ಫೆಲೆಸ್ತೀನ್ ವಿಷಯದಲ್ಲಿ ಮೋದಿ ಸರಕಾರ ಮಾನವೀಯತೆ, ನೈತಿಕತೆಯನ್ನು ಬಿಟ್ಟು ಮೌನ ಪಾಲಿಸಿದೆ: ಸೋನಿಯಾ ಗಾಂಧಿ
ಭಾರತದ ಸಂವಿಧಾನಾತ್ಮಕ ಮೌಲ್ಯಗಳು, ಫೆಲೆಸ್ತೀನ್ ರಾಷ್ಟ್ರ ಮಾನ್ಯತೆ ಬಗ್ಗೆ ಲೇಖನದಲ್ಲಿ ಉಲ್ಲೇಖಿಸಿದ ಕಾಂಗ್ರೆಸ್ ನಾಯಕಿ
ಸೋನಿಯಾ ಗಾಂಧಿ (Photo: PTI)
ಹೊಸದಿಲ್ಲಿ : ಫೆಲೆಸ್ತೀನ್ ವಿಚಾರದಲ್ಲಿ ಭಾರತ ನಾಯಕತ್ವ ಪ್ರದರ್ಶಿಸಬೇಕು ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಒತ್ತಾಯಿಸಿದ್ದಾರೆ. ಫೆಲೆಸ್ತೀನ್ ವಿಷಯದಲ್ಲಿ ಮೋದಿ ಸರಕಾರ ಮಾನವೀಯತೆ ಹಾಗೂ ನೈತಿಕತೆಯನ್ನು ಬಿಟ್ಟು ಮೌನ ಪಾಲಿಸಿದೆ ಎಂದು ಟೀಕಿಸಿದ್ದಾರೆ.
ಭಾರತ ಸರಕಾರದ ಈಗಿನ ನಡೆಯು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ವೈಯಕ್ತಿಕ ಸ್ನೇಹಕ್ಕೆ ಆಧಾರಿತವಾಗಿದೆ ಹೊರತು ಭಾರತದ ಸಂವಿಧಾನಾತ್ಮಕ ಮೌಲ್ಯಗಳು ಅಥವಾ ರಾಷ್ಟ್ರೀಯ ಹಿತಾಸಕ್ತಿಗಳ ಆಧಾರದ ಮೇಲೆ ಅಲ್ಲ. ವೈಯಕ್ತಿಕ ಸ್ನೇಹದ ಆಧಾರದ ಮೇಲೆ ನಡೆಯುವ ಈ ರೀತಿಯ ರಾಜತಾಂತ್ರಿಕತೆಯು ಎಂದಿಗೂ ಸಮರ್ಥನೀಯವಲ್ಲ. ಇಂತಹ ಪ್ರಯತ್ನಗಳು ಇತರ ದೇಶಗಳಲ್ಲಿ ವಿಶೇಷವಾಗಿ ಅಮೆರಿಕಾದಲ್ಲಿ, ಭಾರತಕ್ಕೆ ಅವಮಾನ ಉಂಟುಮಾಡಿದ ಉದಾಹರಣೆಗಳು ಇತ್ತೀಚೆಗೆ ಕಂಡುಬಂದಿವೆ ಎಂದು ಸೋನಿಯಾ ಗಾಂಧಿ The Hindu ಪತ್ರಿಕೆಯಲ್ಲಿ ಪ್ರಕಟವಾದ ತಮ್ಮ ಲೇಖನದಲ್ಲಿ ತಿಳಿಸಿದ್ದಾರೆ.
'ಭಾರತದ ಮೌನ ಧ್ವನಿ, ಫೆಲೆಸ್ತೀನ್‌ನೊಂದಿಗೆ ಅದರ ಬೇರ್ಪಡುವಿಕೆ' (India's muted voice, its detachment with Palestine) ಎಂಬ ಶೀರ್ಷಿಕೆಯ ಲೇಖನದಲ್ಲಿ ಜಾಗತಿಕ ವೇದಿಕೆಯಲ್ಲಿ ಭಾರತದ ಸ್ಥಾನವನ್ನು ಒಬ್ಬರ ವೈಯಕ್ತಿಕ ಕೀರ್ತಿ ವೈಭವೀಕರಣ ಅಥವಾ ಪ್ರಶಸ್ತಿಗಳ ಮೂಲಕ ನಿರ್ಧರಿಸಲಾಗುವುದಿಲ್ಲ. ಇದಕ್ಕೆ ಧೈರ್ಯ ಮತ್ತು ಐತಿಹಾಸಿಕ ಜವಾಬ್ದಾರಿತನ ಅಗತ್ಯ ಎಂದು ಸೋನಿಯಾ ಗಾಂಧಿ ಹೇಳಿದರು. ಇದು ಇಸ್ರೇಲ್-ಫೆಲೆಸ್ತೀನ್ ಸಂಘರ್ಷದ ಕುರಿತು ಸೋನಿಯಾ ಗಾಂಧಿಯವರ ಮೂರನೇ ಲೇಖನವಾಗಿದೆ. ಲೇಖನದಲ್ಲಿ ಅವರು ಮೋದಿ ಸರಕಾರದ ನಿಲುವನ್ನು ತೀವ್ರವಾಗಿ ಟೀಕಿಸಿದ್ದಾರೆ.
