×
Ad

ಭಾರತೀಯ ಪೊಲೀಸ್ ಅಧಿಕಾರಿಗಳಲ್ಲಿ ಮುಸ್ಲಿಮರ ಬಗ್ಗೆ ಪಕ್ಷಪಾತಿ ಧೋರಣೆ: ಅಧ್ಯಯನ ವರದಿ

Update: 2025-03-27 20:02 IST

PC : PTI 

ಹೊಸದಿಲ್ಲಿ: ದೊಡ್ಡ ಪ್ರಮಾಣದ ಪೊಲೀಸ್ ಸಿಬ್ಬಂದಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವವರ ಬಗ್ಗೆ ಕೋಮು ಪಕ್ಷಪಾತಿ ಧೋರಣೆ ಹೊಂದಿರುವುದು ಅಧ್ಯಯನವೊಂದರಲ್ಲಿ ಬಹಿರಂಗವಾಗಿದ್ದು, ದಿಲ್ಲಿ, ರಾಜಸ್ಥಾನ, ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯದ ಪೊಲೀಸ್ ಸಿಬ್ಬಂದಿ ಸಹಜವಾಗಿ ಮುಸ್ಲಿಮರೇ ದೊಡ್ಡ ಪ್ರಮಾಣದಲ್ಲಿ ಅಪರಾಧಿ ಕೃತ್ಯಗಳಲ್ಲಿ ಭಾಗಿಯಾಗುತ್ತಾರೆ ಎಂಬ ಭಾವನೆಯನ್ನೇ ಬಹುತೇಕ ಹೊಂದಿದ್ದಾರೆ ಎಂದು ಹೇಳಲಾಗಿದೆ.

ಹಿಂದೂ ಪೊಲೀಸ್ ಸಿಬ್ಬಂದಿ ಮುಸ್ಲಿಮರೇ ಸಹಜವಾಗಿ ದೊಡ್ಡ ಪ್ರಮಾಣದಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಾರೆ ಎಂಬ ಭಾವನೆ ಹೊಂದಿದ್ದರೆ, ಸಿಖ್ ಪೊಲೀಸ್ ಸಿಬ್ಬಂದಿಲ್ಲಿ ಅಂತಹ ಭಾವನೆ ತೀರಾ ಕಡಿಮೆ ಎಂದೂ ‘Status of Policing in India Report 2025: Police Torture and (Un)Accountability’ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕುತೂಹಲಕಾರಿ ಸಂಗತಿಯೆಂದರೆ, ಮುಸ್ಲಿಮರು ದೊಡ್ಡ ಪ್ರಮಾಣದಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಾರೆ (ಶೇ. 18ರಷ್ಟು) ಹಾಗೂ ಶೇ. 22ರಷ್ಟು ಮುಸ್ಲಿಮರು ಸಹಜವಾಗಿಯೇ ಅಪರಾಧ ಕೃತ್ಯಗಳನ್ನೆಸಗುತ್ತಾರೆ ಎಂಬ ಅಭಿಪ್ರಾಯವನ್ನು ಪ್ರತಿ ಐವರು ಮುಸ್ಲಿಂ ಪೊಲೀಸ್ ಸಿಬ್ಬಂದಿ ಪೈಕಿ ಇಬ್ಬರು ಮುಸ್ಲಿಂ ಸಿಬ್ಬಂದಿ ಹೊಂದಿದ್ದಾರೆ ಎಂದು ಸಾಮಾನ್ಯ ಉದ್ದೇಶದಿಂದ ಜಂಟಿಯಾಗಿ ನಡೆಸಿರುವ ಅಧ್ಯಯನ ವರದಿಯಲ್ಲಿ ಲೋಕನೀತಿ, ಸಿಎಸ್ಡಿಎಸ್ ಮತ್ತು ಲಾಲ್ ಫ್ಯಾಮಿಲಿ ಫೌಂಡೇಶನ್ ಸಂಸ್ಥೆಗಳು ಹೇಳಿವೆ.

ಸಮೀಕ್ಷೆಗೊಳಪಟ್ಟಿರುವ ಮೂರನೆಯ ಒಂದರಷ್ಟು ಹಿಂದೂ ಮತ್ತು ಮುಸ್ಲಿಂ ಪೊಲೀಸ್ ಸಿಬ್ಬಂದಿ ಕ್ರಿಶ್ಚಿಯನ್ನರು ದೊಡ್ಡ ಪ್ರಮಾಣದಲ್ಲಿ ಅಥವಾ ಸ್ವಲ್ಪಮಟ್ಟಿಗೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಾರೆ ಎಂಬ ಅಭಿಪ್ರಾಯ ಹೊಂದಿದ್ದಾರೆ.

ವಿವಿಧ ಶ್ರೇಯಾಂಕದ 8,276 ಪೊಲೀಸ್ ಸಿಬ್ಬಂದಿನ್ನು 16 ರಾಜ್ಯಗಳು ಹಾಗೂ ರಾಷ್ಟ್ರ ರಾಜಧಾನಿಯ ಪೊಲೀಸ್ ಠಾಣೆಗಳು, ಪೊಲೀಸ್ ಪಡೆಗಳು ಹಾಗೂ ನ್ಯಾಯಾಲಯಗಳಂತಹ ವಿವಿಧ ಸ್ಥಳಗಳಲ್ಲಿ ಸಮೀಕ್ಷೆಗೊಳಪಡಿಸಲಾಗಿದೆ.

