ಉತ್ತರ ಪ್ರದೇಶ | ಮದುವೆಗೆ ತೆರಳುತ್ತಿದ್ದ ಕಾರು ಕಾಲೇಜಿನ ಗೋಡೆಗೆ ಢಿಕ್ಕಿ; ವರ ಸೇರಿದಂತೆ ಒಂದೇ ಕುಟುಂಬದ 8 ಮಂದಿ ಮೃತ್ಯು
Photo: X/@AmarBhartiLko
ಸಂಭಾಲ್: ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಜೆವಾನೈ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕಾಲೇಜಿನ ಗೋಡೆಗೆ ಢಿಕ್ಕಿ ಹೊಡೆದ ಪರಿಣಾಮ ವರ ಸೇರಿದಂತೆ ಒಂದೇ ಕುಟುಂಬದ ಎಂಟು ಮಂದಿ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು NDTV ವರದಿ ಮಾಡಿದೆ.
ಶನಿವಾರ ಬೆಳಿಗ್ಗೆ ಸುಮಾರು 6:30ರ ವೇಳೆಗೆ ಈ ಘಟನೆ ಸಂಭವಿಸಿದೆ. ಮದುವೆಗೆ ತೆರಳುತ್ತಿದ್ದ ಬೊಲೆರೊ ಕಾರು ಅತಿವೇಗದಿಂದ ಸಾಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಜನತಾ ಇಂಟರ್ ಕಾಲೇಜಿನ ಗೋಡೆಗೆ ಢಿಕ್ಕಿ ಹೊಡೆದು ಉರುಳಿಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಾಹನದಲ್ಲಿ ಒಟ್ಟು ಹತ್ತು ಮಂದಿ ಪ್ರಯಾಣಿಸುತ್ತಿದ್ದರು. ಘಟನೆಯಲ್ಲಿ ಐದು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಉಳಿದ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಲಿಘಡ್‌ನ ಉನ್ನತ ವೈದ್ಯಕೀಯ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.
ಅಪಘಾತದಲ್ಲಿ ಮೃತಪಟ್ಟವರನ್ನು ಮದುವೆಯ ವರ ಸೂರಜ್ (24), ಅತ್ತಿಗೆ ಆಶಾ (26), ಆಶಾ ಅವರ ಮಗು ಐಶ್ವರ್ಯ (2), ಮನೋಜ್ ಅವರ ಮಗ ವಿಷ್ಣು (6) ವರನ ಚಿಕ್ಕಮ್ಮ, ಇಬ್ಬರು ಅಪ್ರಾಪ್ತ ವಯಸ್ಕರು ಎಂದು ಗುರುತಿಸಲಾಗಿದೆ. ಕಾರಿನಲ್ಲಿ ಮಿತಿಗಿಂತ ಹೆಚ್ಚಿನ ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.
"ಬೊಲೆರೊ ಕಾರು ನಿಯಂತ್ರಣ ತಪ್ಪಿ ಶಾಲಾ ಗೋಡೆಗೆ ಢಿಕ್ಕಿ ಹೊಡೆದು ಉರುಳಿಬಿದ್ದಿದೆ. ಮಾಹಿತಿ ಸಿಕ್ಕ ತಕ್ಷಣ ಸ್ಥಳೀಯ ಪೊಲೀಸರು ಹಾಗೂ ವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು," ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ (ದಕ್ಷಿಣ) ಅನುಕೃತಿ ಶರ್ಮಾ ತಿಳಿಸಿದ್ದಾರೆ.
ಅಪಘಾತದ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಜ್ಜುಗುಜ್ಜಾದ ವಾಹನ, ಚೂರುಚೂರಾದ ಗಾಜುಗಳು ಹಾಗೂ ಸ್ಥಳದಲ್ಲಿದ್ದ ರಕ್ತದ ಕಲೆಗಳು ಅಪಘಾತದ ಭೀಕರತೆಯನ್ನು ಸ್ಪಷ್ಟಪಡಿಸುತ್ತಿವೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಪಘಾತದ ನಿಖರ ಕಾರಣ ಹಾಗೂ ವಾಹನದ ಸಾಮರ್ಥ್ಯ ಮೀರಿದ ಪ್ರಯಾಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆಸಿದ್ದಾರೆ ಎಂದು ತಿಳಿದು ಬಂದಿದೆ.