ಕಡಿ, ವಿಸವದಾರ್ ಉಪ ಚುನಾವಣೆ | ಸೋಲಿನ ಹೊಣೆ ಹೊತ್ತು ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಶಕ್ತಿ ಸಿನ್ಹ ಗೋಹಿಲ್ ರಾಜೀನಾಮೆ
ಶಕ್ತಿ ಸಿನ್ಹ | Credit: X/@shaktisinhgohil
ಹೊಸದಿಲ್ಲಿ: ಕಡಿ ಹಾಗೂ ವಿಸವದಾರ್ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಹೊಣೆ ಹೊತ್ತು ಗುಜರಾತ್ ಕಾಂಗ್ರೆಸ್ ನಾಯಕ ಶಕ್ತಿ ಸಿನ್ಹ ಗೋಹಿಲ್ ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿ (ಜಿಪಿಸಿಸಿ) ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ರಾಜೀನಾಮೆ ನೀಡಿದ್ದಾರೆ.
ಕಡಿ ಹಾಗೂ ವಿಸವದಾರ್ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋತ ಬಳಿಕ ಗೋಹಿಲ್ ತನ್ನ ‘ಎಕ್ಸ್’ ಖಾತೆಯಲ್ಲಿ, ‘‘ನಾನು ಕಷ್ಟಪಟ್ಟು ಕೆಲಸ ಮಾಡಿದ್ದೇನೆ. ನಮ್ಮ ಪಕ್ಷಕ್ಕೆ ಅತ್ಯುತ್ತಮವಾದುದನ್ನು ನೀಡಲು ಯಾವಾಗಲೂ ಪ್ರಯತ್ನಿಸಿದ್ದೇನೆ. ದುರಾದೃಷ್ಟಕರ, ನಾವು ಇಂದು ಯಶಸ್ವಿಯಾಗಲಿಲ್ಲ. ನಾವು ವಿಸವದಾರ್ ಹಾಗೂ ಕಡಿ ಉಪ ಚುನಾವಣೆಯಲ್ಲಿ ಸೋತೆವು’’ ಎಂದಿದ್ದಾರೆ.
ತನ್ನ ರಾಜೀನಾಮೆ ಪ್ರಕಟಿಸಿದ ಗೋಹಿಲ್, ‘‘ನಮ್ಮ ಕಾಂಗ್ರೆಸ್ ಪಕ್ಷದ ನಿಜವಾದ ಆಶಯ ಹಾಗೂ ವೈಭವಯುತ ಸಂಪ್ರದಾಯಕ್ಕೆ ಅನುಗುಣವಾಗಿ ನಾನು ಈ ಸೋಲಿನ ನೈತಿಕ ಹೊಣೆಯನ್ನು ಹೊತ್ತಿದ್ದೇನೆ ಹಾಗೂ ಗುಜರಾತ್ ಕಾಂಗ್ರೆಸ್ನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ’’ ಎಂದು ಅವರು ಹೇಳಿದ್ದಾರೆ.
ನನಗೆ ಬೆಂಬಲ ನೀಡಿದ ಹಾಗೂ ನನ್ನ ಮೇಲೆ ನಂಬಿಕೆ ಇರಿಸಿದ ನಮ್ಮ ಪಕ್ಷದ ಎಲ್ಲಾ ನಾಯಕರು, ಪಕ್ಷದ ಅತ್ಯುತ್ತಮ ಕಾರ್ಯಕರ್ತ ಬಬ್ಬರ್ ಶೇರ್, ನನ್ನ ಹಿತೈಷಿಗಳು, ಮಾಧ್ಯಮ ಹಾಗೂ ಇತರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಯಾವುದೇ ಹುದ್ದೆ ಅಥವಾ ವ್ಯಕ್ತಿಗಿಂತ ನಮ್ಮ ಪಕ್ಷ ಹೆಚ್ಚು ಮುಖ್ಯವಾದುದು. ನಾನು ಕಾಂಗ್ರೆಸ್ ನ ಶಿಸ್ತಿನ ಸಿಪಾಯಿಯಾಗಿ ಮುಂದುವರಿಯುತ್ತೇನೆ ಎಂದು ಅವರು ಹೇಳಿದ್ದಾರೆ.