×
Ad

ಗಣಿಗಳು, ಖನಿಜ ಭೂಮಿಗಳ ಮೇಲೆ ತೆರಿಗೆ ವಿಧಿಸುವ ಹಕ್ಕು ರಾಜ್ಯಗಳಿಗಿದೆ: ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

Update: 2024-07-25 12:50 IST

ಹೊಸದಿಲ್ಲಿ: ಕೇಂದ್ರಕ್ಕೆ ಹಿನ್ನಡೆಯೆಂದೇ ತಿಳಿಯಲಾದ ಬೆಳವಣಿಗೆಯಲ್ಲಿ, ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪೊಂದನ್ನು ಪ್ರಕಟಿಸಿದೆ. ಸಂವಿಧಾನದಡಿಯಲ್ಲಿ ಗಣಿಗಳು ಹಾಗೂ ಖನಿಜಗಳಿರುವ ಭೂಮಿಗಳ ಮೇಲೆ ತೆರಿಗೆಗಳನ್ನು ಹೇರಲು ರಾಜ್ಯಗಳು ಶಾಸಕಾಂಗ ಅಧಿಕಾರ ಹೊಂದಿವೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಖನಿಜಗಳ ಮೇಲೆ ನೀಡಲಾಗುವ ರಾಯಲ್ಟಿ ತೆರಿಗೆಯಲ್ಲ ಎಂದು 8:1 ಬಹುಮತದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಈ ತೀರ್ಪನ್ನು ತಮ್ಮ ಹಾಗೂ ಏಳು ಇತರ ನ್ಯಾಯಾಧೀಶರ ಪರ ಓದಿದ್ದಾರೆ.

ಸಂವಿಧಾನದ ಲಿಸ್ಟ್‌ II ಇದರ ನಮೂದು 50 ಅಡಿಯಲ್ಲಿ ಸಂಸತ್ತು ಖನಿಜ ಹಕ್ಕುಗಳ ಮೇಲೆ ತೆರಿಗೆ ವಿಧಿಸುವ ಅಧಿಕಾರ ಹೊಂದಿಲ್ಲ ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ರಾಯಲ್ಟಿ ಎಂಬುದು ತೆರಿಗೆ ಎಂದು ಹೇಳಿ ಸುಪ್ರೀಂ ಕೋರ್ಟಿನ ಏಳು ಸದಸ್ಯರ ಸಂವಿಧಾನಿಕ ಪೀಠ 1989ರಲ್ಲಿ ನೀಡಿದ ತೀರ್ಪು ತಪ್ಪು ಎಂದು ಸಿಜೆಐ ಹೇಳಿದರು.

ಈಗಿನ ಪೀಠ ಎರಡು ಪ್ರತ್ಯೇಕ ತೀರ್ಪು ನೀಡಿದ್ದು ಜಸ್ಟಿಸ್‌ ಬಿ ವಿ ನಾಗರತ್ನ ಅಸಮ್ಮತಿಯ ಅಭಿಪ್ರಾಯ ವ್ಯಕ್ತಪಡಿಸಿ ತೀರ್ಪು ನೀಡಿದ್ದಾರೆ.

ಜಸ್ಟಿಸ್‌ ನಾಗರತ್ನ ತಮ್ಮ ತೀರ್ಪಿನಲ್ಲಿ ರಾಜ್ಯಗಳಿಗೆ ಗಣಿಗಳು ಮತ್ತು ಖನಿಜಯುಕ್ತ ಭೂಮಿಗಳ ಮೇಲೆ ತೆರಿಗೆಗಳನ್ನು ವಿಧಿಸುವ ಶಾಸಕಾಂಗ ಅಧಿಕಾರವಿಲ್ಲ ಎಂದು ಹೇಳಿದ್ದಾರೆ.

ಗಣಿಗಳು ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯಿದೆ 1957 ಅಡಿಯಲ್ಲಿ ಖನಿಜಗಳ ಮೇಲೆ ಪಾವತಿಸಲಾಗುವ ರಾಯಲ್ಟಿ ಅನ್ನು ತೆರಿಗೆ ಎಂದು ಪರಿಗಣಿಸಬಹುದೇ ಮತ್ತು ಇಂತಹ ರಾಯಲ್ಟಿ ಅನ್ನು ವಿಧಿಸುವ ಅಧಿಕಾರ ಕೇವಲ ಕೇಂದ್ರ ಸರ್ಕಾರಕ್ಕಿದೆಯೇ ಅಥವಾ ರಾಜ್ಯಗಳಿಗೂ ಅಧಿಕಾರವಿದೆಯೇ ಎಂಬ ವಿವಾದಾತ್ಮಕ ವಿಚಾರದ ಕುರಿತಂತೆ ಸುಪ್ರೀಂ ಕೋರ್ಟ್‌ ಇಂದು ತೀರ್ಪು ನೀಡಿದೆ.

ಇಂದಿನ ತೀರ್ಪು ಪ್ರಕಟಿಸಿದ ನ್ಯಾಯಪೀಠದಲ್ಲಿ ಸಿಜೆಐ ಚಂದ್ರಚೂಡ್‌ ಹಾಗೂ ನ್ಯಾಯಮೂರ್ತಿ ನಾಗರತ್ನ ಹೊರತಾಗಿ ನ್ಯಾಯಮೂರ್ತಿಗಳಾದ ಹೃಷಿಕೇಶ್‌ ರಾಯ್‌, ಅಭಯ್‌ ಎಸ್‌ ಓಕ, ಜೆ ಬಿ ಪರ್ದಿವಾಲ, ಮನೋಜ್‌ ಮಿಶ್ರಾ, ಉಜ್ಜಲ್‌ ಭುಯನ್‌, ಸತೀಶ್‌ ಚಂದ್ರ ಶರ್ಮ ಮತ್ತು ಆಗಸ್ಟೀನ್‌ ಜಾರ್ಜ್‌ ಮಸೀಹ್‌ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News