×
Ad

ತ್ರಿಪುರಾದಲ್ಲಿ ಕೋಮು ಹಿಂಸಾಚಾರ | ಅಂಗಡಿಗಳು, ಮನೆಗಳು, ಮಸೀದಿಗೆ ಬೆಂಕಿ: 10 ಮಂದಿ ಬಂಧನ

Update: 2026-01-12 12:55 IST

Photo credit: moneycontrol.com

ಅಗರ್ತಲಾ: ಸ್ಥಳೀಯ ದೇವಸ್ಥಾನಕ್ಕೆ ನಿಧಿ ಸಂಗ್ರಹಿಸುವ ವಿಚಾರದಲ್ಲಿ ಉಂಟಾದ ವಾಗ್ವಾದದ ಬಳಿಕ ತ್ರಿಪುರಾದ ಉನಕೋಟಿ ಜಿಲ್ಲೆಯಲ್ಲಿ ಕೋಮು ಹಿಂಸಾಚಾರ ಸಂಭವಿಸಿದೆ. ಬಲಪಂಥೀಯ ಗುಂಪುಗಳು ಮುಸ್ಲಿಂ ಸಮುದಾಯಕ್ಕೆ ಸೇರಿದ ಅಂಗಡಿಗಳು, ಮನೆಗಳು ಹಾಗೂ ಮಸೀದಿಗೆ ಬೆಂಕಿ ಹಚ್ಚಿದ್ದಾರೆ ಎಂದು ವರದಿಯಾಗಿದೆ.

ಕುಮಾರ್‌ಘಾಟ್ ಉಪವಿಭಾಗದ ಸೈದರ್ಪರ್ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ಪೊಲೀಸ್ ಸಿಬ್ಬಂದಿ ಸೇರಿ ಕನಿಷ್ಠ ಹತ್ತು ಮಂದಿ ಗಾಯಗೊಂಡಿದ್ದಾರೆ. ಘಟನೆ ನಡೆಯುವ ವೇಳೆ ಪೊಲೀಸರು ಸ್ಥಳದಲ್ಲಿದ್ದರೂ ಮಧ್ಯಪ್ರವೇಶಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

“ಪರಿಸ್ಥಿತಿ ನಿಯಂತ್ರಣದಲ್ಲಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಅರೆಸೈನಿಕ ಪಡೆಗಳು ರೂಟ್ ಮಾರ್ಚ್ ಮೂಲಕ ಗಸ್ತು ತಿರುಗುತ್ತಿವೆ. ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ ಹತ್ತು ಮಂದಿಯನ್ನು ಬಂಧಿಸಲಾಗಿದೆ. ಹೊಸ ಹಿಂಸಾಚಾರದ ವರದಿಗಳಿಲ್ಲ,” ಎಂದು ಪೊಲೀಸ್ ವರಿಷ್ಠಾಧಿಕಾರಿ ಅವಿನಾಶ್ ಕುಮಾರ್ ರೈ ಅವರು ತಿಳಿಸಿದ್ದಾರೆ.

ಶನಿವಾರ ಬೆಳಿಗ್ಗೆ ಹಿಂದುತ್ವ ಕಾರ್ಯಕರ್ತರ ಗುಂಪೊಂದು ಮುಸ್ಲಿಂ ವ್ಯಾಪಾರಿಯೊಬ್ಬರ ಅಂಗಡಿಗೆ ಬಂದು ಸ್ಥಳೀಯ ದೇವಸ್ಥಾನಕ್ಕೆ ದೇಣಿಗೆ ಕೇಳಿದ ಸಂದರ್ಭದಲ್ಲೇ ವಿವಾದ ಆರಂಭವಾಗಿದೆ ಎಂದು ವರದಿಯಾಗಿದೆ. ವ್ಯಾಪಾರಿ ತಾನು ಈಗಾಗಲೇ ಸ್ವಲ್ಪ ಮೊತ್ತ ನೀಡಿದ್ದು, ನಂತರ ಹೆಚ್ಚಿನ ಹಣ ನೀಡುವುದಾಗಿ ತಿಳಿಸಿದ್ದರೂ, ತಕ್ಷಣ ಹಣ ನೀಡುವಂತೆ ಒತ್ತಡ ಹೇರಲಾಗಿದೆ ಎನ್ನಲಾಗಿದೆ. ಈ ವೇಳೆ ನಡೆದ ಹಲ್ಲೆಯ ಬಳಿಕ ಅವರ ಅಂಗಡಿ ಹಾಗೂ ಮನೆಗೆ ಬೆಂಕಿ ಹಚ್ಚಲಾಗಿದೆ ಎಂದು ಆರೋಪಿಸಲಾಗಿದೆ.

ಐದಾರು ಮನೆಗಳು, ಹಲವು ಅಂಗಡಿಗಳು ಹಾಗೂ ಸೈದೂರ್ ಪಾರಾ ಮಸೀದಿಗೆ ಬೆಂಕಿ ಹಚ್ಚಲಾಗಿದೆ. ಸಮಾಧಿಗಳಿಗೂ ಹಾನಿಯಾಗಿದೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ. ಬೈಕ್‌, ಕಾರು ಹಾಗೂ ಟ್ರ್ಯಾಕ್ಟರ್‌ಗಳು ಸುಟ್ಟುಹೋಗಿವೆ ಎಂದು ತಿಳಿಸಿದ್ದಾರೆ.

ಹಿಂಸಾಚಾರ ಪೀಡಿತ ಪ್ರದೇಶಕ್ಕೆ ಭೇಟಿ ನೀಡಲು ಯತ್ನಿಸಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಬಿರಾಜಿತ್ ಸಿನ್ಹಾ ಅವರನ್ನು ಭದ್ರತಾ ಕಾರಣಗಳನ್ನು ಮುಂದಿಟ್ಟು ಪೊಲೀಸರು ತಡೆದಿದ್ದಾರೆ. ಇದನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ.

ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಜೀವ ಮತ್ತು ಆಸ್ತಿಗಳನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಎಂದು ವಿರೋಧ ಪಕ್ಷದ ನಾಯಕ ಜಿತೇಂದ್ರ ಚೌಧರಿ ಆರೋಪಿಸಿದ್ದಾರೆ.

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 163ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಇಂಟರ್ನೆಟ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಪರಿಸ್ಥಿತಿಯನ್ನು ಪರಿಶೀಲಿಸಿ ನಿರ್ಬಂಧಗಳನ್ನು ಸಡಿಲಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News