹುಡುಕುತ್ತಿರುವಂತೆ ತೋರುತ್ತಾರೆ. ಆದರೆ ರಾಜಕೀಯ ದವಿಚಾರ ಬಂದಾಗ ಹಿಂದೆ ಸರಿಯುತ್ತಾರೆ. ಅದೇ ನಟರನ್ನು ನಿರ್ದಿಷ್ಟ ಪಕ್ಷದ ರ್‍ಯಾಲಿ ಅಥವಾ ಬಲಪಂಥೀಯ ಚಿತ್ರಗಳಲ್ಲಿ ಕಾಣುತ್ತೇವೆ” ಎಂದು ಅವರು ವ್ಯಂಗ್ಯವಾಡಿದ್ದಾರೆ.

ಜೀಶನ್ ಗೆ ಅನ್ಯಾಯವನ್ನು ದೂರದಿಂದ ನೋಡುವ ವ್ಯಕ್ತಿಯಾಗುವುದರಲ್ಲಿ ಆಸಕ್ತಿಯಿಲ್ಲ. ಅದನ್ನು ತಡೆಯಲು ಸಾಧ್ಯವಿರುವ ಎಲ್ಲ ಪ್ರಯತ್ನವನ್ನು ಮಾಡುವುದಾಗಿ ಹೇಳಿದರು.

ಈ ವರ್ಷದ ಆರಂಭದಲ್ಲಿ, ನಾಗ್ಪುರದಲ್ಲಿ ಬಲಪಂಥೀಯ ಸಂಘಟನೆಗಳು ಮೊಘಲ್ ಚಕ್ರವರ್ತಿ ಔರಂಗಜೇಬ್ ಸಮಾಧಿಯನ್ನು ಒಡಿದುಹಾಕಲು ಒತ್ತಾಯಿಸಿದಾಗ ಹಿಂಸಾಚಾರ ನಡೆಯಿತು. ಐತಿಹಾಸಿಕ ಚಲನಚಿತ್ರ ಛಾವಾ ಬಿಡುಗಡೆಯಾದ ಬಳಿಕ ಈ ಗಲಭೆಗಳು ನಡೆದವು.

ಇತ್ತೀಚಿನ ಸಂದರ್ಶನದಲ್ಲಿ, ನಿರ್ದೇಶಕ ಅನುರಾಗ್ ಕಶ್ಯಪ್ ಅವರು ತಾವು ಛಾವಾ ಚಿತ್ರದ ಅಭಿಮಾನಿಯಲ್ಲ ಎಂದು ವಿಕ್ಕಿ ಅಭಿನಯದ ಬಗ್ಗೆ ಪ್ರತಿಕ್ರಿಯೆ ನೀಡುವುದರಿಂದ ಅಂತರ ಕಾಯ್ದುಕೊಂಡರು. ವಿಕ್ಕಿ ಮತ್ತು ಅನುರಾಗ್ ಕಶ್ಯಪ್ ಅವರು ಹಿಂದಿನ ಕೆಲವು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದರೂ, ಇತ್ತೀಚೆಗೆ ಅವರ ನಡುವೆ ಹೆಚ್ಚು ಮಾತುಕತೆ ನಡೆದಿಲ್ಲ.

“ಪ್ರತಿಯೊಬ್ಬರಿಗೂ ತಮ್ಮದೇ ಆದ ಕಾರಣಗಳಿವೆ. ನಾನು ನನ್ನ ಅಭಿಪ್ರಾಯವನ್ನು ಈಗಾಗಲೇ ಹೇಳಿದ್ದೇನೆ” ಎಂದು ಅನುರಾಗ್ ಅವರು ʼಲಲ್ಲಂಟಾಪ್‌ʼ ಗೆ ಪ್ರತಿಕ್ರಿಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News