×
Ad

ಶಿಮ್ಲಾ ಮಸೀದಿ ವಿರುದ್ಧ ಹಿಂಸಾತ್ಮಕ ಪ್ರತಿಭಟನೆ: ಬಿಜೆಪಿ, ವಿಹಿಂಪ ಸದಸ್ಯರು ಸೇರಿದಂತೆ ಕನಿಷ್ಠ 50 ಮಂದಿಯ ವಿರುದ್ಧ ಪ್ರಕರಣ ದಾಖಲು

Update: 2024-09-16 17:31 IST

Photo Credit: ANI

ಶಿಮ್ಲಾ(ಹಿ.ಪ್ರ: ಇಲ್ಲಿಯ ಸಂಜಾವುಲಿ ಪ್ರದೇಶದಲ್ಲಿ ಅಕ್ರಮವಾಗಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಆರೋಪಿಸಿ ಕಳೆದ ವಾರ ನಡೆದ ಹಿಂಸಾತ್ಮಕ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ವಿಹಿಂ ಸದಸ್ಯರು ಸೇರಿದಂತೆ ಕನಿಷ್ಠ 50 ಜನರ ವಿರುದ್ಧ ಎಂಟು ಪ್ರಕರಣಗಳು ದಾಖಲಾಗಿವೆ. ಕಳೆದ ಎರಡು ವಾರಗಳಿಂದ ಹಿಂದುತ್ವ ಸಂಘಟನೆಗಳು ಮಸೀದಿಯ ಕೆಲವು ಭಾಗಗಳನ್ನು ಕೆಡವಲು ಒತ್ತಾಯಿಸುತ್ತಿದ್ದು, ಅವುಗಳನ್ನು ಕಾನೂನು ಬಾಹಿರವಾಗಿ ನಿರ್ಮಿಸಲಾಗಿದೆ ಎಂದು ಆರೋಪಿಸಿವೆ.

ಸೆ.10ರಂದು ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದಾಗ ಪೋಲಿಸರು ಪ್ರತಿಭಟನಾಕಾರರನ್ನು ಚದುರಿಸಲು ಜಲಫಿರಂಗಿಗಳನ್ನು ಬಳಸಿದ್ದರು ಮತ್ತು ಲಾಠಿ ಪ್ರಹಾರವನ್ನು ನಡೆಸಿದ್ದರು. ಘರ್ಷಣೆಗಳಲ್ಲಿ ಪೋಲಿಸ್ ಸಿಬ್ಬಂದಿಗಳು ಮತ್ತು ಮಹಿಳೆಯರು ಸೇರಿದಂತೆ ಸುಮಾರು 10 ಜನರು ಗಾಯಗೊಂಡಿದ್ದರು. ನಿಷೇಧಾಜ್ಞೆಯನ್ನು ಉಲ್ಲಂಘಿಸಿದ್ದ,ಕಲ್ಲುತೂರಾಟ ನಡೆಸಿದ್ದ ಮತ್ತು ಪೋಲಿಸ್ ಸಿಬ್ಬಂದಿಗಳ ಮೇಲೆ ದಾಳಿ ನಡೆಸಿದ್ದ 50-60 ಶಂಕಿತರನ್ನು ಗುರುತಿಸಲಾಗಿದ್ದು,ಅವರ ಬಂಧನಕ್ಕಾಗಿ ಶೋಧ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ಶಿಮ್ಲಾ ಎಸ್‌ಪಿ ಸಂಜೀವ ಗಾಂಧಿ ಸುದ್ದಿಸಂಸ್ಥೆಗೆ ತಿಳಿಸಿದರು. ಹಲವು ಕೌನ್ಸಿಲರ್‌ಗಳೂ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು ಎಂದರು.

ಈ ನಡುವೆ ವಿಹಿಂಪ ಪ್ರಕರಣಗಳು ದಾಖಲಾಗಿರುವವರಿಗೆ ಉಚಿತ ಕಾನೂನು ನೆರವನ್ನು ಒದಗಿಸುವುದಾಗಿ ಘೋಷಿಸಿದೆ.

ಸೆ.12ರಂದು ಮುಸ್ಲಿಮ್ ಕಲ್ಯಾಣ ಸಮತಿಯು ಶಿಮ್ಲಾ ಮುನ್ಸಿಪಲ್ ಆಯಕ್ತರನ್ನು ಭೇಟಿಯಾಗಿ ಶಿಮ್ಲಾ ನ್ಯಾಯಾಲಯವು ಕಾನೂನು ಬಾಹಿರ ಎಂದು ಹೇಳಿದ ಮಸೀದಿಯ ಭಾಗಗಳನ್ನು ನೆಲಸಮಗೊಳಿಸುವುದಾಗಿ ತಿಳಿಸಿತ್ತು. ಪರಿಸರದಲ್ಲಿ ಸಾಮರಸ್ಯವನ್ನು ಕಾಯ್ದಕೊಳ್ಳುವುದು ತನ್ನ ಉದ್ದೇಶವಾಗಿದೆ ಎಂದು ಅದು ಹೇಳಿತ್ತು.

ಮಸೀದಿಯ ಕಾನೂನುಬದ್ಧತೆಯ ಕುರಿತು ನ್ಯಾಯಾಲಯವು ವಿಚಾರಣೆಯನ್ನು ನಡೆಸುತ್ತಿದೆ. ಮುಂದಿನ ವಿಚಾರಣೆಯನ್ನು ಅ.5ಕ್ಕೆ ನಿಗದಿಗೊಳಿಸಲಾಗಿದೆ.

ಮಸೀದಿಯು ತನ್ನ ಆಸ್ತಿಯಾಗಿದೆ ಎಂದು ಸೆ.7ರಂದು ನ್ಯಾಯಾಲಯಕ್ಕೆ ತಿಳಿಸಿದ್ದ ಹಿಮಾಚಲ ವಕ್ಫ್ ಮಂಡಳಿಯು,ವಿವಾದವು ಹೆಚ್ಚುವರಿ ಅಂತಸ್ತುಗಳ ನಿರ್ಮಾಣದ ಕುರಿತಾಗಿದೆ ಎಂದು ಹೇಳಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News