ಉದ್ಘಾಟನೆ ಸಮಯದಲ್ಲಿ ನೂತನ ಸಂಸತ್ ಕಟ್ಟಡದೊಳಗೆ ಗೋ ಪ್ರವೇಶ ಮಾಡಿಸಬೇಕಿತ್ತು: ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ
ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ | PTI
ಮುಂಬೈ,ಆ.4: ಸೆಂಟ್ರಲ್ ವಿಸ್ಟಾದಲ್ಲಿ ನೂತನ ಸಂಸತ್ ಕಟ್ಟಡದ ಉದ್ಘಾಟನೆಯ ಸಂದರ್ಭದಲ್ಲಿ ಗೋವನ್ನು ಒಳಗೆ ಕರೆದೊಯ್ಯಬೇಕಿತ್ತು ಎಂದು ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ಹೇಳಿದ್ದಾರೆ.
ರವಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಸುವಿನ ಪ್ರತಿಮೆಯು ಸಂಸತ್ತನ್ನು ಪ್ರವೇಶಿಸಬಹುದಾದರೆ, ಜೀವಂತ ಹಸುವನ್ನು ಏಕೆ ಒಳಗೆ ಕರೆದೊಯ್ಯಬಾರದು ಎಂದು ಪ್ರಶ್ನಿಸಿದರು.
ನೂತನ ಸಂಸತ್ ಕಟ್ಟಡವನ್ನು ಪ್ರವೇಶಿಸುವಾಗ ಪ್ರಧಾನಿ ನರೇಂದ್ರ ಮೋದಿಯವರು ಹಿಡಿದುಕೊಂಡಿದ್ದ ಸೆಂಗೋಲ್ ರಾಜದಂಡದ ಮೇಲೆ ಗೋವಿನ ಕೆತ್ತನೆಯನ್ನು ತೋರಿಸಿತ್ತು ಎಂದು ಹೇಳಿದ ಅವರು,‘ಆಶೀರ್ವಾದಗಳನ್ನು ಪಡೆದುಕೊಳ್ಳಲು ನಿಜವಾದ ಹಸುವನ್ನು ಕಟ್ಟಡದೊಳಗೆ ಕರೆದೊಯ್ಯಬೇಕಿತ್ತು. ಸರಕಾರವು ಈಗಲಾದರೂ ಅದನ್ನು ಮಾಡಬೇಕು. ವಿಳಂಬವಾದರೆ ನಾವು ದೇಶಾದ್ಯಂತದ ಹಸುಗಳನ್ನು ಸಂಸತ್ತಿಗೆ ತರುತ್ತೇವೆ’ ಎಂದು ಹೇಳಿದರು. ಇದು ಪ್ರಧಾನಿಯವರಿಗೆ ಮತ್ತು ಸಂಸತ್ ಕಟ್ಟಡಕ್ಕೆ ನಿಜವಾದ ಹಸುವಿನ ಆಶೀರ್ವಾದಗಳನ್ನು ಖಚಿತಪಡಿಸುತ್ತದೆ ಎಂದರು.
ಸೆಂಗೋಲ್‌ನ್ನು ರಾಜ್ಯಸಭೆಯಲ್ಲಿ ಸ್ಥಾಪಿಸಲಾಗಿದೆ.
ಮಹಾರಾಷ್ಟ್ರ ಸರಕಾರವು ಗೋವಿಗೆ ಗೌರವ ಕುರಿತು ತಕ್ಷಣವೇ ಶಿಷ್ಟಾಚಾರವನ್ನು ರೂಪಿಸಬೇಕು ಎಂದು ಆಗ್ರಹಿಸಿದ ಶಂಕರಾಚಾರ್ಯರು,ಗೋವನ್ನು ಹೇಗೆ ಗೌರವಿಸಬೇಕು ಎನ್ನುವುದನ್ನು ಸರಕಾರವು ಇನ್ನೂ ಘೋಷಿಸಿಲ್ಲ. ಜನರು ಅದನ್ನು ಅನುಸರಿಸಲು ಸಾಧ್ಯವಾಗುವಂತೆ ಶಿಷ್ಟಾಚಾರವನ್ನು ಅಂತಿಮಗೊಳಿಸಬೇಕು ಮತ್ತು ಅದರ ಉಲ್ಲಂಘನೆಗೆ ದಂಡವನ್ನು ಸಹ ನಿಗದಿಗೊಳಿಸಬೇಕು ಎಂದರು.
