ಬಾಂಗ್ಲಾ ಮಧ್ಯಂತರ ಸರ್ಕಾರದಿಂದ ಹಸೀನಾ ನೇತೃತ್ವದ ‘ಅವಾಮಿ ಲೀಗ್’ ಪಕ್ಷಕ್ಕೆ ನಿಷೇಧ
ಶೇಖ್ ಹಸೀನಾ (Photo: PTI)
ಢಾಕಾ: ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ‘ಅವಾಮಿ ಲೀಗ್’ ಪಕ್ಷವನ್ನು ಭಯೋತ್ಪಾದನಾ ವಿರೋಧಿ ಕಾನೂನಿನ ಅಡಿಯಲ್ಲಿ ಮುಹಮ್ಮದ್ ಯೂನಸ್ ನೇತೃತ್ವದ ಬಾಂಗ್ಲಾ ಮಧ್ಯಂತರ ಸರ್ಕಾರವು ನಿಷೇಧಿಸಿದೆ.
ವಿದ್ಯಾರ್ಥಿಗಳ ನೇತೃತ್ವದಲ್ಲಿ ಹೊಸದಾಗಿ ರಚನೆಯಾದ ನ್ಯಾಷನಲ್ ಸಿಟಿಜನ್ ಪಾರ್ಟಿ (ಎನ್‌ಸಿಪಿ) ಕಾರ್ಯಕರ್ತರು ‘ಭಯೋತ್ಪಾದಕ ಚಟುವಟಿಕೆಗಳು ಮತ್ತು ಸರ್ವಾಧಿಕಾರಿ ಆಡಳಿತ ನಡೆಸಿದ ಆರೋಪದ ಮೇರೆಗೆ ಅವಾಮಿ ಲೀಗ್ ಪಕ್ಷವನ್ನು ನಿಷೇಧಿಸಬೇಕುʼ ಎಂದು ಆಗ್ರಹಿಸಿ ಗುರುವಾರ ಢಾಕಾದಾದ್ಯಂತ ಪ್ರತಿಭಟನೆ ನಡೆಸಿದ್ದರು. ಇದಾದ ಬಳಿಕ ಪಕ್ಷವನ್ನು ನಿಷೇಧಿಸುವ ಘೋಷಣೆ ಹೊರಬಿದ್ದಿದೆ.
ಈ ಸಂಬಂಧ ಅಧಿಕೃತ ಗೆಜೆಟ್ ಅಧಿಸೂಚನೆಯನ್ನು ಶೀಘ್ರದಲ್ಲಿಯೇ ಹೊರಡಿಸಲಾಗುವುದು ಎಂದು ಮಧ್ಯಂತರ ಸರ್ಕಾರ ತಿಳಿಸಿದೆ.
ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯಲ್ಲಿ ಅವಾಮಿ ಲೀಗ್ ಮತ್ತು ಅದರ ನಾಯಕರ ವಿಚಾರಣೆ ಪೂರ್ಣಗೊಳ್ಳುವವರೆಗೆ ದೇಶದ ಭದ್ರತೆ ಮತ್ತು ಸಾರ್ವಭೌಮತ್ವವನ್ನು ರಕ್ಷಿಸುವ ಹಿತದೃಷ್ಟಿಯಿಂದ ನಿಷೇಧವು ಜಾರಿಯಲ್ಲಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪಕ್ಷವನ್ನು ನಿಷೇಧಿಸುವ ನಿರ್ಧಾರ ತೆಗೆದುಕೊಳ್ಳುವ ಮೊದಲು ಸರ್ಕಾರವು ವಿವಿಧ ರಾಜಕೀಯ ಪಕ್ಷಗಳೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದೆ ಎಂದು ಹೇಳಿಕೆ ತಿಳಿಸಿದೆ.