ಮಹಿಳಾ ಉದ್ಯೋಗಿಗಳ ವೇತನ ಏರಿಕೆಗೆ ಸೋನಿಯಾ ಗಾಂಧಿ ಆಗ್ರಹ
ಸೋನಿಯಾ ಗಾಂಧಿ | Photo Credit : X/@INCIndia
ಹೊಸದಿಲ್ಲಿ,ಡಿ.16: ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಹಾಗೂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಸೇರಿದಂತೆ ಪ್ರಮುಖ ಸರಕಾರಿ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿರುವ ಮಹಿಳಾ ಉದ್ಯೋಗಿಗಳು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಮಂಗಳವಾರ ರಾಜ್ಯಸಭೆಯ ಗಮನವನ್ನು ಸೆಳೆದರು.
ಸದನದಲ್ಲಿ ಮಾತನಾಡಿದ ಸೋನಿಯಾ, ಪ್ರಮುಖ ಸರಕಾರಿ ಯೋಜನೆಗಳನ್ನು ಅನುಷ್ಠಾನಿಸುತ್ತಿರುವ ಮಹಿಳಾ ಉದ್ಯೋಗಿಗಳು ನಿರಂತರ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಈ ಉಪಕ್ರಮಗಳು ಮಹಿಳಾ ಸಬಲೀಕರಣಕ್ಕೆ ನೆರವಾಗುವ ಉದ್ದೇಶವನ್ನು ಹೊಂದಿವೆ. ಆದರೂ ಸಾರ್ವಜನಿಕ ಸೇವಾ ವಿತರಣೆಯಲ್ಲಿ ತಮ್ಮ ಪ್ರಮುಖ ಕೊಡುಗೆಯ ಹೊರತಾಗಿಯೂ ಈ ಮಹಿಳಾ ಉದ್ಯೋಗಿಗಳು ಅತಿಯಾದ ಕೆಲಸದ ಹೊರೆಯನ್ನು ಹೊಂದಿದ್ದಾರೆ ಮತ್ತು ಕಡಿಮೆ ವೇತನವನ್ನು ಪಡೆಯುತ್ತಿದ್ದಾರೆ ಎಂದು ಹೇಳಿದರು.
ಸೇವಾ ವಿತರಣೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತಿರುವ ಸಿಬ್ಬಂದಿ ಕೊರತೆಗಳನ್ನೂ ಬೆಟ್ಟು ಮಾಡಿದ ಸೋನಿಯಾ, ಕಡಿಮೆ ವೇತನದ ಹೊರತಾಗಿ ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳ (ಐಸಿಡಿಎಸ್) ವಿವಿಧ ಹಂತಗಳಲ್ಲಿ ಪ್ರಸ್ತುತ ಸುಮಾರು ಮೂರು ಲಕ್ಷ ಹುದ್ದೆಗಳು ಖಾಲಿಯಿವೆ. ಇದರಿಂದಾಗಿ ಲಕ್ಷಾಂತರ ಮಕ್ಕಳು ಮತ್ತು ತಾಯಂದಿರು ಅಗತ್ಯ ಸೇವೆಗಳಿಂದ ವಂಚಿತರಾಗಿದ್ದಾರೆ. ಈ ಹುದ್ದೆಗಳನ್ನು ಭರ್ತಿ ಮಾಡಿದರೂ 2011ರ ಬಳಿಕ ಹೊಸ ಜನಗಣತಿ ಅಂಕಿಅಂಶಗಳ ಅನುಪಸ್ಥಿತಿಯಿಂದಾಗಿ ಜನಸಂಖ್ಯೆಗೆ ಅನುಗುಣವಾಗಿ ಅಗತ್ಯವನ್ನು ಪೂರೈಸುವುದಿಲ್ಲ ಎಂದು ಹೇಳಿದರು.
ದೇಶಾದ್ಯಂತ ಆಶಾ ಕಾರ್ಯಕರ್ತೆಯರು ಲಸಿಕೀಕರಣ, ಸಮುದಾಯ ಜಾಗೃತಿ, ತಾಯಂದಿರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ. ಆದರೂ ಅವರು ಕಡಿಮೆ ಗೌರವ ಧನ ಮತ್ತು ಸೀಮಿತ ಸಾಮಾಜಿಕ ಭದ್ರತೆಯೊಂದಿಗೆ ಸ್ವಯಂಸೇವಕರಾಗಿಯೇ ಉಳಿದಿದ್ದಾರೆ. ಇದೇ ರೀತಿ ಅಂಗನವಾಡಿ ಕಾರ್ಯಕರ್ತೆಯರಿಗೆ ಕೇಂದ್ರ ಸರಕಾರವು ಮಾಸಿಕ 4,500 ರೂ. ಮತ್ತು 2,250 ರೂ.ಗಳ ಅತ್ಯಲ್ಪ ಗೌರವ ಧನವನ್ನು ನೀಡುತ್ತಿದೆ ಎಂದು ಸೋನಿಯಾ ಗಾಂಧಿ ಹೇಳಿದರು