×
Ad

ಇರಿತಕ್ಕೊಳಗಾದ ವಿದ್ಯಾರ್ಥಿಗೆ ವೈದ್ಯಕೀಯ ನೆರವು ಒದಗಿಸುವಲ್ಲಿ ವಿಳಂಬ: ಪ್ರಾಂಶುಪಾಲ, ಇಬ್ಬರು ಶಿಕ್ಷಕರ ವಿರುದ್ಧ ಪ್ರಕರಣ

Update: 2025-08-23 20:30 IST

PC : X 

ಅಹ್ಮದಾಬಾದ್,ಆ.24: ಹತ್ತನೇ ತರಗತಿಯ ವಿದ್ಯಾರ್ಥಿಯೊಬ್ಬನನ್ನು ಇರಿದು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಮಣಿನಗರ್‌ ನ ಶಾಲೆಯೊಂದರ ಪ್ರಾಂಶುಪಾಲ ಹಾಗೂ ಇಬ್ಬರು ಶಿಕ್ಷಕರ ವಿರುದ್ಧ ಕ್ರಿಮಿನಲ್ ನಿರ್ಲಕ್ಷ್ಯದ ದೂರನ್ನು ನಗರದ ಕ್ರೈಂ ಬ್ರಾಂಚ್ ಪೊಲೀಸರು ದಾಖಲಿಸಿಕೊಂಡಿದ್ದಾರೆ.

ಪ್ರಕರಣದ ತನಿಖೆಯನ್ನು ಮುಂದುವರಿಸಲು ಅನುಮತಿ ಕೋರಿ ಪೊಲೀಸ್ ಅಧಿಕಾರಿಗಳು ನ್ಯಾಯಾಲಯದ ಮೆಟ್ಟಲೇರಿದ್ದಾರೆಂದು ಮೂಲಗಳು ತಿಳಿಸಿವೆ.

ಮಣಿನಗರ್‌ ನ ಸೆವೆನ್ತ್ ಡೇ ಅಡ್ವೆಂಟಿಸ್ಟ್ ಶಾಲೆಯ 10ನೇ ತರಗತಿ ವಿದ್ಯಾರ್ಥಿ, 15 ವರ್ಷ ವಯಸ್ಸಿನ ನಯನ್ ಸನಾತನಿ ಎಂಬಾತನನ್ನು ಮಂಗಳವಾರ ಕಿರಿಯ ವಿದ್ಯಾರ್ಥಿಯೊಬ್ಬ ಇರಿದು ಗಾಯಗೊಳಿಸಿದ್ದ. ಗಂಭೀರವಾದ ಇರಿತದ ಗಾಯಗಳಾಗಿದ್ದ ನಯನ್ ಮರು ದಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದನು. ಶಾಲೆಯ ಸಿಬ್ಬಂದಿ ಗಾಯಾಳು ವಿದ್ಯಾರ್ಥಿಗೆ ಸಕಾಲದಲ್ಲಿ ವೈದ್ಯಕೀಯ ನೆರವನ್ನು ಒದಗಿಸಲು ವಿಫಲರಾಗಿದ್ದಾರೆಂದು ತನಿಖಾಧಿಕಾರಿಗಳು ಆಪಾದಿಸಿದ್ದಾರೆ.

‘‘ಶಾಲಾ ಸಿಬ್ಬಂದಿ ಗಾಯಾಳು ವಿದ್ಯಾರ್ಥಿಗೆ ಸಕಾಲದಲ್ಲಿ ವೈದ್ಯಕೀಯ ನೆರವನ್ನು ನೀಡಲಿಲ್ಲ ಅಥವಾ ಆತನನ್ನು ಆಸ್ಪತ್ರೆಗೆ ತಕ್ಷಣವೇ ಕೊಂಡೊಯ್ಯಲಿಲ್ಲ ಹಾಗೂ ಆ್ಯಂಬುಲೆನ್ಸ್‌ಗೆ ಕರೆ ಮಾಡಲಿಲ್ಲ ಮತ್ತು ಪಾಲಕರಿಗೆ ಮಾಹಿತಿ ನೀಡಿರಲಿಲ್ಲ.ಅದರ ಬದಲು ಅವರು ಶಾಲಾ ಕೊಠಡಿಯಲ್ಲಿ ಚೆಲ್ಲಿದ್ದ ರಕ್ತದ ಕಲೆಗಳನ್ನು ಸ್ವಚ್ಚಗೊಳಿಸುವುದಕ್ಕೆ ಆದ್ಯತೆ ನೀಡಿದ್ದರು ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸನಾತನಿ ಹಾಗೂ ಬಾಲ ಆರೋಪಿಯ ನಡುವೆ ಸುಮಾರು 30 ರಿಂದ 40 ನಿಮಿಷಗಳ ಹೊಡೆದಾಟವಾಗಿತ್ತು. ಈ ಸಂದರ್ಭ ಸಂತ್ರಸ್ತ ವಿದ್ಯಾರ್ಥಿ ಸನಾತನಿಯನ್ನು ಬಾಲಾರೋಪಿ ಚಾಕುವಿನಿಂದ ಇರಿದಿದ್ದ. ಗಂಭೀರವಾಗಿ ಗಾಯಗೊಂಡ ಸನಾತನಿ ಸುಮಾರು ಅರ್ಧತಾಸು ನೋವಿನಿಂದ ಯಾತನೆ ಪಡುತ್ತಿದ್ದ. ಇಬ್ಬರು ಶಾಲಾ ಶಿಕ್ಷಕರಿಗೂ ಇರಿತದ ಘಟನೆಯ ಅರಿವಿತ್ತು. ಆದರೆ ಅವರು ಸನಾತನಿಯ ತಾಯಿ ಎಂದಿನಂತೆ ಪುತ್ರನನ್ನು ಕರೆದುಕೊಂಡು ಹೋಗಲು ಶಾಲೆಗೆ ಬರುವುದನ್ನೇ ಕಾಯುತ್ತಿದ್ದರು. ಕೆಲ ಹೊತ್ತಿನ ಆಗಮಿಸಿದ ನಯನ್‌ ನ ತಾಯಿ ಪುತ್ರನನ್ನು ಶುಶ್ರೂಷೆ ಮಾಡಿದ್ದರು. ಆದರೆ ಶಾಲಾ ಸಿಬ್ಬಂದಿ , ವಿದ್ಯಾರ್ಥಿಯು ಕೊನೆಯುಸಿರೆಳೆಯುವುದನ್ನು ಮೂಕಪ್ರೇಕ್ಷಕರಂತೆ ನೋಡುತ್ತಿದ್ದರು ಎಂದು ಅಧಿಕಾರಿ ಹೇಳಿದ್ದಾರೆ.

ಶಾಲಾ ಪ್ರಾಂಶುಪಾಲ ಜಿ. ಇಮ್ಯಾನುಯೆಲ್ ತಲೆಮರೆಸಿಕೊಂಡಿದ್ದು, ಸಂಪರ್ಕಕಕ್ಕೆ ಸಿಗುತ್ತಿಲ್ಲ. ಶೀಘ್ರದಲ್ಲೇ ಅವರನ್ನು ಪತ್ತೆಹಚ್ಚಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಈವರೆಗೆ ಪ್ರಕರಣಕ್ಕೆ ಸಂಬಂಧಿಸಿ 40 ಮಂದಿಯನ್ನು ಪ್ರಶ್ನಿಸಿದ್ದು, ಸಿಸಿಟಿವಿಯನ್ನು ಪರಿಶೀಲಿಸುತ್ತಿದ್ದಾರೆಂದು ಅವರು ಹೇಳಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News