×
Ad

ಎಸ್‌ಟಿ ಮೀಸಲಾತಿ ಲಾಟರಿಯಡಿ ಶಿವಸೇನೆ (ಯುಬಿಟಿ) ಮುಂಬೈ ಮೇಯರ್ ಹುದ್ದೆ ಪಡೆಯಬಹುದು: ಉದ್ಧವ್ ಠಾಕ್ರೆ ಸುಳಿವು

Update: 2026-01-20 21:50 IST

ಉದ್ಧವ್ ಠಾಕ್ರೆ | Photo Credit : PTI 

ಮುಂಬೈ, ಜ.20: 227 ಸದಸ್ಯರ ಬೃಹನ್ಮುಂಬೈ ಮಹಾನಗರ ಪಾಲಿಕೆಯಲ್ಲಿ ಬಹುಮತಕ್ಕೆ ಅಗತ್ಯವಾದ 114 ಸ್ಥಾನಗಳು ತನ್ನ ಪಕ್ಷ ಮತ್ತು ಅದರ ಮಿತ್ರಪಕ್ಷಗಳ ಬಳಿಯಿಲ್ಲದಿದ್ದರೂ, ದೇವರು ಬಯಸಿದರೆ ಮುಂಬೈನ ಮುಂದಿನ ಮೇಯರ್ ಹುದ್ದೆ ಶಿವಸೇನೆ (ಯುಬಿಟಿ)ಗೆ ದೊರೆಯಲಿದೆ ಎಂದು ಉದ್ಧವ ಠಾಕ್ರೆ ಹೇಳಿದ್ದಾರೆ.

ಮೀಸಲಾತಿ ಲಾಟರಿಯೇ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ ಅವರ ಹೇಳಿಕೆಗೆ ಕಾರಣವಾಗಿದೆ. ಮುಂಬೈ ಮೇಯರ್ ಹುದ್ದೆಯು ಪರಿಶಿಷ್ಟ ಪಂಗಡದ (ಎಸ್‌ಟಿ) ಅಭ್ಯರ್ಥಿಗೆ ಮೀಸಲಾದರೆ ಪರಿಸ್ಥಿತಿ ಬದಲಾಗಲಿದೆ.

ಏಕೈಕ ದೊಡ್ಡ ಪಕ್ಷವಾಗಿರುವ ಬಿಜೆಪಿ 89 ಸ್ಥಾನಗಳನ್ನು ಮತ್ತು ಅದರ ಮಿತ್ರಪಕ್ಷ ಏಕನಾಥ ಶಿಂದೆ ನೇತೃತ್ವದ ಶಿವಸೇನೆ 29 ಸ್ಥಾನಗಳನ್ನು ಗೆದ್ದಿದ್ದರೂ, ಮೇಯರ್ ಹುದ್ದೆಯು ಎಸ್‌ಟಿ ವರ್ಗಕ್ಕೆ ಮೀಸಲಾದರೆ ಅದಕ್ಕೆ ಹಕ್ಕು ಮಂಡಿಸಲು ಈ ಎರಡೂ ಪಕ್ಷಗಳಲ್ಲಿ ಆ ಸಮುದಾಯಕ್ಕೆ ಸೇರಿದ ನೂತನವಾಗಿ ಚುನಾಯಿತ ಕಾರ್ಪೊರೇಟರ್‌ಗಳಿಲ್ಲ.

ಇನ್ನೊಂದೆಡೆ, ಶಿವಸೇನೆ (ಯುಬಿಟಿ)ಯ 65 ಕಾರ್ಪೊರೇಟರ್‌ಗಳ ಪೈಕಿ ಜಿತೇಂದ್ರ ವಳವಿ (ವಾರ್ಡ್ ನಂ.53) ಮತ್ತು ಪ್ರಿಯದರ್ಶಿನಿ ಠಾಕರೆ (ವಾರ್ಡ್ ನಂ.121) ಅವರು ಎಸ್‌ಟಿ ವರ್ಗಕ್ಕೆ ಸೇರಿದವರಾಗಿದ್ದಾರೆ.

ಈ ಸನ್ನಿವೇಶದಲ್ಲಿ ಬಹುಮತಕ್ಕೆ ಕೊರತೆಯಿದ್ದರೂ ಶಿವಸೇನೆ (ಯುಬಿಟಿ) ಮೇಯರ್ ಹುದ್ದೆಯನ್ನು ಪಡೆಯಬಹುದು. ಏಕೆಂದರೆ ಎಸ್‌ಸಿ ಮತ್ತು ಎಸ್‌ಟಿಗೆ ಮೀಸಲಾದ ಹುದ್ದೆಗಳು ಪಕ್ಷದ ಬಲವನ್ನು ಪರಿಗಣಿಸದೆ, ಆ ವರ್ಗಗಳಿಗೆ ಸೇರಿದ ಚುನಾಯಿತ ಕಾರ್ಪೊರೇಟರ್‌ಗಳಿಗೆ ಸಿಗಬೇಕು ಎನ್ನುವುದನ್ನು ಮೀಸಲಾತಿ ನಿಯಮಗಳು ಕಡ್ಡಾಯಗೊಳಿಸಿವೆ.

