ಸಿಸೋಡಿಯಾ ವಿವಾದಾತ್ಮಕ ಹೇಳಿಕೆ ಆರೋಪ; ಸೂಕ್ತ ಕ್ರಮಕ್ಕೆ ವಿರೋಧ ಪಕ್ಷಗಳ ಆಗ್ರಹ
PC: x.com/thetribunechd
ಛತ್ತೀಸ್ಗಢ: ಪಂಜಾಬ್ ನಲ್ಲಿ ಮುಂದಿನ ವಿಧಾನಸಭಾ ಚುನಾವಣೆ ಗೆಲ್ಲಲು ಎಎಪಿ ಕಾರ್ಯಕರ್ತರು ಸಾಮ, ದಾನ, ಭೇದ, ದಂಡ,ಲಡಾಯಿ, ಜಗಳ ಕ್ರಮವನ್ನು ಅನುಸರಿಸುವಂತೆ ಆಮ್ ಆದ್ಮಿ ಪಕ್ಷದ ಮುಖಂಡ ಮನೀಶ್ ಸಿಸೋಡಿಯಾ ನೀಡಿದ್ದಾರೆ ಎನ್ನಲಾದ ಹೇಳಿಕೆ ಪಂಜಾಬ್ ರಾಜಕೀಯದಲ್ಲಿ ವಿಪ್ಲವ ಸೃಷ್ಟಿಸಿದೆ. ಪಂಜಾಬ್ ಉಸ್ತುವಾರಿ ಹೊಣೆ ಹೊಂದಿರುವ ಸಿಸೋಡಿಯಾ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸಿವೆ.
ಈ ಸಂಬಂಧ ಸಿಸೋಡಿಯಾ ನೀಡಿದ್ದಾರೆ ಎನ್ನಲಾದ ಹೇಳಿಕೆಯ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪಂಜಾಬ್ ಬಿಜೆಪಿ ಅಧ್ಯಕ್ಷ ಸುನೀಲ್ ಜಾಖಡ್ ಚುನಾವಣಾ ಆಯೋಗಕ್ಕೆ ಈ ಸಂಬಂಧ ಪತ್ರ ಬರೆದು ಸಿಸೋಡಿಯಾ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಆಗ್ರಹಿಸಿದ್ದಾರೆ. ಅವರನ್ನು ಮುಂದಿನ ಯಾವುದೇ ಚುಣಾವಣೆಗಳಿಗೆ ಸ್ಪರ್ಧಿಸದಂತೆ ನಿಷೇಧ ಹೇರಬೇಕು ಹಾಗೂ ಭಾಷಣಗಳನ್ನು ಮಾಡದಂತೆ ತಡೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಶಿರೋಮಣಿ ಅಕಾಲಿದಳ ಇನ್ನೂ ಒಂದು ಹೆಜ್ಜೆ ಮುಂದುವರಿದು, ಪಂಜಾಬ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಮನವಿ ಮಾಡಿದೆ.
ಆದರೆ ಎಎಪಿ ಮುಖಂಡರು ಸಿಸೋಡಿಯಾ ಅವರ ಬೆನ್ನಿಗೆ ನಿಂತಿದ್ದು, ಬೇರೆ ಯಾವುದೋ ಸಂದರ್ಭದಲ್ಲಿ ನೀಡಿದ ಹೇಳಿಕೆಯನ್ನು ತಿರುಚಿ ಚುನಾವಣಾ ಸಂದರ್ಭಕ್ಕೆ ನೀಡಿದ ಕರೆ ಎಂದು ವಿಶ್ಲೇಷಿಸಲಾಗುತ್ತಿದೆ ಎಂದು ಪ್ರತಿಪಾದಿಸಿದೆ. ಮೊಹಾಲಿಯಲ್ಲಿ ಆಗಸ್ಟ್ 13ರಂದು ನಡೆದ ಪಕ್ಷದ ಮಹಿಳಾ ಘಟಕದ ನಾಯಕತ್ವ ತರಬೇತಿ ಶಿಬಿರದಲ್ಲಿ ಸಿಸೋಡಿಯಾ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
"ಪಂಜಾಬ್ ವಿಧಾನಸಭೆಗೆ 2027ರಲ್ಲಿ ನಡೆಯುವ ಚುನಾವಣೆಯಲ್ಲಿ ಗೆಲ್ಲಲು ಅಗತ್ಯವಿರುವ ಎಲ್ಲ ತಂತ್ರಗಳನ್ನು ಅನುಸರಿಸಬೇಕು. ಸತ್ಯ, ಸುಳ್ಳು, ಪ್ರಶ್ನೆ, ಉತ್ತರ, ಹೋರಾಟ, ಜಗಳ ನಾವು ಏನೇನು ಮಾಡಬೇಕೋ ಅದನ್ನು ಮಾಡಿಯೇ ಮಾಡುತ್ತೇವೆ. ನೀವು ಸಿದ್ಧರಿದ್ದೀರಾ? " ಎಂದು ಸಿಸೋಡಿಯಾ ಹೇಳಿದ್ದಾಗಿ ವಿಡಿಯೊದಿಂದ ತಿಳಿದುಬರುತ್ತದೆ. ಈ ಸಭೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಹಾಗೂ ಪಕ್ಷದ ಪಂಜಾಬ್ ಘಟಕದ ಅಧ್ಯಕ್ಷ ಅಮನ್ ಅರೋರಾ ಕೂಡಾ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ವರ್ಚುವಲ್ ಭಾಷಣ ಮಾಡಿದ್ದರು.