ಭಾರತದ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ 100 ಹಸುಗಳಿಗೆ ಆಶ್ರಯ ನೀಡಲು ಒಂದು ‘ರಾಮಧಾಮ’ವನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿದ ಅವರು,ದೇಶಾದ್ಯಂತ ಒಟ್ಟು 4,123 ರಾಮಧಾಮಗಳನ್ನು ನಿರ್ಮಿಸಲಾಗುವುದು. ಇವು ದೈನಂದಿನ ಗೋಸೇವೆ,ರಕ್ಷಣೆ ಮತ್ತು ಸ್ವದೇಶಿ ತಳಿಗಳ ಉತ್ತೇಜನಕ್ಕೆ ಗಮನ ಹರಿಸುತ್ತವೆ ಎಂದರು.
ಹಸುಗಳನ್ನು ನೋಡಿಕೊಳ್ಳುವಾಗ ಶಿಷ್ಟಾಚಾರವನ್ನು ಅನುಸರಿಸುವವರಿಗೆ ನಗದು ಬಹುಮಾನ ನೀಡಲಾಗುವುದು. 100 ಹಸುಗಳನ್ನು ನೋಡಿಕೊಳ್ಳುವ ವ್ಯಕ್ತಿಗೆ ಮಾಸಿಕ ಎರಡು ಲಕ್ಷ ರೂ.ಗಳು ಲಭಿಸುತ್ತವೆ ಎಂದು ಅವರು ಹೇಳಿದರು.
ಗೋವನ್ನು ‘ರಾಷ್ಟ್ರಮಾತೆ’ ಎಂದು ಘೋಷಿಸುವಂತೆ ಆಗ್ರಹಿಸಿರುವ ಹೋಶಂಗಾಬಾದ್ ಸಂಸದ ದರ್ಶನ ಸಿಂಗ್ ಚೌಧರಿ ಅವರನ್ನು ಬೆಂಬಲಿಸಿ ಧರ್ಮ ಸಂಸದ್ ಅಭಿನಂದನಾ ನಿರ್ಣಯವನ್ನು ಅಂಗೀಕರಿಸಿದೆ ಎಂದೂ ಶ್ರೀಗಳು ತಿಳಿಸಿದರು.
‘ಗೋವುಗಳನ್ನು ರಕ್ಷಿಸುವ ಮತ್ತು ಅವುಗಳ ಹಿತಾಸಕ್ತಿಗಾಗಿ ಕಾನೂನು ರೂಪಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಅಭ್ಯರ್ಥಿಗಳನ್ನು ಮಾತ್ರ ಚುನಾವಣೆಗಳಲ್ಲಿ ಜನರು ಬೆಂಬಲಿಸಬೇಕು. ಪ್ರಸ್ತುತ ಆಡಳಿತವು ಇನ್ನೂ ನಮಗೆ ತೃಪ್ತಿಯನ್ನುಂಟು ಮಾಡಿಲ್ಲ. ಭಾರತದಲ್ಲಿ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು’ ಎಂದು ಹೇಳಿದರು.
‘ನಮಗೆ ಹಾಲು ನೀಡುವ ಹಸುಗಳನ್ನು ಹತ್ಯೆ ಮಾಡುತ್ತಿರುವಾಗ ಸರಕಾರವು ಅಮೃತ ಕಾಲವನ್ನು ಆಚರಿಸುತ್ತಿರುವುದು ಹಾಸ್ಯಾಸ್ಪದ. ಈ ಸರಕಾರದಲ್ಲಿರುವವರು ಹಸುಗಳ ಬೆಂಬಲಕ್ಕೆ ನಿಲ್ಲದಿದ್ದರೆ ಅವರನ್ನು ನಮ್ಮ ಸೋದರರು ಎಂದು ಕರೆಯುವುದು ಸಾಧ್ಯವಿಲ್ಲ’ ಎಂದರು.