FACT CHECK | ಲಡಾಖ್ ಹಿಂಸಾಚಾರದ ನಂತರ ದಾರಿ ತಪ್ಪಿಸುವ ಹೇಳಿಕೆಗಳೊಂದಿಗೆ ಮುಹಮ್ಮದ್ ಯೂನುಸ್ ರೊಂದಿಗಿನ ಸೋನಂ ವಾಂಗ್ಚುಕ್ ರ ಫೋಟೊ ವೈರಲ್
PC : @zoo_bear
ಹೊಸದಿಲ್ಲಿ: ಲಡಾಖ್ ಹಿಂಸಾಚಾರದ ಬೆನ್ನಿಗೇ, ಭಾರತೀಯ ಹವಾಮಾನ ಹೋರಾಟಗಾರ ಸೋನಂ ವಾಂಗ್ಚುಕ್ ಹಾಗೂ ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯಸ್ಥ ಮುಹಮ್ಮದ್ ಯೂನುಸ್ ಪರಸ್ಪರ ಆಲಂಗಿಸಿಕೊಂಡಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಸೆಪ್ಟೆಂಬರ್ 24ರಂದು ಹಿಂಸಾಚಾರಕ್ಕೆ ಲಡಾಖ್ ಸಾಕ್ಷಿಯಾಯಿತು. ಲಡಾಖ್ ಗೆ ರಾಜ್ಯ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆಗಿಳಿದಿದ್ದ ಯುವಕರು ಭಾರತೀಯ ಜನತಾ ಪಕ್ಷದ ಪ್ರಾದೇಶಿಕ ಕಚೇರಿಗೆ ಬೆಂಕಿ ಹಚ್ಚಿದ್ದರು. ಅವರು ಪೊಲೀಸ್ ಠಾಣೆಯೊಂದಕ್ಕೂ ಬೆಂಕಿ ಹಚ್ಚಿದ್ದರಿಂದ, ಕನಿಷ್ಠ 30 ಮಂದಿ ಪೊಲೀಸ್ ಸಿಬ್ಬಂದಿಗಳು ಗಾಯಗೊಂಡಿದ್ದರು. ಇದಕ್ಕೆ ಪ್ರತಿಯಾಗಿ ಪೊಲೀಸರು ಗುಂಡು ಹಾಗೂ ಅಶ್ರುವಾಯು ಶೆಲ್ ಸಿಡಿಸಿದ್ದರಿಂದ, ನಾಲ್ವರು ಮೃತಪಟ್ಟು, ಹತ್ತಾರು ಮಂದಿ ಗಾಯಗೊಂಡಿದ್ದರು.
ಬಳಿಕ, ಅಂದು ಪ್ರಕಟನೆ ಬಿಡುಗಡೆ ಮಾಡಿದ್ದ ಗೃಹ ವ್ಯವಹಾರಗಳ ಸಚಿವಾಲಯ, “ಆತ್ಮರಕ್ಷಣೆಗಾಗಿ ಪೊಲೀಸರು ಗುಂಡಿನ ದಾಳಿ ನಡೆಸಬೇಕಾಗಿ ಬಂದಿದ್ದು, ದುರದೃಷ್ಟವಶಾತ್ ಈ ಘಟನೆಯಲ್ಲಿ ಕೆಲವು ಸಾವುಗಳು ವರದಿಯಾಗಿವೆ” ಎಂದು ಹೇಳಿದೆ.