ಫೆಲೆಸ್ತೀನ್ ಅನ್ನು ರಾಷ್ಟ್ರವನ್ನಾಗಿ ಗುರುತಿಸಿದ ಫ್ರಾನ್ಸ್ , ಇಂಗ್ಲೆಂಡ್, ಕೆನಡಾ, ಪೋರ್ಚುಗಲ್ ಆಸ್ಟ್ರೇಲಿಯಾ ಬಗ್ಗೆ ಉಲ್ಲೇಖಿಸಿದ ಸೋನಿಯಾ ಗಾಂಧಿ ದೀರ್ಘಕಾಲದಿಂದ ಬಳಲುತ್ತಿರುವ ಫೆಲೆಸ್ತೀನ್ ಜನರ ನ್ಯಾಯ ಸಮ್ಮತ ಆಕಾಂಕ್ಷೆಗಳನ್ನು ಈಡೇರಿಸುವ ಮೊದಲ ಹೆಜ್ಜೆ ಎಂದು ಹೇಳಿದರು. ಇಂದಿನವರೆಗೆ, ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳಲ್ಲಿ 150ಕ್ಕೂ ಹೆಚ್ಚು ದೇಶಗಳು ಫೆಲೆಸ್ತೀನ್‌ಗೆ ರಾಷ್ಟ್ರವನ್ನಾಗಿ ಮಾನ್ಯತೆ ನೀಡಿವೆ ಎಂದು ಹೇಳಿದರು.
ಫೆಲೆಸ್ತೀನ್ ಲಿಬರೇಶನ್ ಆರ್ಗನೈಸೇಶನ್‌ಗೆ (ಪಿಎಲ್ಒ) ವರ್ಷಗಳ ಬೆಂಬಲದ ನಂತರ, 1988ರ ನವೆಂಬರ್ 18ರಂದು ಭಾರತ ಅಧಿಕೃತವಾಗಿ ಫೆಲೆಸ್ತೀನ್ ಅನ್ನು ರಾಷ್ಟ್ರವನ್ನಾಗಿ ಗುರುತಿಸಿತ್ತು. ಈ ವಿಚಾರದಲ್ಲಿ ಭಾರತ ನಾಯಕತ್ವವನ್ನು ಮೆರೆದಿತ್ತು ಎಂದು ಸೋನಿಯಾ ಗಾಂಧಿ ನೆನಪಿಸಿದರು.
ಇನ್ನೂ ಉದಾಹರಣೆಗಳನ್ನು ನೀಡುತ್ತಾ, ಸ್ವಾತಂತ್ರ್ಯಕ್ಕೂ ಮುನ್ನ ದಕ್ಷಿಣ ಆಫ್ರಿಕಾದಲ್ಲಿನ ವರ್ಣಭೇದ ನೀತಿಯ ವಿರುದ್ಧ ಭಾರತ ಧ್ವನಿ ಗೂಡಿಸಿತ್ತು, 1954 ರಿಂದ 1962ರ ನಡುವೆ ನಡೆದ ಅಲ್ಜೀರಿಯಾ ಸ್ವಾತಂತ್ರ್ಯ ಹೋರಾಟಕ್ಕೆ ಭಾರತವು ಬಲವಾಗಿ ಬೆಂಬಲ ನೀಡಿತ್ತು. ಆಧುನಿಕ ಬಾಂಗ್ಲಾದೇಶದ ರಚನೆಯ ವೇಳೆ 1971ರಲ್ಲಿ ಪೂರ್ವ ಪಾಕಿಸ್ತಾನದಲ್ಲಿನ ಹತ್ಯಾಕಾಂಡ ತಡೆಯುವಲ್ಲಿ ಭಾರತ ಪ್ರಮುಖ ಪಾತ್ರ ವಹಿಸಿರುವುದನ್ನು ಅವರು ಲೇಖನದಲ್ಲಿ ಉಲ್ಲೇಖಿಸಿದ್ದಾರೆ.
