ಯುಟ್ಯೂಬರ್ ಎಲ್ವಿಶ್ ಯಾದವ್ ಮನೆ ಹೊರಗೆ ಗುಂಡು ಹಾರಿಸಿದ ಪ್ರಕರಣ | ಎನ್ಕೌಂಟರ್ ಬಳಿಕ ಓರ್ವನ ಬಂಧನ
Photo : NDTV
ಫರೀದಾಬಾದ್, ಆ. 22: ಗುರುಗ್ರಾಮದಲ್ಲಿರುವ ಯುಟ್ಯೂಬರ್ ಹಾಗೂ ಬಿಗ್ ಬಾಸ್ ಒಟಟಿ ವಿಜೇತ ಎಲ್ವಿಶ್ ಯಾದವ್ ಮನೆಯ ಹೊರಗೆ ಗುಂಡು ಹಾರಿಸಿದ ಪ್ರಕರಣದಲ್ಲಿ ಭಾಗಿಯಾಗಿದ್ದ ಓರ್ವ ಶೂಟರ್ ನನ್ನು ಇಲ್ಲಿನ ಫರೀದ್ಪುರ ಗ್ರಾಮದ ಸಮೀಪ ಶುಕ್ರವಾರ ಬೆಳಗ್ಗೆ ನಡೆದ ಎನ್ಕೌಂಟರ್ ಬಳಿಕ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಫರಿದಾಬಾದ್ ನ ನಿವಾಸಿ ಇಶಾಂತ್ ಗಾಂಧಿ ಆಲಿಯಾಸ್ ಇಶು ಎಂದು ಗುರುತಿಸಲಾಗಿದೆ. ಎನ್ಕೌಂಟರ್ನಲ್ಲಿ ಈತನ ಕಾಲಿಗೆ ಗುಂಡು ತಗುಲಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇಶಾಂತ್ ಗಾಂಧಿ ಮೋಟಾರು ಸೈಕಲ್ ನಲ್ಲಿ ತೆರಳುತ್ತಿದ್ದಾಗ ಫರಿದಾಬಾದ್ ನ ಸೆಕ್ಟರ್ 30ರಲ್ಲಿ ಮುಂಜಾನೆ ಸುಮಾರು 4.30ಕ್ಕೆ ಕ್ರೈಮ್ ಬ್ರಾಂಚ್ ತಂಡ ತಡೆದು ನಿಲ್ಲಿಸುವಂತೆ ಸೂಚಿಸಿತು. ಆದರೆ, ಆತ ಪರಾರಿಯಾಗಲು ಪ್ರಯತ್ನಿಸಿದ ಹಾಗೂ ತಂಡದ ಮೇಲೆ ಗುಂಡು ಹಾರಿಸಿದ ಎಂದು ಅವರು ತಿಳಿಸಿದ್ದಾರೆ.
ಪೊಲೀಸರು ಪ್ರತಿದಾಳಿ ನಡೆಸಿದರು. ಈ ಪ್ರತಿ ದಾಳಿಯಲ್ಲಿ ಇಶಾಂತ್ ಗಾಂಧಿಯ ಕಾಲಿಗೆ ಗುಂಡು ತಗುಲಿತು. ಅನಂತರ ಆತನನ್ನು ಬಂಧಿಸಲಾಯಿತು ಎಂದು ಅವರು ತಿಳಿಸಿದ್ದಾರೆ.
‘‘ಗುರುಗ್ರಾಮದಲ್ಲಿರುವ ಎಲ್ವಿಶ್ ಯಾದವ್ ಅವರ ಮನೆಯ ಹೊರಗೆ ಆಗಸ್ಟ್ 17ರಂದು ಗುಂಡು ಹಾರಿಸಿದ ಶೂಟರ್ ಗಳಲ್ಲಿ ಇಶಾಂತ್ ಗಾಂಧಿ ಕೂಡ ಒಬ್ಬ. ಈತನನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಆಸ್ಪತ್ರೆಯಿಂದ ಬಿಡುಗಡೆ ಮಾಡಿದ ಬಳಿಕ ವಿಚಾರಣೆ ನಡೆಸಲಾಗುವುದು’’ ಎಂದು ಫರಿದಾಬಾದ್ ನ ಪೊಲೀಸ್ ಉಪ ಆಯುಕ್ತ (ಕ್ರೈಮ್) ಮುಖೇಶ್ ಮಲ್ಹೋತ್ರಾ ತಿಳಿಸಿದ್ದಾರೆ.