ಶ್ರೀಮಂತ ದೇಶಗಳು ವಿಶ್ವ ಆರೋಗ್ಯ ಸಂಸ್ಥೆಗೆ ಹೆಚ್ಚು ಕೊಡುಗೆ ನೀಡುತ್ತವೆ: 500 ದಶಲಕ್ಷ ಡಾಲರ್ ದೇಣಿಗೆ ನೀಡಿದ್ದೇವೆ ಎಂಬ ಟ್ರಂಪ್ ಹೇಳಿಕೆಗೆ ಸೌಮ್ಯ ಸ್ವಾಮಿನಾಥನ್ ತಿರುಗೇಟು
ಸೌಮ್ಯ ಸ್ವಾಮಿನಾಥನ್ | PTI
ಹೈದರಾಬಾದ್: ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರ ನಡೆಯುವ ಅಮೆರಿಕದ ನಿರ್ಧಾರದಿಂದ ಆ ದೇಶವೂ ಸೇರಿದಂತೆ ಯಾರಿಗೂ ಒಳಿತಾಗುವುದಿಲ್ಲ ಎಂದು ಶನಿವಾರ ವಿಶ್ವ ಆರೋಗ್ಯ ಸಂಸ್ಥೆಯ ಮಾಜಿ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಅಭಿಪ್ರಾಯ ಪಟ್ಟಿದ್ದಾರೆ.
ಜಾಗತಿಕ ಆರೋಗ್ಯ ನಿಗಾ ಸಂಸ್ಥೆಗೆ ನೀಡಲಾಗುವ ಕೊಡುಗೆಯು ಸಂಬಂಧಿತ ದೇಶಗಳ ಜಿಡಿಪಿಯ ಮೇಲೆ ಅವಲಂಬಿತವಾಗಿದೆ ಎಂದೂ ಹೇಳಿದ್ದಾರೆ.
ಸಾಕಷ್ಟು ತಾಂತ್ರಿಕ ಹಾಗೂ ವೈಜ್ಞಾನಿಕ ತಜ್ಞತೆಯನ್ನು ಹೊಂದಿರುವ ಅಮೆರಿಕ ತನ್ನ ನಿರ್ಧಾರವನ್ನು ಮರುಪರಿಶೀಲಿಸಲಿ ಎಂದು ಮನವಿ ಮಾಡಿರುವ ಅವರು, ಪರಿಹಾರದ ಭಾಗವಾಗಿ ಉತ್ತರ ಅಮೆರಿಕ ದೇಶ ಕೂಡಾ ವಿಶ್ವ ಆರೋಗ್ಯ ಸಂಸ್ಥೆಯ ದತ್ತಾಂಶಕ್ಕೆ ಪ್ರವೇಶ ಪಡೆಯುವುದು ಅಸಾಧ್ಯವಾಗಲಿದೆ ಎಂದು ಎಚ್ಚರಿಸಿದ್ದಾರೆ.
ಹೈದರಾಬಾದ್ ಸಾಹಿತ್ಯ ಹಬ್ಬದ ನೇಪಥ್ಯದಲ್ಲಿ PTI Videosನೊಂದಿಗೆ ಮಾತನಾಡಿರುವ ಸೌಮ್ಯ ಸ್ವಾಮಿನಾಥನ್, “ನೀವೆಷ್ಟು ಶ್ರೀಮಂತರಾಗಿರುತ್ತೀರೊ ಅಷ್ಟೂ ಹೆಚ್ಚು ದೇಣಿಗೆ ನೀಡಬೇಕಾಗುತ್ತದೆ. ಏಕೆಂದರೆ, ನೀವು ನಿಮ್ಮ ಜಿಡಿಪಿಯ ಶೇಕಡಾವಾರು ಪ್ರಮಾಣವನ್ನು ಆಧರಿಸಿ ದೇಣಿಗೆ ನೀಡಬೇಕಾಗುತ್ತದೆ. ಹಾಲಿ ವ್ಯವಸ್ಥೆಯು ತುಂಬಾ ನ್ಯಾಯಯುತವಾಗಿದೆ. ನೀವು ಆಫ್ರಿಕಾದ ಮಧ್ಯಭಾಗದಲ್ಲಿರುವ ಕಾಂಗೊದಂತಹ ಸಣ್ಣ ದೇಶವು ಅಮೆರಿಕದಷ್ಟೆ ದೇಣಿಗೆಯನ್ನು ನೀಡಬೇಕು ಎಂದು ನಿರೀಕ್ಷಿಸಲು ಸಾಧ್ಯವಿಲ್ಲ” ಎಂದು ಅಭಿಪ್ರಾಯ ಪಟ್ಟಿದ್ದಾರೆ.
1.4 ಶತಕೋಟಿ ಹೊಂದಿರುವ ಚೀನಾ 39 ದಶಲಕ್ಷ ಅಮೆರಿಕನ್ ಡಾಲರ್ ದೇಣಿಗೆಯನ್ನು ವಿಶ್ವ ಆರೋಗ್ಯ ಸಂಸ್ಥೆಗೆ ನೀಡುತ್ತಿದ್ದರೆ, ಕೇವಲ 325 ದಶಲಕ್ಷ ಜನಸಂಖ್ಯೆಯನ್ನು ಹೊಂದಿರುವ ಅಮೆರಿಕ 500 ದಶಲಕ್ಷ ಅಮೆರಿಕನ್ ಡಾಲರ್ ದೇಣಿಗೆ ನೀಡುತ್ತಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಅವರು ಪ್ರತಿಕ್ರಿಯಿಸುತ್ತಿದ್ದರು.