ಇಸ್ರೇಲ್–ಫೆಲೆಸ್ತೀನ್‌ನ ನಿರ್ಣಾಯಕ ಮತ್ತು ಸೂಕ್ಷ್ಮ ವಿಷಯದ ಬಗ್ಗೆಯೂ ಕೂಡ ಭಾರತವು ಬಹಳ ಹಿಂದಿನಿಂದಲೂ ತತ್ವಬದ್ಧ ನಿಲುವನ್ನು ಕಾಯ್ದುಕೊಂಡಿದೆ. ಶಾಂತಿ ಮತ್ತು ಮಾನವ ಹಕ್ಕುಗಳ ರಕ್ಷಣೆಗೆ ತನ್ನ ಸೂಕ್ಷ್ಮವಾದ ನಿಲುವು ತೆಗೆದುಕೊಂಡಿತ್ತು. ಫೆಲೆಸ್ತೀನ್ ವಿಚಾರದಲ್ಲಿ ಭಾರತವು ನಾಯಕತ್ವ ತೋರಬೇಕು. ಇದು ಈಗ ನ್ಯಾಯ, ಗುರುತು, ಗೌರವ ಮತ್ತು ಮಾನವ ಹಕ್ಕುಗಳ ಹೋರಾಟವಾಗಿದೆ ಎಂದು ಅವರು ಪ್ರತಿಪಾದಿಸಿದರು.
2023ರ ಅಕ್ಟೋಬರ್‌ನಲ್ಲಿ ಸಂಘರ್ಷ ಪ್ರಾರಂಭವಾದ ನಂತರ ಕಳೆದ ಎರಡು ವರ್ಷಗಳಲ್ಲಿ ಭಾರತ ತನ್ನ ಪಾತ್ರದಿಂದ ನುಣುಚಿಕೊಂಡಿದೆ. 2023ರ ಅಕ್ಟೋಬರ್ 7ರಂದು ಹಮಾಸ್ ಇಸ್ರೇಲ್ ನಾಗರಿಕರ ಮೇಲೆ ಕ್ರೂರ ದಾಳಿ ನಡೆಸಿತು. ಅದಕ್ಕೆ ಇಸ್ರೇಲ್ ನೀಡಿದ ಪ್ರತಿಕ್ರಿಯೆಯು ನರಮೇಧಕ್ಕಿಂತ ಕಡಿಮೆಯಿಲ್ಲ. ನಾನು ಈ ಹಿಂದೆ ಹೇಳಿದಂತೆ 17,000 ಮಕ್ಕಳು ಸೇರಿದಂತೆ 55,000ಕ್ಕೂ ಹೆಚ್ಚು ಫೆಲೆಸ್ತೀನ್ ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ. ಗಾಝಾ ಪ್ರದೇಶದ ಮನೆಗಳು, ಶಾಲೆಗಳು, ಆಸ್ಪತ್ರೆಗಳು, ಕೃಷಿ ಮತ್ತು ಕೈಗಾರಿಕೆ ಸಂಪೂರ್ಣ ನಾಶವಾಗಿವೆ ಎಂದರು.
ಗಾಝಾದ ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಬರಗಾಲದಂತಹ ಪರಿಸ್ಥಿತಿಗೆ ಸಿಲುಕಿದ್ದಾರೆ. ಆಹಾರ, ಔಷಧಿ ಮತ್ತು ನೆರವು ತಲುಪುವುದನ್ನು ಇಸ್ರೇಲ್ ಸೇನೆ ಕ್ರೂರವಾಗಿ ತಡೆದು, ಜನರನ್ನು ನಿರಾಶೆಯ ಸಮುದ್ರಕ್ಕೆ ತಳ್ಳಿದೆ ಎಂದು ಸೋನಿಯಾ ಗಾಂಧಿ ಟೀಕಿಸಿದರು.
ಆಹಾರವನ್ನು ಪಡೆಯಲು ಪ್ರಯತ್ನಿಸುತ್ತಿರುವಾಗ ನೂರಾರು ನಾಗರಿಕರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಇದು ಮಾನವೀಯತೆಯ ವಿರುದ್ಧದ ಅತಿ ಕ್ರೂರ ಕೃತ್ಯ. ಜಗತ್ತು ಇಸ್ರೇಲ್ ಕೃತ್ಯದ ಬಗ್ಗೆ ತಡವಾಗಿ ಪ್ರತಿಕ್ರಿಯಿಸಿದ್ದು, ಇದರಿಂದ ಇಸ್ರೇಲ್‌ನ ಕೃತ್ಯಕ್ಕೆ ಪರೋಕ್ಷ ಬೆಂಬಲ ಸಿಕ್ಕಂತಾಗಿದೆ. ಇತ್ತೀಚಿನ ದಿನಗಳಲ್ಲಿ ಹಲವಾರು ದೇಶಗಳು ಫೆಲೆಸ್ತೀನ್ ಅನ್ನು ಪ್ರತ್ಯೇಕ ರಾಷ್ಟ್ರವಾಗಿ ಮಾನ್ಯತೆ ನೀಡಿರುವುದು ಸ್ವಾಗತಾರ್ಹ ಎಂದು ಸೋನಿಯಾ ಗಾಂಧಿ ಹೇಳಿದರು.
