ಸೋನಮ್ ವಾಂಗ್ಚುಕ್ ಬಂಧನ ಪ್ರಶ್ನಿಸಿ ಅರ್ಜಿ; ನ.24ರಂದು ಸುಪ್ರೀಂ ಕೋರ್ಟ್ ನಿಂದ ವಿಚಾರಣೆ
ಸೋನಮ್ ವಾಂಗ್ಚುಕ್ | PC : PTI
ಹೊಸದಿಲ್ಲಿ, ನ. 23: ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿಯಲ್ಲಿ ಪರಿಸರ ಹೋರಾಟಗಾರ ಸೋನಮ್ ವಾಗ್ಚುಕ್ ಅವರನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಅವರ ಪತ್ನಿ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆ ನಡೆಸಲಿದೆ.
ಸೋನಮ್ ವಾಗ್ಚುಕ್ ಅವರ ಬಂಧನ ಕಾನೂನು ಬಾಹಿರ, ಏಕಪಕ್ಷಿಯ ಕ್ರಮ ಹಾಗೂ ಅವರು ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಜೆ. ಆ್ಯಂಗ್ಮೊ ಅರ್ಜಿಯಲ್ಲಿ ವಾದಿಸಿದ್ದಾರೆ.
ಆಂಗ್ಮೊ ಸಲ್ಲಿಸಿದ ತಿದ್ದುಪಡಿ ಅರ್ಜಿ ಕುರಿತಂತೆ ಸುಪ್ರೀಂ ಕೋರ್ಟ್ ಅಕ್ಟೋಬರ್ 29ರಂದು ಕೇಂದ್ರ ಸರಕಾರ ಹಾಗೂ ಲಡಾಖ್ ಆಡಳಿತದ ಪ್ರತಿಕ್ರಿಯೆ ಕೇಳಿತ್ತು. ಸುಪ್ರೀಂ ಕೋರ್ಟ್ನ ವೇಳಾಪಟ್ಟಿಯ ಪ್ರಕಾರ ಈ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಹಾಗೂ ಎನ್.ವಿ. ಅಂಜಾರಿಯಾ ಅವರ ಪೀಠ ನವೆಂಬರ್ 24ರಂದು ವಿಚಾರಣೆ ನಡೆಸಲಿದೆ.
ಸೆಪ್ಪಂಬರ್ 26ರಂದು ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ)ಅಡಿ ವಾಂಗ್ಚುಕ್ ಅವರನ್ನು ಬಂಧಿಸಲಾಗಿತ್ತು. ಲಡಾಖ್ಗೆ ರಾಜ್ಯದ ಸ್ಥಾನಮಾನ ನೀಡಬೇಕೆಂದು ಹಾಗೂ ಸಂವಿಧಾನ 6ನೇ ಪರಿಚ್ಛೇದವನ್ನು ಅನುಷ್ಠಾಗೊಳಿಸುವಂತೆ ಒತ್ತಾಯಿಸಿ ನಡೆದ ಹಿಂಸಾತ್ಮಕ ಪ್ರತಿಭಟನೆಗಳ ಎರಡು ದಿನಗಳ ಬಳಿಕ ಅವರನ್ನು ಬಂಧಿಸಲಾಗಿತ್ತು. ಈ ಪ್ರತಿಭಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದರು ಹಾಗೂ 90 ಮಂದಿ ಗಾಯಗೊಂಡಿದ್ದರು.
ವಾಂಗ್ಚುಕ್ ಅವರು ಹಿಂಸಾಚಾರಕ್ಕೆ ಪ್ರಚೋದಿಸಿದ್ದಾರೆ ಎಂದು ಸರಕಾರ ಆರೋಪಿಸಿತ್ತು.