ಈ ಪ್ರಕ್ಷುಬ್ಧತೆಗೆ ಹವಾಮಾನ ಹೋರಾಟಗಾರ ಸೋನಂ ವಾಂಗ್ಚುಕ್ ಕಾರಣ ಎಂದೂ ಗೃಹ ಸಚಿವಾಲಯ ಆರೋಪಿಸಿತ್ತು. ಸೋನಂ ವಾಂಗ್ಚುಕ್, ಅರಬ್ ಸ್ಪ್ರಿಂಗ್ಸ್ ಶೈಲಿಯ ಪ್ರತಿಭಟನೆ ಹಾಗೂ ಇತ್ತೀಚಿಗೆ ನೇಪಾಳದಲ್ಲಿ ನಡೆದಿದ್ದ ಜೆನ್ ಝೀ ಪ್ರತಿಭಟನೆಗಳಿಗೆ ತಮ್ಮ ಭಾಷಣಗಳ ಮೂಲಕ ಪ್ರಚೋದನೆ ನೀಡಿದ್ದರು ಎಂದೂ ಅದು ದೂರಿದೆ.
ಇದರ ಬೆನ್ನಿಗೇ, ಸೆಪ್ಟೆಂಬರ್ 26ರಂದು ಸೋನಂ ವಾಂಗ್ಚುಕ್ ರನ್ನು ಪೊಲೀಸರು ಬಂಧಿಸಿದ್ದರು.
ಈ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮ ಬಳಕೆದಾರರ ಒಂದು ವರ್ಗ ಊಹಾತ್ಮಕ ಶೀರ್ಷಿಕೆ ಹೊಂದಿರುವ ಪೋಸ್ಟ್ ಗಳನ್ನು ಮಾಡಿತ್ತು. ಪ್ರತಿಭಟನಾಕಾರರೊಂದಿಗೆ ಕಾಂಗ್ರೆಸ್ ಕೌನ್ಸಿಲರ್ ಫುನ್ಸ್ಟಾಂಗ್ ಸ್ಟ್ಯಾಂಝಿನ್ ಸೆಪಾಗ್ ಕೂಡಾ ಇದ್ದರು ಎಂದು ಆರೋಪಿಸಲಾಗಿತ್ತು.
ಸೆಪ್ಟೆಂಬರ್ 24ರಂದು ಬಿಜೆಪಿ ನಾಯಕ ಸಂಬಿತ್ ಪಾತ್ರ ಮೊದಲಿಗೆ ಈ ಆರೋಪ ಮಾಡಿದ್ದರು. ಬಳಿಕ ಇದು ಸುಳ್ಳು ಆರೋಪ ಎಂಬುದನ್ನು ಆಲ್ಟ್ ನ್ಯೂಸ್ ಸತ್ಯಶೋಧನಾ ವೇದಿಕೆ ಬಯಲು ಮಾಡಿತ್ತು.
ವಾಂಗ್ಚುಕ್ ನಕಲಿ ವ್ಯಕ್ತಿ ಎಂಬ ಹಣೆಪಟ್ಟಿ ಹಚ್ಚಿ ದಿ ಸ್ಕಿನ್ ಡಾಕ್ಟರ್ ಎಂಬ ಎಕ್ಸ್ ಬಳಕೆದಾರರು ಚಿತ್ರವೊಂದನ್ನು ಹಂಚಿಕೊಂಡಿದ್ದರು. ಈ ಚಿತ್ರವನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದ ಸುಳ್ಳು ಪ್ರಚಾರ ಅಂತರ್ಜಾಲ ತಾಣವಾದ Opindia, ಲಡಾಖ್ ಪ್ರತಿಭಟನೆ ಯೋಜಿತ ರಾಜಕೀಯ ಹಿಂಸಾಚಾರ ಎಂದು ಆರೋಪಿಸಿತ್ತು.
ಅದೇ ಚಿತ್ರವನ್ನು ಸೆಪ್ಟೆಂಬರ್ 24 ಹಾಗೂ 25ರಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಮರು ಹಂಚಿಕೊಂಡಿದ್ದು, ಈ ಪೈಕಿ ಕೆಲವರು ಇತ್ತೀಚೆಗೆ ವಾಂಗ್ಚುಕ್ ಹಾಗೂ ಯೂನಸ್ ಪರಸ್ಪರ ಭೇಟಿಯಾಗಿದ್ದಾರೆ ಎಂದೇ ನೇರವಾಗಿ ಆರೋಪಿಸಿದ್ದರು.