ಇದು ಒಂದು ಐತಿಹಾಸಿಕ ಕ್ಷಣ. ನ್ಯಾಯ, ಸ್ವ-ನಿರ್ಣಯ ಮತ್ತು ಮಾನವ ಹಕ್ಕುಗಳ ತತ್ವಗಳ ಪ್ರತಿಪಾದನೆಯಾಗಿದೆ. ಇಂತಹ ಹೆಜ್ಜೆಗಳು ಕೇವಲ ರಾಜತಾಂತ್ರಿಕತೆ ಅಲ್ಲ, ರಾಷ್ಟ್ರಗಳ ನೈತಿಕ ಹೊಣೆಗಾರಿಕೆಯ ಪ್ರತೀಕ. ಇಂದಿನ ಜಗತ್ತಿನಲ್ಲಿ ಮೌನ ಅಂದರೆ ತಟಸ್ಥತೆ ಅಲ್ಲ, ಅದು ಸಹಪಾಲ್ಗೊಳ್ಳುವಿಕೆ ಎಂದು ಸೋನಿಯಾ ಗಾಂಧಿ ಹೇಳಿದರು.
ಇಲ್ಲಿ, ಸ್ವಾತಂತ್ರ್ಯ ಮತ್ತು ಮಾನವ ಘನತೆಯ ಪರವಾಗಿ ಅಚಲವಾಗಿದ್ದ ಭಾರತದ ಧ್ವನಿಯು "ಸ್ಪಷ್ಟವಾಗಿ ಮೌನವಾಗಿದೆ" ಎಂದು ಸೋನಿಯಾ ಗಾಂಧಿ ಮೋದಿ ಸರಕಾರವನ್ನು ಟೀಕಿಸಿದರು.
ಕೇವಲ ಎರಡು ವಾರಗಳ ಹಿಂದೆ, ಭಾರತ ದಿಲ್ಲಿಯಲ್ಲಿ ಇಸ್ರೇಲ್ ಜೊತೆ ದ್ವಿಪಕ್ಷೀಯ ಹೂಡಿಕೆ ಒಪ್ಪಂದಕ್ಕೆ ಸಹಿ ಹಾಕಿದೆ. ಇದಲ್ಲದೆ ವೆಸ್ಟ್ ಬ್ಯಾಂಕ್‌ನಲ್ಲಿ ಫೆಲೆಸ್ತೀನ್ ಸಮುದಾಯಗಳ ವಿರುದ್ಧ ಪದೇ ಪದೇ ಹಿಂಸಾಚಾರಕ್ಕೆ ಪ್ರಚೋದಿಸಿ ಜಾಗತಿಕ ಖಂಡನೆಗೆ ಗುರಿಯಾದ ಇಸ್ರೇಲ್ ಹಣಕಾಸು ಸಚಿವರಿಗೆ ಆತಿಥ್ಯ ನೀಡಿರುವುದು ವಿಷಾದನೀಯ ಎಂದು ಟೀಕಿಸಿದರು.
ಭಾರತವು ಪೆಲೆಸ್ತೀನ್ ವಿಷಯವನ್ನು ಕೇವಲ ವಿದೇಶಾಂಗ ನೀತಿಯ ವಿಷಯವಾಗಿ ನೋಡಬಾರದು, ಬದಲಾಗಿ ಭಾರತದ ನೈತಿಕತೆ ಮತ್ತು ನಾಗರಿಕ ಪರಂಪರೆಯ ಪರೀಕ್ಷೆಯಾಗಿ ನೋಡಬೇಕು. ಫೆಲೆಸ್ತೀನ್‌ನ ಜನರು ದಶಕಗಳಿಂದ ಸ್ಥಳಾಂತರ, ಆಕ್ರಮಣ, ವಸಾಹತು ವಿಸ್ತರಣೆ, ಸಂಚಾರ ನಿರ್ಬಂಧಗಳು ಮತ್ತು ರಾಜಕೀಯ ಮತ್ತು ಮಾನವ ಹಕ್ಕುಗಳ ಮೇಲೆ ಪದೇ ಪದೇ ದಾಳಿಗಳನ್ನು ಸಹಿಸಿಕೊಂಡಿದ್ದಾರೆ. ಅವರ ದುಃಸ್ಥಿತಿಯು ವಸಾಹತುಶಾಹಿ ಯುಗದಲ್ಲಿ ಭಾರತ ಎದುರಿಸಿದ ಕಷ್ಟಗಳಂತೆಯೇ ಇದೆ ಎಂದು ಸೋನಿಯಾ ಗಾಂಧಿ ಲೇಖನದಲ್ಲಿ ಉಲ್ಲೇಖಿಸಿದ್ದಾರೆ.