×
Ad

ಬೆಳ್ಳಿ ಬಳೆ, ಆಭರಣಕ್ಕಾಗಿ ಚಿತೆಯ ಮೇಲೆ ಮಲಗಿ ತಾಯಿಯ ಅಂತ್ಯಕ್ರಿಯೆಗೆ ಅಡ್ಡಿಪಡಿಸಿದ ಪುತ್ರ!

Update: 2025-05-16 17:06 IST

PC : X 

ಜೈಪುರ : ರಾಜಸ್ಥಾನದ ಜೈಪುರದಲ್ಲಿ ಬೆಳ್ಳಿ ಬಳೆ, ಆಭರಣಕ್ಕಾಗಿ ವ್ಯಕ್ತಿಯೋರ್ವ ತನ್ನ ತಾಯಿಯ ಅಂತ್ಯಕ್ರಿಯೆಗೆ ಅಡ್ಡಿಪಡಿಸಿರುವ ಘಟನೆ ನಡೆದಿದೆ. ಈ ಕುರಿತ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.

ಜೈಪುರ ಗ್ರಾಮೀಣ ಪ್ರದೇಶದ ವಿರಾಟ್ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮೇ 3ರಂದು ಚೀತರ್ ರೇಗರ್(80) ಎಂಬವರು ನಿಧನರಾಗಿದ್ದರು. ಅವರ ಅಂತಿಮ ವಿಧಿವಿಧಾನಗಳಿಗಾಗಿ ಪುತ್ರರು ಮತ್ತು ಸಂಬಂಧಿಕರು ಮೃತದೇಹವನ್ನು ಸ್ಥಳೀಯ ಸ್ಮಾಶನಕ್ಕೆ ಕೊಂಡೊಯ್ದರು. ಅಂತ್ಯಕ್ರಿಯೆಗೆ ಸಿದ್ಧತೆಗಳು ನಡೆಯುತ್ತಿದ್ದಾಗ ಕುಟುಂಬದ ಹಿರಿಯರು ಆಕೆಯ ಬೆಳ್ಳಿ ಬಳೆಗಳು ಮತ್ತು ಇತರ ಆಭರಣಗಳನ್ನು ಆಕೆಯ ಹಿರಿಯ ಮಗ ಗಿರ್ಧಾರಿ ಲಾಲ್‌ಗೆ ಹಸ್ತಾಂತರಿಸಿದರು. ಅವರು ಆಕೆಯನ್ನು ನೋಡಿಕೊಂಡಿದ್ದರು. ಆದರೆ ಕಿರಿಯ ಮಗ ಓಂಪ್ರಕಾಶ್ ಇದಕ್ಕೆ ಕೋಪಗೊಂಡಿದ್ದಾನೆ. ಅಂತ್ಯಕ್ರಿಯೆಗೆ ಸಿದ್ಧಪಡಿಸಿದ ಚಿತೆಯ ಮೇಲೆ ಮಲಗಿ ಬೆಳ್ಳಿ ಬಳೆಗಳನ್ನು ನೀಡದ ಹೊರತು ದಹನ ಕ್ರಿಯೆಯನ್ನು ಮುಂದುವರಿಸಲು ಬಿಡುವುದಿಲ್ಲ ಎಂದು ರಾದ್ಧಾಂತ ನಡೆಸಿದ್ದಾನೆ.

ಬಳಿಕ ಸಂಬಂಧಿಕರು ಮತ್ತು ಗ್ರಾಮಸ್ಥರು ಆತನನ್ನು ಚಿತೆಯ ಮೇಲಿನಿಂದ ಕೆಳಗಿಳಿಸಿ ಅಂತ್ಯಕ್ರಿಯೆಗೆ ಮನವೊಲಿಸಲು ಪ್ರಯತ್ನಿಸಿದರು. ಆದರೆ ಓಂಪ್ರಕಾಶ್ ಇದಕ್ಕೆ ಸಮ್ಮತಿಸಿಲ್ಲ.

ತನ್ನ ಬೇಡಿಕೆ ಈಡೇರಿಸದಿದ್ದರೆ ಚಿತೆಯಲ್ಲಿ ಮಲಗಿ ಜೀವಂತವಾಗಿ ಸುಟ್ಟುಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. ಕೊನೆಗೆ ಆತನನ್ನು ಚಿತೆಯಿಂದ ಬಲವಂತವಾಗಿ ಕೆಳಗಿಳಿಸಲಾಗಿದೆ. ಆತ ಅಲ್ಲೇ ಪಕ್ಕದಲ್ಲಿ ಕುಳಿತು ಪ್ರತಿಭಟನೆ ಮುಂದುವರಿಸಿದ್ದಾನೆ. ಆಭರಣಗಳನ್ನು ಹಸ್ತಾಂತರಿಸಿದ ನಂತರವೇ ಆತ ಅಂತ್ಯಕ್ರಿಯೆಯನ್ನು ಮುಂದುವರಿಸಲು ಒಪ್ಪಿಕೊಂಡಿದ್ದಾನೆ. ಇದರಿಂದಾಗಿ ಮಧ್ಯಾಹ್ನ ನಿಗದಿಯಾಗಿದ್ದ ಅಂತ್ಯಕ್ರಿಯೆ ಸುಮಾರು ಎರಡು ಗಂಟೆಗಳ ಕಾಲ ವಿಳಂಬವಾಗಿದೆ.

ಈ ಕುರಿತ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗ್ರಾಮಸ್ಥರ ಪ್ರಕಾರ, ಓಂಪ್ರಕಾಶ್ ಮತ್ತು ಸಹೋದರರ ನಡುವೆ ಬಹಳ ಕಾಲದಿಂದ ಆಸ್ತಿ ವಿವಾದವಿದೆ. ಅವರು ಕುಟುಂಬದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News