ಎಸ್‌ಐಆರ್ ಭೀತಿ| ಪಶ್ಚಿಮ ಬಂಗಾಳದ ಇನ್ನೋರ್ವ ನಿವಾಸಿ ಆತ್ಮಹತ್ಯೆ : ಒಂದೇ ವಾರದಲ್ಲಿ ಒಟ್ಟು ಏಳು ಆತ್ಮಹತ್ಯೆ ಪ್ರಕರಣಗಳು
ಸಾಂದರ್ಭಿಕ ಚಿತ್ರ
ಹೌರಾ,ನ.4: ಮತದಾರಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ನಡೆಯುತ್ತಿರುವ ಹಿನ್ನೆಲೆಯಲ್ಲಿ ತನ್ನ ಗುರುತಿನ ದಾಖಲೆಯಲ್ಲಿರುವ ತಪ್ಪುಗಳ ಬಗ್ಗೆ ಆತಂಕಗೊಂಡ 30 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.
ಉಲುಬೇರಿಯಾ ಪಟ್ಟಣದ ಖಲಿಸಾನಿ ನಿವಾಸಿ ಜಹೀರ್ ಮಾಲ್ ಅವರು ತನ್ನ ನಿವಾಸದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನ ಅಧಿಕೃತ ದಾಖಲೆಪತ್ರವೊಂದರಲ್ಲಿ ಕಾಗುಣಿತ (ಸ್ಪೆಲ್ಲಿಂಗ್) ತಪ್ಪು ಇರುವುದನ್ನು ಕಂಡುಕೊಂಡ ಬಳಿಕ ಜಹೀರ್ ತೀವ್ರ ಖಿನ್ನತೆಗೆ ಒಳಗಾಗಿದ್ದರು ಎಂದು ಆತನ ಕುಟುಂಬಿಕರು ಮಾಹಿತಿ ನೀಡಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಧಿಕೃತ ದಾಖಲೆಯಲ್ಲಿರುವ ತಪ್ಪನ್ನು ಸರಿಪಡಿಸಲು ಕಳೆದ ಕೆಲವು ವಾರಗಳಿಂದ ಆತ ಸಂಬಂಧಪಟ್ಟಂತಹ ಸ್ಥಳೀಯ ಕಚೇರಿಗಳಿಗೆ ಅಲೆದಾಡಿದ್ದ. ಆದರೂ ಪ್ರಯೋಜನವಾಗಲಿಲ್ಲವೆಂದು ಅವರು ಹೇಳಿದ್ದಾರೆ.
‘‘ಈ ತಪ್ಪಿನಿಂದಾಗಿ ಎಸ್‌ಐಆರ್ ಪ್ರಕ್ರಿಯೆಯ ಸಂದರ್ಭದಲ್ಲಿ ತನ್ನ ಪೌರತ್ವ ಅಥವಾ ಮತದಾನದ ಅರ್ಹತೆಯನ್ನು ದೃಢಪಡಿಸುವಲ್ಲಿ ಸಮಸ್ಯೆಗಳು ಉಂಟಾಗಬಹುದೆಂದು ಆತ ಆತಂಕಗೊಂಡಿದ್ದರು’’ ಎಂದು ಅಧಿಕಾರಿ ತಿಳಿಸಿದ್ದಾರೆ.
ಎಸ್‌ಐಆರ್ ಪ್ರಕ್ರಿಯೆ ಸಂದರ್ಭ ತಮ್ಮ ಹೆಸರುಗಳನ್ನು ಮತದಾರ ಪಟ್ಟಿಯಿಂದ ತೆಗೆದು ಹಾಕಲಾಗುವುದೆಂಬ ಭೀತಿಯಿಂದ ಪಶ್ಚಿಮಬಂಗಾಳದಲ್ಲಿ ಕಳೆದ ಒಂದು ವಾರದಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ.
ಪಶ್ಚಿಮಬಂಗಾಳದ ಕೂಚ್‌ಬೆಹಾರ್‌ನಲ್ಲಿ ಕಳೆದ ವಾರ 70 ವರ್ಷ ವಯಸ್ಸಿನ ರೈತ ಖೈರುಲ್ ಶೇಖ್ ಎಂಬವರು, ತನ್ನ ಅಧಿಕೃತ ದಾಖಲೆಗಳಲ್ಲಿರುವ ಕಾಗುಣಿತದ ತಪ್ಪಿನ ಕಾರಣ ಮತದಾರ ಪಟ್ಟಿಯಿಂದ ತನ್ನ ಹೆಸರನ್ನು ತೆಗೆದುಹಾಕಲಾಗುವುದೆಂಬ ಆತಂಕದಿಂದ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಚುನಾವಣಾ ಆಯೋಗವು ಪಶ್ಚಿಮಬಂಗಾಳ ಸೇರಿದಂತೆ 12 ರಾಜ್ಯ ಮತ್ತು ಕೇಂದ್ರಾಡಳಿತಗಳಲ್ಲಿ ಮಂಗಳವಾರ ಮತದಾರಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಯನ್ನು ಆರಂಭಿಸಿದೆ.