×
Ad

ಬಿಹಾರದ ಚುನಾವಣೆಯಲ್ಲಿ ಸ್ಪರ್ಧಿಸಲು ಮಧ್ಯಂತರ ಜಾಮೀನು ಅರ್ಜಿ ಸಲ್ಲಿಸಿದ ಶರ್ಜೀಲ್ ಇಮಾಮ್

Update: 2025-10-14 14:50 IST

File Photo: PTI

ಹೊಸದಿಲ್ಲಿ: 2020ರ ದಿಲ್ಲಿ ಗಲಭೆಯ ಪಿತೂರಿ ಪ್ರಕರಣದ ಆರೋಪಿ, ವಿದ್ಯಾರ್ಥಿ ಹೋರಾಟಗಾರ ಶರ್ಜೀಲ್ ಇಮಾಮ್, ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಎರಡು ವಾರಗಳ ಮಧ್ಯಂತರ ಜಾಮೀನು ನೀಡುವಂತೆ ದಿಲ್ಲಿ ನ್ಯಾಯಾಲಯವನ್ನು ಕೋರಿದ್ದಾರೆ.

ಶರ್ಜೀಲ್ ಇಮಾಮ್ ಅವರು ಕಿಶನ್‌ಗಂಜ್ ಜಿಲ್ಲೆಯ ಬಹದ್ದೂರ್‌ಗಂಜ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಉದ್ದೇಶಿಸಿರುವುದಾಗಿ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ. ಈ ಅರ್ಜಿಯನ್ನು ದಿಲ್ಲಿಯ ಕರ್ಕಾರ್ಡೂಮಾ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಮೀರ್ ಬಾಜಪೇಯಿ ಅವರ ಮುಂದೆ ಸಲ್ಲಿಸಲಾಗಿದೆ.

ಬಿಹಾರದಲ್ಲಿ ನವೆಂಬರ್ 6 ಮತ್ತು 11ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ನವೆಂಬರ್ 14ರಂದು ಮತ ಎಣಿಕೆ ನಡೆಯಲಿದೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಅಕ್ಟೋಬರ್ 13ರಿಂದ 20ರವರೆಗೆ ನಡೆಯುವುದರಿಂದ, ಕ್ಷೇತ್ರದಲ್ಲಿ ಹಾಜರಿದ್ದು ನಾಮಪತ್ರ ಸಲ್ಲಿಸಲು ಅವಕಾಶ ಸಿಗುವಂತೆ ಮಧ್ಯಂತರ ಜಾಮೀನು ನೀಡಬೇಕು ಎಂದು ಶಾರ್ಜೀಲ್ ಇಮಾಮ್ ಮನವಿ ಮಾಡಿದ್ದಾರೆ.

ತಮ್ಮನ್ನು “ರಾಜಕೀಯ ಕೈದಿ ಮತ್ತು ವಿದ್ಯಾರ್ಥಿ ಹೋರಾಟಗಾರ” ಎಂದು ವಿವರಿಸಿರುವ ಶಾರ್ಜೀಲ್ ಇಮಾಮ್, ತಮಗೆ ಯಾವುದೇ ರಾಜಕೀಯ ಪಕ್ಷದ ಬೆಂಬಲವಿಲ್ಲದೆ ಸ್ವತಂತ್ರವಾಗಿ ಸ್ಪರ್ಧಿಸುತ್ತಿರುವುದಾಗಿ ಹೇಳಿದ್ದಾರೆ. ತಮ್ಮ ಅನಾರೋಗ್ಯಪೀಡಿತ ತಾಯಿಯನ್ನು ನೋಡಿಕೊಳ್ಳುತ್ತಿರುವ ಕಿರಿಯ ಸಹೋದರ ಮಾತ್ರ ಪ್ರಚಾರ ಮತ್ತು ನಾಮಪತ್ರ ಪ್ರಕ್ರಿಯೆಗೆ ಸಹಾಯ ಮಾಡಲು ಲಭ್ಯವಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

ಶರ್ಜೀಲ್ ಇಮಾಮ್ ಅವರು 2020ರ ಜನವರಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (CAA) ಮತ್ತು ಪ್ರಸ್ತಾವಿತ ರಾಷ್ಟ್ರೀಯ ನಾಗರಿಕರ ನೋಂದಣಿ (NRC) ವಿರೋಧಿಸಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ನೀಡಿದ ಭಾಷಣಗಳಿಗೆ ಸಂಬಂಧಿಸಿದಂತೆ ಬಂಧಿತರಾಗಿದ್ದರು. ಪೊಲೀಸರು ಅವರ ಭಾಷಣಗಳು ಮುಸ್ಲಿಂ ಸಮುದಾಯವನ್ನು ಪ್ರಚೋದಿಸಿ ಹಿಂಸಾಚಾರಕ್ಕೆ ಕಾರಣವಾದವು ಎಂದು ಆರೋಪಿಸಿದ್ದಾರೆ.

ಫೆಬ್ರವರಿ 2020ರಲ್ಲಿ ಈಶಾನ್ಯ ದಿಲ್ಲಿಯಲ್ಲಿ ಉಂಟಾದ ಗಲಭೆಯಲ್ಲಿ 53 ಮಂದಿ ಮೃತಪಟ್ಟು, ನೂರಾರು ಮಂದಿ ಗಾಯಗೊಂಡಿದ್ದರು. ಈ ಹಿಂಸಾಚಾರವು ಕೇಂದ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಉದ್ದೇಶದ ಪಿತೂರಿಯ ಭಾಗವಾಗಿತ್ತು ಎಂದು ದಿಲ್ಲಿ ಪೊಲೀಸರು ಆರೋಪಿಸಿದ್ದಾರೆ.

ಶರ್ಜೀಲ್ ಇಮಾಮ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA), ದೇಶದ್ರೋಹ, ಧಾರ್ಮಿಕ ಆಧಾರದ ಮೇಲೆ ದ್ವೇಷಕ್ಕೆ ಪ್ರಚೋದನೆ ಹಾಗೂ ರಾಷ್ಟ್ರೀಯ ಏಕೀಕರಣಕ್ಕೆ ಧಕ್ಕೆಯುಂಟುಮಾಡುವ ಹೇಳಿಕೆ ನೀಡಿದ ಆರೋಪ ಸೇರಿದಂತೆ ಅನೇಕ ಗಂಭೀರ ವಿಧಿಗಳಡಿ ಪ್ರಕರಣ ದಾಖಲಾಗಿದೆ.

ಸೆಪ್ಟೆಂಬರ್ 2ರಂದು ದಿಲ್ಲಿ ಹೈಕೋರ್ಟ್ ಶಾರ್ಜೀಲ್ ಇಮಾಮ್ ಅವರ ನಿಯಮಿತ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಬಳಿಕ ಅವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಸೆಪ್ಟೆಂಬರ್ 22ರಂದು ಸುಪ್ರೀಂ ಕೋರ್ಟ್ ದಿಲ್ಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿ, ಶಾರ್ಜೀಲ್ ಇಮಾಮ್ ಸೇರಿದಂತೆ ಇತರ ಆರೋಪಿಗಳ ಜಾಮೀನು ಅರ್ಜಿಗಳ ಕುರಿತು ಪ್ರತಿಕ್ರಿಯೆ ನೀಡುವಂತೆ ಸೂಚಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News