ಬಿಜೆಪಿ ಆಳ್ವಿಕೆಯಲ್ಲಿ ಸಂವಿಧಾನವು ದಿಗ್ಬಂಧನಕ್ಕೊಳಗಾಗಿದೆ: ಸೋನಿಯಾ ಗಾಂಧಿ ಆಕ್ರೋಶ
ಸೋನಿಯಾಗಾಂಧಿ | PTI
ಹೊಸದಿಲ್ಲಿ,ಆ.2: ಪ್ರಸಕ್ತ ಸನ್ನಿವೇಶದಲ್ಲಿ ಭಾರತೀಯ ಸಂವಿಧಾನವು ದಿಗ್ಬಂಧನಕ್ಕೊಳಗಾಗಿದ್ದು, ಅದರ ಪ್ರತಿಯೊಂದು ಚೌಕಟ್ಟನ್ನು ಕಿತ್ತುಹಾಕಲು ಆಡಳಿತಾರೂಢ ಬಿಜೆಪಿಯು ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆಯೆಂದು ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಆಪಾದಿಸಿದ್ದಾರೆ.
ಪ್ರಜಾತಾಂತ್ರಿಕ ಗಣರಾಜ್ಯವಾದ ಭಾರತವನ್ನು ಕೆಲವೇ ಮಂದಿಯ ಹಿತವನ್ನು ಕಾಪಾಡುವ ಪುರೋಹಿತಶಾಹಿ, ಕಾರ್ಪೋರೇಟ್ ರಾಷ್ಟ್ರವಾಗಿ ಬದಲಾಯಿಸುವುದಕ್ಕಾಗಿ ‘ಸೈದ್ಧಾಂತಿಕ ಬಂಡಾಯ’ವನ್ನು ಸೃಷ್ಟಿಸಲು ಬಿಜೆಪಿ ಬಯಸುತ್ತಿದೆ ಎಂದು ಆಕೆ ಆಪಾದಿಸಿದ್ದಾರೆ.
‘ಸಾಂವಿಧಾನಿಕ ಸವಾಲುಗಳು-ಪರಿಕಲ್ಪನೆಗಳು ಹಾಗೂ ಮಾರ್ಗಗಳು’ ಕುರಿತ ರಾಷ್ಟ್ರೀಯ ಕಾನೂನು ಸಮಾವೇಶದಲ್ಲಿ ಸೋನಿಯಾ ಅವರ ಈ ವಿಶೇಷ ಸಂದೇಶವನ್ನು ಓದಲಾಯಿತು. ಸಂವಿಧಾನವನ್ನು ದುರ್ಬಲಗೊಳಿಸಲು ನಡೆಸುವ ಪ್ರತಿಯೊಂದು ಪ್ರಯತ್ನವನ್ನು ಕಾಂಗ್ರೆಸ್ ಪಕ್ಷವು ಸಂಸತ್ ನಲ್ಲಿ, ನ್ಯಾಯಾಲಯಗಳಲ್ಲಿ ಹಾಗೂ ಬೀದಿಗಳಲ್ಲಿ ವಿರೋಧಿಸಲಿದೆ. ಕಾಂಗ್ರೆಸ್ ಪಕ್ಷಕ್ಕೆ ಇದು ಕೇವಲ ರಾಜಕೀಯ ಹೋರಾಟ ಮಾತ್ರವಲ್ಲ ಪ್ರತಿಯೋರ್ವ ಭಾರತೀಯನ ಘನತೆಯನ್ನು ರಕ್ಷಿಸುವ ಸೈದ್ಧಾಂತಿಕ ಬದ್ಧತೆಯೂ ಆಗಿದೆಯೆಂದು ಅವರು ಹೇಳಿದ್ದಾರೆ.
‘‘ ಇಂದು ಭಾರತದ ಸಂವಿಧಾನ ದಿಗ್ಬಂಧನಕ್ಕೊಳಗಾಗಿದೆ. ಸ್ವಾತಂತ್ರ್ಯಕ್ಕಾಗಿ ಅಥವಾ ಸಮಾನತೆಗಾಗಿ ಯಾವತ್ತೂ ಹೋರಾಡದ ಬಿಜೆಪಿಯು, ಈಗ ಅದು ದೀರ್ಘಕಾಲದಿಂದ ವಿರೋಧಿಸುತ್ತಾ ಬಂದಿರುವ ಸಂವಿಧಾನದ ಪ್ರತಿಯೊಂದು ಚೌಕಟ್ಟನ್ನು ಕಿತ್ತುಹಾಕಲು ಯತ್ನಿಸುತ್ತಿದೆ’’ ಎಂದರು.
‘‘ಬಿಜೆಪಿ-ಆರೆಸ್ಸೆಸ್‌ನ ಸೈದ್ಧಾಂತಿಕ ಪೂರ್ವಜರು ಮನುಸ್ಮೃತಿಯನ್ನು ವೈಭವೀಕರಿಸಿದರು. ತ್ರಿವರ್ಣಧ್ವಜವನ್ನು ತಿರಸ್ಕರಿಸಿದರು. ಠೊಳ್ಳು ಪ್ರಜಾಪ್ರಭುತ್ವವಿರುವ ಹಾಗೂ ತಾರತಮ್ಯವೇ ಕಾನೂನಾಗಿರುವಂತಹ ಹಿಂದೂರಾಷ್ಟ್ರದ ಕಲ್ಪನೆಯನ್ನು ಕಂಡಿದ್ದರು. ಅಧಿಕಾರದಲ್ಲಿರುವ ಬಿಜೆಪಿಗರು ಪ್ರಜಾತಾಂತ್ರಿಕ ಸಂಸ್ಥೆಗಳನ್ನು ನಶಿಸುವಂತೆ ಮಾಡಿದ್ದಾರೆ. ಭಿನ್ನಾಭಿಪ್ರಾಯಗಳನ್ನು ಕ್ರಿಮಿನಲೀಕರಣಗೊಳಿಸಿದ್ದಾರೆ. ಅಲ್ಪಸಂಖ್ಯಾತರ ವಿರುದ್ಧ ಗುರಿಯಿರಿಸಿದ್ದಾರೆ ಹಾಗೂ ದಲಿತರನ್ನು, ಆದಿವಾಸಿಗಳನ್ನು, ಓಬಿಸಿಗಳನ್ನು ಹಾಗೂ ಶ್ರಮಿಕ ಬಡವರಿಗೆ ದ್ರೋಹ ಬಗೆದಿದ್ದಾರೆ ಎಂದರು.
ಇದೀಗ ಅವರು ಅಂಬೇಡ್ಕರ್ ಕಂಡಂತಹ ಸಮಾನ ಪೌರತ್ವ ದೂರದರ್ಶಿತ್ವದ ಆಧಾರ ಸ್ತಂಭಗಳಾದ ಸಮಾಜವಾದ ಹಾಗೂ ಜಾತ್ಯತೀತತೆಯನ್ನು ಅಳಿಸಿ ಹಾಕಲು ಯತ್ನಿಸುತ್ತಿದ್ದಾರೆ ಎಂದವರು ಆಪಾದಿಸಿದರು.ಸಾಮಾಜಿಕ ಹಾಗೂ ಆರ್ಥಿಕ ನ್ಯಾಯವಿಲ್ಲದ ರಾಜಕೀಯ ಪ್ರಜಾಪ್ರಭುತ್ವವು ಕೇವಲ ಒಣ ಆಡಂಬರವೆನಿಸುತ್ತದೆ ಎಂದರು.