ರಾಜ್ಯ ಚುನಾವಣಾ ಆಯೋಗವು 29 ಮಹಾನಗರ ಪಾಲಿಕೆಗಳ ಮೇಯರ್ ಹುದ್ದೆಗಳಿಗೆ ಎಸ್‌ಸಿ, ಎಸ್‌ಟಿ, ಒಬಿಸಿ, ಒಬಿಸಿ ಮಹಿಳೆ, ಸಾಮಾನ್ಯ ವರ್ಗದ ಮಹಿಳೆ ಮತ್ತು ಸಾಮಾನ್ಯ ವರ್ಗಕ್ಕೆ ಮೀಸಲಾತಿಯನ್ನು ಜ.22ರಂದು ಮಂತ್ರಾಲಯದಲ್ಲಿ ಲಾಟರಿ ಮೂಲಕ ನಿರ್ಧರಿಸಲಿದೆ.

ಮೀಸಲಾತಿ ನೀತಿಯಡಿ ಮೇಯರ್ ಹುದ್ದೆಗಳ ಶೇ.7ರಷ್ಟು ಎಸ್‌ಟಿಗಳಿಗೆ, ಶೇ.11.5ರಷ್ಟು ಎಸ್‌ಸಿಗಳಿಗೆ ಮತ್ತು ಶೇ.27ರಷ್ಟು ಒಬಿಸಿಗಳಿಗೆ ಸಿಗಲಿವೆ. ಉಳಿದ ಹುದ್ದೆಗಳು ಒಬಿಸಿ/ಸಾಮಾನ್ಯ ವರ್ಗದ ಮಹಿಳೆಯರು ಮತ್ತು ಸಾಮಾನ್ಯ ವರ್ಗಕ್ಕೆ ಮೀಸಲಾಗಲಿವೆ.

29 ಮಹಾನಗರ ಪಾಲಿಕೆಗಳಲ್ಲಿ ಕನಿಷ್ಠ ಎರಡು ಮೇಯರ್ ಹುದ್ದೆಗಳು ಎಸ್‌ಟಿಗಳಿಗೆ, ಮೂರು ಎಸ್‌ಸಿಗಳಿಗೆ, ಒಂಬತ್ತು ಒಬಿಸಿಗಳಿಗೆ ಸಿಗಲಿದ್ದು, ಉಳಿದ ಹುದ್ದೆಗಳು ಮಹಿಳೆಯರು (ಒಬಿಸಿ ಮತ್ತು ಸಾಮಾನ್ಯ ವರ್ಗ) ಹಾಗೂ ಸಾಮಾನ್ಯ ವರ್ಗದ ಪ್ರತಿನಿಧಿಗಳಿಗೆ ಹಂಚಿಕೆಯಾಗಲಿವೆ.

ಇತ್ತೀಚಿಗೆ ಆಯ್ಕೆಯಾಗಿರುವ 29 ಮಹಾನಗರ ಪಾಲಿಕೆಗಳ ಸದಸ್ಯರನ್ನು ಹೊಸಬರು ಎಂದು ಪರಿಗಣಿಸಿದರೆ, ಆಯಾ ನಗರಗಳ ಮೇಯರ್ ಹುದ್ದೆಗಳಿಗೆ ವರ್ಗ ಮೀಸಲಾತಿಯನ್ನು ನಿರ್ಧರಿಸಲು ಜನಸಂಖ್ಯಾ ಮಾನದಂಡವನ್ನು ಬಳಸಲಾಗುತ್ತದೆ. ಅಂದರೆ ನಗರದ ಜನಸಂಖ್ಯೆಯಲ್ಲಿ ಎಸ್‌ಟಿಗಳು ಹೆಚ್ಚಿದ್ದರೆ ಅದು ಎಸ್‌ಟಿ ಮೇಯರ್ ಅನ್ನು ಪಡೆಯುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆದರೆ ರಾಜ್ಯ ನಗರಾಭಿವೃದ್ಧಿ ಇಲಾಖೆಯು ಈ ಚುನಾವಣೆಯನ್ನು ಹೊಸದು ಎಂದು ಪರಿಗಣಿಸುವುದಿಲ್ಲ ಮತ್ತು ಹಿಂದಿನ ಚುನಾವಣೆಗಳಿಂದ ಮುಂದುವರಿಯುವ ನಿರಂತರ ಪ್ರಕ್ರಿಯೆಯನ್ನಾಗಿ ಪರಿಗಣಿಸುತ್ತದೆ. ಆಗ ಮೀಸಲಾತಿ ವರ್ಗವನ್ನು ನಿರ್ಧರಿಸುವಾಗ ಆವರ್ತನ ಪದ್ಧತಿಯನ್ನು ಬಳಸಲಾಗುತ್ತದೆ.

ಹಿಂದಿನ ಸಲ ಮುಂಬೈ ಎಸ್‌ಸಿ ಮೇಯರ್‌ನ್ನು (ಸ್ನೇಹಲ್ ಅಂಬೇಕರ್) ಹೊಂದಿತ್ತು. ಮುಂದಿನ ಸರದಿ ಎಸ್‌ಟಿ, ಒಬಿಸಿ, ಒಬಿಸಿ ಮಹಿಳೆಯರು, ಮಹಿಳೆಯರು (ಸಾಮಾನ್ಯ) ಮತ್ತು ಸಾಮಾನ್ಯ ವರ್ಗದ್ದಾಗುತ್ತದೆ. ಆದ್ದರಿಂದ ಜ.22ರಂದು ಮಂತ್ರಾಲಯದಲ್ಲಿ ಮೇಯರ್ ಹುದ್ದೆ ಮೀಸಲಾತಿಗಾಗಿ ಲಾಟರಿಯನ್ನು ನಡೆಸುವ ಸಂದರ್ಭದಲ್ಲಿ ಅದರಲ್ಲಿರುವ ಹಲವಾರು ತಾಂತ್ರಿಕ ವಿಷಯಗಳನ್ನು ವಿವರಿಸಲಾಗುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News