Jammu | ಹಿರಿಯ BJP ನಾಯಕನಿಂದ ಪ್ರತ್ಯೇಕ ರಾಜ್ಯದ ಪ್ರಸ್ತಾವ: ಕಾಶ್ಮೀರಿಗಳು ದೇಶಕ್ಕೆ ನಿಷ್ಠರಲ್ಲ ಎಂದ ಶಾಮ್ ಲಾಲ್ ಶರ್ಮ
ಅಂತರ ಕಾಯ್ದುಕೊಂಡ BJP
ಶಾಮ್ ಲಾಲ್ ಶರ್ಮ | Photo Credit : PTI
ಹೊಸದಿಲ್ಲಿ: ಕಾಶ್ಮೀರದ ಜನತೆ ದೇಶಕ್ಕೆ ನಿಷ್ಠರಲ್ಲ ಹಾಗೂ ಜಮ್ಮುವಿಗೆ ಪ್ರತ್ಯೇಕ ರಾಜ್ಯ ಸ್ಥಾನಮಾನ ನೀಡಬೇಕು ಎಂಬ ಹೇಳಿಕೆ ನೀಡುವ ಮೂಲಕ ಬಿಜೆಪಿಯ ಹಿರಿಯ ನಾಯಕ ಹಾಗೂ ಶಾಸಕ ಶಾಮ್ ಲಾಲ್ ಶರ್ಮ ರಾಜಕೀಯ ವಿವಾದಕ್ಕೆ ನಾಂದಿ ಹಾಡಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಮ್ ಲಾಲ್ ಶರ್ಮ, ಸಹಜವಾಗಿ ಶಾಂತಿಯುತವಾಗಿರುವ ಜಮ್ಮುವಿನ ವಾತಾವರಣವು ಕಾಶ್ಮೀರ ಕಣಿವೆಯಲ್ಲಿ ಪದೇ ಪದೇ ಉಂಟಾಗುವ ಪ್ರಕ್ಷುಬ್ಧತೆಯಿಂದ ತೊಂದರೆಗೀಡಾಗಿದೆ ಎಂದರು. ಜಮ್ಮುವನ್ನು ಪ್ರತ್ಯೇಕ ರಾಜ್ಯವನ್ನಾಗಿಸುವ ಮೂಲಕ ಅದನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಆಡಳಿತಾತ್ಮಕವಾಗಿ ಪ್ರಗತಿ ಪಥಕ್ಕೆ ಕೊಂಡೊಯ್ಯಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಕೇಂದ್ರಾಡಳಿತ ಪ್ರದೇಶದ ದೊಡ್ಡ ಪ್ರಮಾಣದ ಸಂಪನ್ಮೂಲಗಳಿಗೆ ಜಮ್ಮು ಕೊಡುಗೆ ನೀಡುತ್ತಿದೆ. ಹೀಗಿದ್ದೂ ಜಮ್ಮು ದಶಕಗಳಿಂದ ತಾರತಮ್ಯಕ್ಕೆ ಒಳಗಾಗಿದೆ. ಶೇ. 80ರಷ್ಟು ವಿದ್ಯುತ್ ಉತ್ಪಾದನೆ ಹಾಗೂ ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ ನಲ್ಲಿರುವ ಅಷ್ಟೇ ಪ್ರಮಾಣದ ಠೇವಣಿ ಜಮ್ಮುವಿನಿಂದ ಬರುತ್ತಿದೆ ಎಂದು ಅವರು ಹೇಳಿದರು. ಇದೇ ವೇಳೆ, ತಮ್ಮ ಅಭಿಪ್ರಾಯಗಳು ಕೇವಲ ಖಾಸಗಿ ದೃಷ್ಟಿಕೋನವನ್ನು ಮಾತ್ರ ಪ್ರತಿಬಿಂಬಿಸುತ್ತವೆ ಎಂದೂ ಅವರು ಸ್ಪಷ್ಟಪಡಿಸಿದರು.
ಶಾಮ್ ಲಾಲ್ ಶರ್ಮ ಅವರ ಹೇಳಿಕೆಯ ಬೆನ್ನಿಗೇ, ಬಿಜೆಪಿ ನಾಯಕತ್ವವು ಅಂತರ ಕಾಯ್ದುಕೊಂಡಿದ್ದು, ಅವರ ಹೇಳಿಕೆ ವೈಯಕ್ತಿಕ ಅಭಿಪ್ರಾಯವಷ್ಟೇ ಆಗಿದ್ದು, ಪಕ್ಷದ ಅಧಿಕೃತ ನಿಲುವನ್ನು ಪ್ರತಿನಿಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಈ ಹೇಳಿಕೆಗೆ ಜಮ್ಮು ಮತ್ತು ಕಾಶ್ಮೀರದ ಪ್ರಾದೇಶಿಕ ಪಕ್ಷಗಳಿಂದ ಬಲವಾದ ವಿರೋಧ ವ್ಯಕ್ತವಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ, ಜಮ್ಮುವನ್ನು ಬೇರ್ಪಡಿಸುವ ಚಿಂತನೆ ಬಾಲಿಶ ಎಂದು ತಳ್ಳಿ ಹಾಕಿ, ಜಮ್ಮು ಮತ್ತು ಕಾಶ್ಮೀರ ಪ್ರಾಂತ್ಯಗಳನ್ನು ಚಾರಿತ್ರಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.
ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾದ ಉಮರ್ ಅಬ್ದುಲ್ಲಾ ಕೂಡ ಈ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದು, ಬಿಜೆಪಿಯು ಲಡಾಖ್ ಅನ್ನು ಜಮ್ಮು ಮತ್ತು ಕಾಶ್ಮೀರದಿಂದ ಬೇರ್ಪಡಿಸುವ ಮೂಲಕ ಅದನ್ನು ಹಾಳುಗೆಡವಿದೆ ಎಂದು ಆರೋಪಿಸಿದರು. ಜಮ್ಮು ವಿಚಾರದಲ್ಲೂ ಇದೇ ರೀತಿಯ ನಡೆ ಅನುಸರಿಸಿದರೆ, ಅದೇ ತಪ್ಪಿನ ಪುನರಾವರ್ತನೆಯಾಗಲಿದೆ. ಈ ಪ್ರಸ್ತಾವವು ಕೋಮುವಾದಿ ಹಾಗೂ ಪ್ರಾದೇಶಿಕ ವಿಭಜನೆಯನ್ನು ಮತ್ತಷ್ಟು ಆಳವಾಗಿಸುವ ಅಪಾಯವಿದೆ ಎಂದು ಅವರು ಎಚ್ಚರಿಸಿದರು.
ಶಾಮ್ ಲಾಲ್ ಶರ್ಮ ಅವರ ಹೇಳಿಕೆಯನ್ನು ಟೀಕಿಸಿದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯ ಅಧ್ಯಕ್ಷೆ ಹಾಗೂ ಮಾಜಿ ಮುಖ್ಯಮಂತ್ರಿಯಾದ ಮೆಹಬೂಬಾ ಮುಫ್ತಿ, ಈ ಹೇಳಿಕೆಯು ಧಾರ್ಮಿಕ ಬೇರುಗಳನ್ನು ಹೊಂದಿದ್ದು, ಜಮ್ಮುವಿನ ಹಿಂದೂ ಬಹುಸಂಖ್ಯಾತ ಸ್ವರೂಪದೊಂದಿಗೆ ಸಂಪರ್ಕ ಹೊಂದಿದೆ ಎಂದು ಅಭಿಪ್ರಾಯಪಟ್ಟರು. ಮುಹಮ್ಮದ್ ಅಲಿ ಜಿನ್ನಾರ ದ್ವಿರಾಷ್ಟ್ರ ಸಿದ್ಧಾಂತವನ್ನು ತಿರಸ್ಕರಿಸಿದ ನಂತರ, 1947ರಲ್ಲಿ ಜಾತ್ಯತೀತತೆಯ ಆಧಾರದ ಮೇಲೆ ಭಾರತದ ಭಾಗವಾದ ಜಮ್ಮು ಮತ್ತು ಕಾಶ್ಮೀರವನ್ನು ಧಾರ್ಮಿಕ ನೆಲೆಯಲ್ಲಿ ವಿಭಜಿಸುವುದು ಅದರ ಜಾತ್ಯತೀತ ಆಧಾರಕ್ಕೆ ಧಕ್ಕೆಯಾಗಲಿದೆ ಎಂದು ಅವರು ಎಚ್ಚರಿಸಿದರು.
ಇಂತಹ ಪ್ರಸ್ತಾವಗಳು ಹಿಂದೂ ಮತ್ತು ಮುಸ್ಲಿಮರು ಒಂದೇ ರಾಜಕೀಯ ಘಟಕದಡಿ ಒಟ್ಟಾಗಿ ಇರಲು ಸಾಧ್ಯವಿಲ್ಲ ಎಂಬ ಭಾವನೆಯನ್ನು ಮರುಸ್ಥಾಪಿಸಲಿದೆ. ಬಿಜೆಪಿ, RSS ಮತ್ತು ಬಜರಂಗ ದಳಗಳು ಜಮ್ಮು ಮತ್ತು ಕಾಶ್ಮೀರವನ್ನು ವಿಭಜನಕಾರಿ ರಾಜಕೀಯ ಪ್ರಯೋಗಗಳ ಪ್ರಯೋಗ ಶಾಲೆಯನ್ನಾಗಿ ಬಳಸಿಕೊಳ್ಳುತ್ತಿವೆ ಎಂದು ಅವರು ಆರೋಪಿಸಿದರು.