ಆದರೆ ಈ ಚಿತ್ರವನ್ನು ರಿವರ್ಸ್ ಇಮೇಜ್ ಸರ್ಚ್ ಗೆ ಒಳಪಡಿಸಿದಾಗ, ಆ ಚಿತ್ರವು ಫೆಬ್ರವರಿ 8, 2020ರಲ್ಲಿ ಸೋನಂ ವಾಂಗ್ಚುಕ್ ಅಪ್ಲೋಡ್ ಮಾಡಿದ್ದ ಚಿತ್ರ ಎಂಬುದು ಪತ್ತೆಯಾಗಿತ್ತು. “ಢಾಕಾದ ಬ್ರಿಟಿಷ್ ಹೈಕಮಿಷನ್ ಕಚೇರಿಯಲ್ಲಿ ಡಾ. ಯೂನುಸ್ ರ ಅದ್ಭುತ ಭೇಟಿ. ನೊಬೆಲ್ ಪ್ರಶಸ್ತಿ ವಿಜೇತ ಹಾಗೂ ವಿಶ್ವದ ಅತಿ ದೊಡ್ಡ ಸಾಮಾಜಿಕ ಉದ್ಯಮಿಗಳ ಪೈಕಿ ಒಬ್ಬರಾದ ಅವರು ಈಗಲೂ ಪ್ರೀತಿ ತೋರುವುದರಲ್ಲಿ ವಿನಮ್ರರಾಗಿದ್ದಾರೆ” ಎಂದು ಆ ಪೋಸ್ಟ್ ಗೆ ಶೀರ್ಷಿಕೆ ನೀಡಲಾಗಿತ್ತು. ಈ ಚಿತ್ರವನ್ನು ಫೇಸ್ ಬುಕ್ ನಲ್ಲೂ ವಾಂಗ್ಚುಕ್ ಹಂಚಿಕೊಂಡಿದ್ದರು.
2020ರಲ್ಲಿ ಮುಹಮ್ಮದ್ ಯೂನುಸ್ ಅವರು ಯಾವುದೇ ರಾಜಕೀಯ ಹುದ್ದೆಯನ್ನು ಹೊಂದಿರಲಿಲ್ಲ ಎಂಬುದಿಲ್ಲಿ ಗಮನಾರ್ಹ. ಆಗವರು ಕೇವಲ ಅರ್ಥಶಾಸ್ತ್ರಜ್ಞರು ಹಾಗೂ ನೊಬೆಲ್ ಪ್ರಶಸ್ತಿ ವಿಜೇತರಾಗಿದ್ದರು. 2024ರಲ್ಲಿ ಶೇಖ್ ಹಸೀನಾರ ಸರಕಾರ ಪತನಗೊಂಡ ನಂತರ, ಮುಹಮ್ಮದ್ ಯೂನುಸ್ ಬಾಂಗ್ಲಾದೇಶ ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರರಾಗಿದ್ದರು.
ಹೀಗಾಗಿ, 2020ರಲ್ಲಿ ಹವಾಮಾನ ಹೋರಾಟಗಾರ ಸೋನಂ ವಾಂಗ್ಚುಕ್ ಹಾಗೂ ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯಸ್ಥ ಮುಹಮ್ಮದ್ ಯೂನುಸ್ ಒಟ್ಟಾಗಿರುವ ಚಿತ್ರವನ್ನು ಸೆಪ್ಟೆಂಬರ್ 24, 2025ರಂದು ಲಡಾಖ್ ನಲ್ಲಿ ನಡೆದ ಹಿಂಸಾಚಾರದ ನಂತರ ಹಂಚಿಕೊಳ್ಳುವುದು ದಾರಿ ತಪ್ಪಿಸುವ ತಂತ್ರವಾಗಿದೆ.
ಸೌಜನ್ಯ: altnews.in