×
Ad

ಪಿರಾನ ದರ್ಗಾದಲ್ಲಿ ಶತಮಾನಗಳಷ್ಟು ಹಳೆಯ ಸಮಾಧಿಗಳ ನೆಲಸಮ; ಕಲ್ಲು ತೂರಾಟದಲ್ಲಿ ಕೆಲವರಿಗೆ ಗಾಯ

Update: 2024-05-09 17:11 IST

Screengrab:X

ಅಹ್ಮದಾಬಾದ್:‌ ಹಿಂದು-ಮುಸ್ಲಿಂ ಸೌಹಾರ್ದತೆಯ ಸಂಕೇತವಾಗಿರುವ ನಗರದ ಹೊರವಲಯದ ಇಮಾಮ್‌ಶಾ ಬಾವಾ ಅವರ ಪಿರಾನಾ ದರ್ಗಾದ ಸಮೀಪವಿರುವ ಇಮಾಮ್‌ಶಾಹ್‌ ಮತ್ತು ಅವರ ಕುಟುಂಬ ಸದಸ್ಯರ ಸಮಾಧಿಗಳನ್ನು ಅಲ್ಲಿನ ಟ್ರಸ್ಟಿಗಳ ಒಂದು ಗುಂಪು ನೆಲಸಮಗೊಳಿಸಿರುವುದು ಮಂಗಳವಾರ ರಾತ್ರಿ ಉದ್ವಿಗ್ನತೆಗೆ ಕಾರಣವಾಗಿದೆ.

ಈ ಐದು ಶತಮಾನಕ್ಕೂ ಹಳೆಯ ಸಮಾಧಿಗಳ ನೆಲಸಮವು ಪಿರಾನ ಗ್ರಾಮದ ಮುಸ್ಲಿಂ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದ್ದು, ಕಲ್ಲು ತೂರಾಟದಿಂದ ಕನಿಷ್ಠ ನಾಲ್ಕು ಜನರಿಗೆ ಗಾಯಗಳಾಗಿವೆ.

ಇಮಾಮ್‌ಶಾಹ್‌ ಬಾವಾ ರೋಝಾ ಟ್ರಸ್ಟ್‌ನಲ್ಲಿ ಹಿಂದು ಮತ್ತು ಮುಸ್ಲಿಂ ಸಮುದಾಯಗಳಗೆ ಸೇರಿದ ಸದಸ್ಯರಿದ್ದು ಇಲ್ಲಿ ದೀರ್ಘಕಾಲೀನ ವಿವಾದ ಕೂಡ ಇದೆ. ಸಮಾಧಿಗಳನ್ನು ನಾಶಪಡಿಸಲಾಗಿದೆ ಎಂಬ ಮಾಹಿತಿ ದೊರೆತ ನಂತರ ಎರಡೂ ಸಮುದಾಯಗಳ ಜನರು ಮಂಗಳವಾರ ಬೆಳಿಗ್ಗೆ ಅಲ್ಲಿ ಜಮಾಯಿಸಿದ್ದರು ಹಾಗೂ ಕಲ್ಲು ತೂರಾಟ ನಡೆದಿದೆ. ಘಟನೆಯಲ್ಲಿ ಓರ್ವ ಪೊಲೀಸ್‌ ಇನ್‌ಸ್ಪೆಕ್ಟರ್‌ ಸೇರಿದಂತೆ ನಾಲ್ಕರಿಂದ ಐದು ಜನರು ಗಾಯಗೊಂಡಿದ್ದಾರೆ. ಕಲ್ಲು ತೂರಾಟಕ್ಕೆ ಕಾರಣರಾದವರನ್ನು ಗುರುತಿಸುವ ಯತ್ನ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ.

ಘಟನೆಯಲ್ಲಿ ಇನ್‌ಸ್ಪೆಕ್ಟರ್‌ ಎನ್‌ ಎಚ್‌ ಸವ್‌ಸೇತಾ ಅವರಿಗೆ ತಲೆಗೆ ಗಾಯಗಳುಂಟಾಗಿವೆ ಎಂದು ತಿಳಿದು ಬಂದಿದೆ.

ಇಮಾಮ್‌ಶಾಹ್‌ ಬಾವಾ ಅವರಿಗೆ ದೊಡ್ಡ ಸಂಖ್ಯೆಯ ಅನುಯಾಯಿಗಳಿದ್ದಾರೆ. ಟ್ರಸ್ಟ್‌ನಲ್ಲಿ ಹೆಚ್ಚಿನ ಸಂಖ್ಯೆಯ ಹಿಂದೂ ಸದಸ್ಯರಿದ್ದರೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಟ್ರಸ್ಟಿಗಳು ಇಮಾಮ್‌ಶಾಹ್‌ ಬಾವಾ ಅವರ ಕುಟುಂಬಸ್ಥರೆಂದು ತಿಳಿಯಲಾದ ಸೈಯದ್‌ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಧರ್ಮದ ಆಧಾರದಲ್ಲಿ ಟ್ರಸ್ಟಿಗಳ ನಡುವೆ ಭಿನ್ನಾಭಿಪ್ರಾಯ ಕಳೆದ ಕೆಲ ದಶಕಗಳಿಂದ ಹೊಗೆಯಾಡುತ್ತಿತ್ತು ಹಾಗೂ ಟ್ರಸ್ಟಿನ ಮುಸ್ಲಿಂ ಸದಸ್ಯರು ಅನೇಕ ಬಾರಿ ಜಿಲ್ಲಾಧಿಕಾರಿ ಹಾಗೂ ಪೊಲೀಸರಿಗೆ ದೂರು ಸಲ್ಲಿಸಿದ್ದೇ ಅಲ್ಲದೆ ಗುಜರಾತ್‌ ಹೈಕೋರ್ಟ್‌ ಕದ ಕೂಡ ತಟ್ಟಿದ್ದರು.

ಸಮಾಧಿಗಳನ್ನು ನಾಶಪಡಿಸಿದ ವಿರುದ್ಧ ಪೊಲೀಸರಿಂದ ಕ್ರಮಕ್ಕೆ ಕೋರಿದ್ದರೂ ಯಾವುದೇ ಕ್ರಮಕೈಗೊಳ್ಳಲಾಗಿಲ್ಲ ಎಂದು ಸ್ಥಳೀಯರೊಬ್ಬರು ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News