×
Ad

ಗಿರಿ ಪ್ರದೇಶದಿಂದ ಕೆಲಸ ಮಾಡಲು ಬಯಸುವವರಿಗೆ 'ವರ್ಕ್ ಫ್ರಂ ಹಿಲ್ಸ್’ ಪರಿಚಯಿಸಿದ ಸಿಕ್ಕಿಂ

Update: 2025-07-14 22:40 IST

PC | x.com

ಗ್ಯಾಂಗ್ಟಕ್: ಗಿರಿ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಲು ಬಯಸುವ ವೃತ್ತಿಪರರ ಮೊದಲ ಗುಂಪನ್ನು ಸ್ವಾಗತಿಸಲು ಸಿಕ್ಕಿಂನ ದೂರದ ಗ್ರಾಮವೊಂದು ಸಜ್ಜಾಗುತ್ತಿದೆ.

ಪಾಕ್ಯಾಂಗ್ ಜಿಲ್ಲೆಯಲ್ಲಿನ ಯಾಕ್ಟೆನ್ ಗ್ರಾಮದಲ್ಲಿ ಕಾಂಚನ್ ಜುಂಗದ ಮನೋಹರ ದೃಶ್ಯಾವಳಿಗಳನ್ನು ಕಣ್ತುಂಬಿಕೊಂಡು, ನಿಸರ್ಗ ಸೌಂದರ್ಯದ ಪರಿಸರದಲ್ಲಿ ಗಿರಿ ಪ್ರದೇಶದಿಂದ ಉದ್ಯೋಗ ನಿರ್ವಹಿಸಲು ಬಯಸುವವರಿಗೆಂದೇ ಸಜ್ಜುಗೊಳಿಸಲಾಗಿದೆ ಎಂದು ಸೋಮವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಪಾಕ್ಯಾಂಗ್ ಜಿಲ್ಲೆಯ ಜಿಲ್ಲಾಧಿಕಾರಿ ಅಗವಾನೆ ರೋಹನ್ ರಮೇಶ್, “ಒಂದು ಕಾಲದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ನಿರ್ಲಕ್ಷ್ಯಕ್ಕೀಡಾಗಿದ್ದ ಪಾಕ್ಯಾಂಗ್, ಇದೀಗ ದೂರದಿಂದಲೇ ಉದ್ಯೋಗ ನಿರ್ವಹಿಸಲು ಬಯಸುವ ವೃತ್ತಿಪರರಿಗೆ ಅಗತ್ಯ ಸೌಕರ್ಯಗಳನ್ನು ಪೂರೈಸುವ ಸಾಮರ್ಥ್ಯ ಹೊಂದಿರುವ ಮಹತ್ತರ ಪರಿವರ್ತನೆಗೊಳಗಾಗಿದೆ. ಇಲ್ಲಿ ಅತಿ ವೇಗದ ವೈಫೈ ವ್ಯವಸ್ಥೆಯೊಂದಿಗೆ, ಬ್ಯಾಕಪ್ ವ್ಯವಸ್ಥೆ, ಯಾವುದೇ ಅಡಚಣೆಯಿಲ್ಲದ ವಿದ್ಯುತ್ ಪೂರೈಕೆ ಹಾಗೂ ಎಂಟು ಉದ್ಯೋಗ ಸ್ನೇಹಿ ಹೋಮ್ ಸ್ಟೇಗಳನ್ನು ನಿರ್ಮಿಸಲಾಗಿದೆ. ಪ್ರವಾಸಿಗರಿಗೆ ಸುಗಮ ಪ್ರವೇಶ ಕಲ್ಪಿಸಲು ಸ್ಥಳೀಯ ಸಾರಿಗೆ ನಿರ್ವಾಹಕರೊಂದಿಗೆ ಒಡಂಬಡಿಕೆಯನ್ನೂ ಮಾಡಿಕೊಳ್ಳಲಾಗಿದೆ” ಎಂದು ಹೇಳಿದ್ದಾರೆ.

“ಸಿಕ್ಕಿಂನ ಪ್ರಮುಖ ಆದಾಯ ಪ್ರವಾಸೋದ್ಯಮವಾಗಿದೆ. ಇದೀಗ ಋತುಮಾನದ ಪ್ರವಾಸೋದ್ಯಮವಲ್ಲದೆ, ಸಾಮರ್ಥ್ಯಗಳ ಹೊಂದಿರುವ ಹೊಸ ಪ್ರದೇಶಗಳತ್ತ ಸರಕಾರ ಗುರಿ ನೆಟ್ಟಿದೆ" ಎಂದೂ ಅವರು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಇಡೀ ದೇಶದಲ್ಲಿ ನಿರ್ಮಿಸಲಾಗಿರುವ ಇಂತಹ ಪ್ರಪ್ರಥಮ ಗ್ರಾಮ ಇದಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News