×
Ad

ಮೆಸ್ಸಿ ಮತ್ತು ಅವರ ಅಭಿಮಾನಿಗಳಲ್ಲಿ ಕ್ಷಮೆಯಾಚಿಸುತ್ತೇನೆ: ಕೋಲ್ಕತ್ತಾ ಕ್ರೀಡಾಂಗಣದಲ್ಲಿ ನಡೆದ ದಾಂಧಲೆ ಬಳಿಕ ಮಮತಾ ಬ್ಯಾನರ್ಜಿ ಪ್ರತಿಕ್ರಿಯೆ

ಸಾಲ್ಟ್ ಲೇಕ್ ಅವ್ಯವಸ್ಥೆಗೆಯ ತನಿಖೆಗೆ ಉನ್ನತ ಮಟ್ಟದ ಸಮಿತಿ

Update: 2025-12-13 15:21 IST

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Photo: PTI)

ಕೋಲ್ಕತ್ತಾ: ಸಾಲ್ಟ್ ಲೇಕ್‌ನ ವಿವೇಕಾನಂದ ಯುವಭಾರತಿ ಕ್ರೀಡಾಂಗಣದಲ್ಲಿ ಖ್ಯಾತ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಭಾಗವಹಿಸಿದ್ದ ಕಾರ್ಯಕ್ರಮದ ವೇಳೆ ಉಂಟಾದ ಅವ್ಯವಸ್ಥೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿಷಾದ ವ್ಯಕ್ತಪಡಿಸಿದ್ದಾರೆ. ಮೆಸ್ಸಿ ಹಾಗೂ ಫುಟ್ಬಾಲ್ ಅಭಿಮಾನಿಗಳಲ್ಲಿ ಅವರು ಕ್ಷಮೆಯಾಚಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, “ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಕಂಡುಬಂದ ಅವ್ಯವಸ್ಥೆ ಗೆ ನಾನು ತೀವ್ರವಾಗಿ ವಿಚಲಿತಳಾಗಿದ್ದೇನೆ. ಈ ಘಟನೆಗಾಗಿ ಲಿಯೋನೆಲ್ ಮೆಸ್ಸಿ ಮತ್ತು ಎಲ್ಲ ಕ್ರೀಡಾಭಿಮಾನಿಗಳಿಗೆ ಕ್ಷಮೆ ಕೋರುತ್ತೇನೆ” ಎಂದು ಹೇಳಿದ್ದಾರೆ.

ಮೆಸ್ಸಿ ಕ್ರೀಡಾಂಗಣದಿಂದ 10 ನಿಮಿಷಗಳಿಗಿಂತ ಕಡಿಮೆ ಸಮಯದಲ್ಲಿ ನಿರ್ಗಮಿಸಿದ್ದು, ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಘಟನೆಗೆ ಸಂಬಂಧಿಸಿದ ವರದಿಗಳು ಹೊರಬರುತ್ತಿದ್ದ ಸಂದರ್ಭದಲ್ಲಿ ತಾನು ಸಾವಿರಾರು ಫುಟ್ಬಾಲ್ ಪ್ರೇಮಿಗಳೊಂದಿಗೆ ಕ್ರೀಡಾಂಗಣದತ್ತ ತೆರಳುತ್ತಿದ್ದೆನೆಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ನಿವೃತ್ತ ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಆಶಿಮ್ ಕುಮಾರ್ ರೇ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚಿಸುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದಾರೆ. ಸಮಿತಿಯಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿ ಹಾಗೂ ಗೃಹ ಮತ್ತು ಬೆಟ್ಟ ವ್ಯವಹಾರಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸದಸ್ಯರಾಗಿರಲಿದ್ದಾರೆ. ಘಟನೆಗೆ ಕಾರಣವಾದ ಅಂಶಗಳ ಪರಿಶೀಲನೆ, ಜವಾಬ್ದಾರಿಯ ನಿಗದಿ ಮತ್ತು ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಅಗತ್ಯ ಕ್ರಮಗಳ ಶಿಫಾರಸು ಸಮಿತಿಯ ಕಾರ್ಯವ್ಯಾಪ್ತಿಯಾಗಲಿದೆ.

ಘಟನೆ ಬಳಿಕ ಪಶ್ಚಿಮ ಬಂಗಾಳ ಬಿಜೆಪಿ ಘಟಕವು ತೃಣಮೂಲ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಟೀಕೆ ನಡೆಸಿದೆ. ಇದು ರಾಜ್ಯದ ಫುಟ್ಬಾಲ್ ಪರಂಪರೆಗೆ ಧಕ್ಕೆ ತಂದಿದೆ. ಆಡಳಿತಾತ್ಮಕ ವೈಫಲ್ಯದ ಸ್ಪಷ್ಟ ಉದಾಹರಣೆ ಎಂದು ಬಿಜೆಪಿ ಆರೋಪಿಸಿದೆ.

ಎಕ್ಸ್‌ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ಬಿಜೆಪಿ, “ಬಂಗಾಳ ಮತ್ತು ಫುಟ್ಬಾಲ್ ಎಂದಿಗೂ ಸಮಾನಾರ್ಥಕವಾಗಿದ್ದವು. ಆದರೆ ಇಂದಿನ ಆಡಳಿತದಲ್ಲಿ ಆ ಸಂಸ್ಕೃತಿ ಹಾಳಾಗಿದೆ. ಫುಟ್ಬಾಲ್ ನಗರಕ್ಕೆ ವಿಶ್ವಕಪ್ ವಿಜೇತ ತಾರೆ ಬಂದಾಗಲೂ ಇಂತಹ ಅವ್ಯವಸ್ಥೆ ಸಂಭವಿಸಿರುವುದು ದುರಂತ” ಎಂದು ಆಕ್ರೋಶ ವ್ಯಕ್ತಪಡಿಸಿದೆ.




 



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News