×
Ad

ವಿಚಿತ್ರ ಘಟನೆ: ನ್ಯಾಯಾಧೀಶೆಯನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ ಎಸ್‍ಐ!

Update: 2025-04-14 13:03 IST

ಸಾಂದರ್ಭಿಕ ಚಿತ್ರ | PC : freepik.com

ಆಗ್ರಾ: ಸಮೀಪದ ಫಿರೋಜಾಬಾದ್‍ನಲ್ಲಿ ದಶಕದಷ್ಟು ಹಳೆಯ ಕಳ್ಳತನ ಪ್ರಕರಣದಲ್ಲಿ ನ್ಯಾಯಾಲಯದ ಆದೇಶವನ್ನು ಆರೋಪಿಗೆ ನೀಡುವ ಹೊಣೆ ಹೊತ್ತ ಸಬ್ ಇನ್‍ಸ್ಪೆಕ್ಟರ್ ಒಬ್ಬರು ತೀರ್ಪು ನೀಡಿದ ನ್ಯಾಯಾಧೀಶೆಯನ್ನೇ ಆರೋಪಿಯ ಸ್ಥಾನದಲ್ಲಿ ನಿಲ್ಲಿಸಿದ ಸ್ವಾರಸ್ಯಕರ ಘಟನೆ ಬೆಳಕಿಗೆ ಬಂದಿದೆ.

ಶಂಕಿತ ಆರೋಪಿಯ ಚಲನ ವಲನಗಳ ಬಗ್ಗೆ ವರದಿ ಮಾಡಬೇಕಿದ್ದ ಎಸ್‍ಐ, ಮಾರ್ಚ್ 23ರಂದು ಮುಖ್ಯ ಜ್ಯುಡೀಶಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶೆಗೆ ಮಾಹಿತಿ ನೀಡಿ ಆರೋಪಿ ನಗ್ಮಾ ಖಾನ್ ನಿವಾಸ ಪತ್ತೆಯಾಗಿಲ್ಲ ಎಂದು ಹೇಳಿದ್ದರಿಂದ ಗೊಂದಲ ಉಂಟಾಯಿತು.

ಅಪರಾಧ ದಂಡಸಂಹಿತೆ ಸೆಕ್ಷನ್ 82ರ ಅನ್ವಯ ನ್ಯಾಯಾಧೀಶೆ ನಗ್ಮಾ ಖಾನ್ ಆದೇಶ ಹೊರಡಿಸಿ, 2001ರ ಕಳ್ಳತನ ಪ್ರಕರಣದಲ್ಲಿ ರಾಜ್‍ಕುಮಾರ್ ಅಲಿಯಾಸ್ ಪಪ್ಪು ಎಂಬಾತನಿಗೆ ಸಮನ್ಸ್ ನೀಡಿದ್ದರು. ಎಸ್‍ಐ ಬನ್ವಾರಿಲಾಲ್ ಎಂಬವರಿಗೆ ಈ ಆದೇಶವನ್ನು ಆರೋಪಿಗೆ ತಲುಪಿಸುವ ಹೊಣೆ ವಹಿಸಲಾಗಿತ್ತು. ಆದರೆ ಎಸ್‍ಐ ವಿಳಾಸವನ್ನು ತಪ್ಪಾಗಿ ತಿಳಿದುಕೊಂಡಿದ್ದು ಗೊಂದಲಕ್ಕೆ ಕಾರಣವಾಯಿತು. ಆರೋಪಿಯ ಬದಲು ನ್ಯಾಯಾಧೀಶೆಯ ವಿಳಾಸವನ್ನು ದಾಖಲಿಸಿಕೊಂಡು ಹುಡುಕಾಟ ನಡೆಸಿದ್ದರು.

ಕೋರ್ಟ್‍ನಲ್ಲಿ ಹಾಜರಾದ ಎಸ್‍ಐ ತಬ್ಬಿಬ್ಬಾದರು. "ಆರೋಪಿಯ (ಅಂದರೆ ನ್ಯಾಯಾಧೀಶೆ) ಮನೆಗೆ ತೆರಳಿದಾಗ ಆಕೆ ಅಲ್ಲಿರಲಿಲ್ಲ. ಹೇಗೆ ಮುಂದುವರಿಯಬೇಕು ಎಂಬ ಬಗ್ಗೆ ನ್ಯಾಯಾಲಯ ಸೂಚಿಸಬೇಕು" ಎಂದು ಕೋರಿದರು. ನ್ಯಾಯಾಲಯ ಮಾರ್ಚ್ 24ರಂದು ನೀಡಿದ ಆದೇಶದಲ್ಲಿ, ಅಧಿಕಾರಿ ಜಾಮೀನು ರಹಿತ ವಾರೆಂಟ್‍ನ ವಿಳಾಸದಲ್ಲಿ ನ್ಯಾಯಾಧೀಶೆಯ ಹೆಸರನ್ನು ತಪ್ಪಾಗಿ ಹಾಕಿದ್ದನ್ನು ಉಲ್ಲೇಖಿಸಲಾಗಿದೆ. "ಬಹುಶಃ ಆತ ಸರಿಯಾಗಿ ಆದೇಶವನ್ನು ಓದಿದಂತಿಲ್ಲ. ಆತನಿಗೆ ವಹಿಸಿದ ಕೆಲಸದ ಬಗ್ಗೆ ಏನೂ ಗೊತ್ತಿಲ್ಲ; ಆತ ಪೊಲೀಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಲು ಯೋಗ್ಯನಲ್ಲ ಎನ್ನುವುದನ್ನು ಪ್ರತಿಫಲಿಸುತ್ತದೆ" ಎಂದು ತೀರ್ಪಿನಲ್ಲಿ ವಿವರಿಸಲಾಗಿದೆ.

ಈ ಪ್ರಕರಣ ಕುಂಟುತ್ತಾ ಸಾಗಿದ್ದು, 2001 ಪ್ರಕರಣದ ಮೊದಲ ವಿಚಾರಣೆ 2013ರ ಸೆಪ್ಟೆಂಬರ್ ನಲ್ಲಿ ನ್ಯಾಯಾಲಯದ ಮುಂದೆ ಬಂದಿದೆ. 2024ರ ಜೂನ್‍ನಲ್ಲಿ ಫಿರೋಜಾಬಾದ್‍ನ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯಕ್ಕೆ ವರ್ಗಾವಣೆಯಾಗಿದೆ. ರಾಜ್‍ಕುಮಾರ್ ನ್ಯಾಯಾಲಯಕ್ಕೆ ಹಾಜರಾಗದೇ ಇದ್ದಾಗ ಮ್ಯಾಜಿಸ್ಟ್ರೇಟ್ ಖಾನ್ ಜಾಮೀನು ರಹಿತ ವಾರೆಂಟ್ ಹೊರಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News