×
Ad

ಕ್ರಿಮಿನಲ್ ಕಾನೂನುಗಳನ್ನು ಬದಲಿಸುವ ವಿಧೇಯಕಗಳ ಚರ್ಚೆಗೆ ಅಲ್ಪಾವಧಿಯ ನೋಟಿಸ್; ಪ್ರತಿಪಕ್ಷ ಸಂಸದರಿಂದ ಪ್ರತಿಭಟನೆ

Update: 2023-08-20 22:05 IST

ಹೊಸದಿಲ್ಲಿ: ಮುಂಗಾರು ಅದಿವೇಶನದಲ್ಲಿ ಲೋಕಸಭೆಯಲ್ಲಿ ಮಂಡಿಸಲಾದ ಭಾರತೀಯ ನ್ಯಾಯಸಂಹಿತಾ ವಿಧೇಯಕ 2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ವಿಧೇಯಕ 2023 ಹಾಗೂ ಭಾರತೀಯ ಸಾಕ್ಷ್ಯ ವಿಧೇಯಕ 2023 ಬಗ್ಗೆ ಚರ್ಚಿಸಲು ತಮಗೆ ಅಲ್ಪಾವಧಿಯ ನೋಟಿಸ್ ನೀಡಿದ್ದನ್ನು ಸಂಸದೀಯ ವ್ಯವಹಾರಗಳ ಸಮಿತಿಯ ಕನಿಷ್ಠ ಮೂವರು ಸದಸ್ಯರು ಪ್ರಬಲವಾಗಿ ವಿರೋಧಿಸಿದ್ದಾರೆ.

ಈವರೆಗೆ ಜಾರಿಯಲ್ಲಿದ್ದ ಭಾರತೀಯ ದಂಡಸಂಹಿತೆ 1860, ಕ್ರಿಮಿನಲ್ ವಿಧಿವಿಧಾನ ಸಂಹಿತೆ 1890 ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆ 1872 ಇವುಗಳ ಬದಲಿಗೆ ಈ ಮೂರು ವಿಧೇಯಕಗಳನ್ನು ಜಾರಿಗೊಳಿಸುವ ಉದ್ದೇಶವನ್ನು ಕೇಂದ್ರ ಸರಕಾರ ಹೊಂದಿದೆ.

ನೂತನ ಮೂರು ವಿಧೇಯಕಗಳ ಬಗ್ಗೆ ಚರ್ಚೆಗೆ ತಮಗೆ ಅಲ್ಪಾವಧಿಯ ನೋಟಿಸ್ ನೀಡಿರುವುದನ್ನು ಪ್ರತಿಭಟಿಸಿ ಟಿಎಂಸಿಯ ಡೆರೆಕ್ ಓ ಬ್ರಿಯಾನ್ ಹಾಗೂ ಕಾಕೋಲಿ ಘೋಷ್ ದಸ್ತಿದಾರ್ ಮತ್ತು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಸಮಿತಿಗೆ ಪತ್ರ ಬರೆದಿದ್ದಾರೆ. ಈ ಮೊದಲು ನಿಗದಿಯಾದಂತೆ, ಸೆರೆಮನೆ-ಪರಿಸ್ಥಿತಿ ಮೂಲಸೌಕರ್ಯ ಹಾಗೂ ಸುಧಾರಣೆಗಳ ಕುರಿತ ಕರಡುವರದಿಯನ್ನು ಅಂಗೀಕರಿಸಲು ಆಗಸ್ಟ್ 24ರಂದು ಸಭೆ ಸೇರಬೇಕಿತ್ತು.

ಆದರೆ ಆಗಸ್ಟ್ 18ರಂದು ರಾತ್ರಿ ಗೃಹ ಸಚಿವಾಲಯ ವ್ಯವಹಾರಗಳ ಸದಸ್ಯರಿಗೆ ಹೊಸ ನೋಟಿಸ್ ಜಾರಿಗೊಳಿಸಿದ ಸಚಿವಾಲಯವು, ಆಗಸ್ಟ್ 24,25 ಹಾಗೂ 26ರಂದು ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ಈ ಮೂರು ವಿಧೇಯಕಗಳ ವಿವಿಧ ಅಂಶಗಳ ಬಗ್ಗೆ ಸದಸ್ಯರ ಜೊತೆ ಚರ್ಚಿಸುವುದಾಗಿ ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿ ಪತ್ರ ಬರೆದಿರುವ ಓ ಬ್ರಿಯಾನ್ ಅವರು ಸಂಸತ್ನ ಮುಂಗಾರು ಅಧಿವೇಶನವು ಇತ್ತೀಚೆಗೆ ಕೊನೆಗೊಂಡಿರುವುದರಿಂದ, ಲೋಕಸಭಾ ಹಾಗೂ ರಾಜ್ಯಸಭಾ ಸದಸ್ಯರು ಅವರವರ ಕ್ಷೇತ್ರಗಳಲ್ಲಿ ಹಲವಾರು ಬದ್ಧತೆಗಳನ್ನು ಹೊಂದಿರುತ್ತಾರೆ. ಈ ಮೂರು ವಿಧೇಯಕಗಳ ಕುರಿತು ಸಮಾಲೋಚನೆಗೆ ಅಲ್ಪಾವಧಿಯ ನೋಟಿಸ್ ನೀಡಿರುವುದು ಸರಿಯಲ್ಲ. ಆದುದರಿಂದ ಹಾಲಿ ದಿನಾಂಕಗಳನ್ನು ಪರಿಷ್ಕರಿಸಿ ಸೆಪ್ಟೆಂಬರ್ನಲ್ಲಿ ಸಮಾಲೋಚನೆಗೆ ದಿನಗಳನ್ನು ನಿಗದಿಪಡಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಈ ಮೂರು ವಿಧೇಯಕಗಳನ್ನು ಗೃಹ ಸಚಿವಾಲಯದ ಸಮಿತಿಯ ಪ್ರಸ್ತಾವನೆಗೆ ಆಗಸ್ಟ್ 18ರಂದು ಸಲ್ಲಿಸಲಾಗಿತ್ತು. ಆ ದಿನದಂದೇ ಸಮಿತಿಯ ಪ್ರಸ್ತಾವನೆಗೆ ವಿಧೇಯಕಗಳನ್ನು ಒಪ್ಪಿಸಲಾಗಿತ್ತು.ಅಲ್ಲದೆ ಈ ಕುರಿತ ಸಮಾಲೋಚನೆಗಾಗಿ ನಮಗೆ ನೋಟಿಸ್ ಕಳುಹಿಸಲಾಗಿತ್ತು. ಇದು ಅತ್ಯಂತ ಅಚ್ಚರಿಕರ. ಮಣಿಪುರ ಹಿಂಸಾಚಾರದ ಬಗ್ಗೆ ಚರ್ಚೆಯಾಗಬೇಕೆಂಬ ನಮ್ಮ ಮನವಿಗೆ ಸರಕಾರ ಕಿವಿಗೊಡುತ್ತಿಲ್ಲ. ಆದರೆ ಈ ಮೂರು ವಿಧೇಯಕಗಳ ಬಗ್ಗೆ ಸಮಾಲೋಚನೆ ನಡೆಸಲು ಅದು ಅವಸರ ಮಾಡುತ್ತಿದೆ’’ ಎಂದು ಸದಸ್ಯರೊಬ್ಬರು ಟೀಕಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News