ಸೋನಮ್ ವಾಂಗ್ಚುಕ್ ಬಂಧನ : ಕೇಂದ್ರ ಸರಕಾರಕ್ಕೆ ಉದ್ಧವ್ ಠಾಕ್ರೆ ತರಾಟೆ
ಉದ್ಧವ್ ಠಾಕ್ರೆ |PC ; PTI
ಹೊಸದಿಲ್ಲಿ, ಸೆ. 27: ಜನಪ್ರಿಯ ಪರಿಸರ ಹೋರಾಟಗಾರ ಸೋನಂ ವಾಂಗ್ಚುಕ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿ ಬಂಧಿಸಿರುವುದನ್ನು ಶನಿವಾರ ಖಂಡಿಸಿರುವ ಶಿವಸೇನಾ (ಯುಬಿಟಿ) ವರಿಷ್ಠ ಉದ್ಧವ್ ಠಾಕ್ರೆ, ಇದು ದೇಶಭಕ್ತಿಗೆ ಮಾಡಿದ ದ್ರೋಹ ಎಂದಿದ್ದಾರೆ.
ಮುಂಬೈಯಲ್ಲಿ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಉದ್ಧವ್ ಠಾಕ್ರೆ, ಸುಸ್ಥಿರ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಭಾರತೀಯ ಸೇನೆಯೊಂದಿಗೆ ನಿಕಟವಾಗಿ ಕಾರ್ಯ ನಿರ್ವಹಿಸಿದ ವಾಂಗ್ಚುಕ್ ಅವರನ್ನು ದೇಶದ ಶತ್ರುವಂತೆ ನಡೆಸಿಕೊಳ್ಳಲಾಗುತ್ತಿದೆ. ಆದರೆ, ಗಡಿಯಾಚೆಗೆ ಭಯೋತ್ಪಾದನೆಗೆ ಪ್ರಚೋದನೆ ನೀಡುವ ದೇಶದೊಂದಿಗೆ ಕ್ರಿಕೆಟ್ ಆಡುವುದನ್ನು ಭಾರತ ಮುಂದುವರಿಸಿದೆ ಎಂದರು.
‘‘ಇದು ದುರಾದೃಷ್ಟಕರ. ಸೋನಮ್ ವಾಂಗ್ಚುಕ್ ಅವರು ದುರ್ಗಮ ಪ್ರದೇಶಗಳಲ್ಲಿ ಭಾರತೀಯ ಸೇನೆಗೆ ಸೋಲಾರ್ ಟೆಂಟ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ನಮ್ಮ ಸೇನೆಗಾಗಿ ಕಾರ್ಯ ನಿರ್ವಹಿಸಿದ ಓರ್ವ ವ್ಯಕ್ತಿಯನ್ನು ದೇಶ ವಿರೋಧಿ ಎಂದು ಬಿಂಬಿಸಲಾಗಿದೆ ಹಾಗೂ ಎನ್‌ಎಸ್‌ಎ ಅಡಿಯಲ್ಲಿ ಬಂಧಿಸಲಾಗಿದೆ. ಆದರೆ, ನೀವು ಭಾರತದಲ್ಲಿ ಭಯೋತ್ಪಾದನೆಯನ್ನು ಹರಡುವ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡುತ್ತಿದ್ದೀರಿ. ಯಾವ ರೀತಿಯ ದೇಶ ಪ್ರೇಮ ಇದು?’’ ಎಂದು ಠಾಕ್ರೆ ಪ್ರಶ್ನಿಸಿದ್ದಾರೆ.
ದೇಶ ಪ್ರೇಮಿಗಳೆನಿಸಿಕೊಂಡವರು ಭಾರತ ಹಾಗೂ ಪಾಕಿಸ್ತಾನದ ನಡುವಿನ ಏಶ್ಯ ಕಪ್ ಪೈನಲ್ ಪಂದ್ಯವನ್ನು ಬಹಿಷ್ಕರಿಸುವಂತೆ, ಯಾವುದೇ ಕಂಪೆನಿಗಳು ಕೂಡ ಆ ಪಂದ್ಯಕ್ಕೆ ಜಾಹೀರಾತು ನೀಡದಂತೆ ಉದ್ಧವ್ ಠಾಕ್ರೆ ಕರೆ ನೀಡಿದ್ದಾರೆ.