ಅಧ್ಯಯನ ವರದಿಯ ಪ್ರಕಾರ, ಸಮೀಕ್ಷೆಯಲ್ಲಿ ಪಾಲ್ಗೊಂಡಿರುವ ದಿಲ್ಲಿಯ ಶೇ. 39ರಷ್ಟು ಪೊಲೀಸ್ ಸಿಬ್ಬಂದಿ ಮುಸ್ಲಿಮರು ದೊಡ್ಡ ಪ್ರಮಾಣದಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಾರೆ ಎಂಬ ಅನಿಸಿಕೆ ಹೊಂದಿದ್ದರೆ, ಶೇ. 23ರಷ್ಟು ಪೊಲೀಸ್ ಸಿಬ್ಬಂದಿ ಮುಸ್ಲಿಮರು ಸ್ವಲ್ಪ ಮಟ್ಟಿಗೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಾರೆ ಎಂಬ ಭಾವನೆ ಹೊಂದಿದ್ದಾರೆ ಎಂದು ಹೇಳಲಾಗಿದೆ.

ಮುಸ್ಲಿಮರು ಸಹಜವಾಗಿಯೇ ದೊಡ್ಡ ಪ್ರಮಾಣದಲ್ಲಿ ಅಥವಾ ಸ್ವಲ್ಪ ಮಟ್ಟಿಗೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಾರೆ ಎಂಬ ಅಭಿಪ್ರಾಯವನ್ನು ರಾಜಸ್ಥಾನ (ಶೇ. 70), ಮಹಾರಾಷ್ಟ್ರ (ಶೇ. 68), ಮಧ್ಯಪ್ರದೇಶ (ಶೇ. 68), ಪಶ್ಚಿಮ ಬಂಗಾಳ (ಶೇ. 68), ಗುಜರಾತ್ (ಶೇ. 67) ಹಾಗೂ ಜಾರ್ಖಂಡ್ (ಶೇ. 66) ರಾಜ್ಯಗಳಲ್ಲಿನ ಮೂರನೆ ಎರಡರಷ್ಟು ಪೊಲೀಸ್ ಸಿಬ್ಬಂದಿ ಹೊಂದಿದ್ದಾರೆ ಎಂದೂ ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.

ಕರ್ನಾಟಕದಲ್ಲಿ ಶೇ. 17ರಷ್ಟು ಪೊಲೀಸ್ ಸಿಬ್ಬಂದಿ ಮುಸ್ಲಿಮರು ದೊಡ್ಡ ಪ್ರಮಾಣದಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಾರೆ ಎಂದು ಅಭಿಪ್ರಾಯ ಪಟ್ಟಿದ್ದರೆ, ಶೇ. 44ರಷ್ಟು ಪೊಲೀಸ್ ಸಿಬ್ಬಂದಿ ಮುಸ್ಲಿಂ ಸಮುದಾಯದವರು ಸ್ವಲ್ಪ ಮಟ್ಟಿಗೆ ಅಪರಾಧ ಕೃತ್ಯಗಳನ್ನು ಎಸಗುವುದರಲ್ಲಿ ಅಂತ್ಯಗೊಳ್ಳುತ್ತಾರೆ ಎಂದು ಹೇಳಿದ್ದಾರೆ. ಶೇ. 7ರಷ್ಟು ಪೊಲೀಸ್ ಸಿಬ್ಬಂದಿ ಮಾತ್ರ ಮುಸ್ಲಿಮರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವುದೇ ಇಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ನಡುವೆ, ಗುಜರಾತ್ ನ ದೊಡ್ಡ ಪ್ರಮಾಣದ (ಶೇ. 68) ಪೊಲೀಸ್ ಸಿಬ್ಬಂದಿ ದಲಿತರು ಸಹಜವಾಗಿಯೇ ಅಪರಾಧ ಕೃತ್ಯಗಳನ್ನು ಎಸಗುತ್ತಾರೆ ಎಂಬ ಭಾವನೆ ಹೊಂದಿದ್ದರೆ, ಶೇ. 17ರಷ್ಟು ಪೊಲೀಸ್ ಸಿಬ್ಬಂದಿ ದಲಿತರು ದೊಡ್ಡ ಪ್ರಮಾಣದಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಾರೆ ಎಂಬ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಶೇ 51ರಷ್ಟು ಪೊಲೀಸ್ ಸಿಬ್ಬಂದಿ ದಲಿತರು ಸ್ವಲ್ಪ ಪ್ರಮಾಣದಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಾರೆ ಎಂಬ ಅಭಿಪ್ರಾಯ ಹೊಂದಿದ್ದಾರೆ.

ಮಹಾರಾಷ್ಟ್ರ (ಶೇ. 52) ಹಾಗೂ ಮಧ್ಯಪ್ರದೇಶ (ಶೇ. 51) ರಾಜ್ಯಗಳ ಅರ್ಧಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ದಲಿತರು ದೊಡ್ಡ ಪ್ರಮಾಣದಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಾರೆ ಎಂಬ ಭಾವನೆ ಹೊಂದಿದ್ದಾರೆ. ಕರ್ನಾಟಕದಲ್ಲಿ ಶೇ. 46ರಷ್ಟು ಪೊಲೀಸ್ ಸಿಬ್ಬಂದಿ ಪೈಕಿ ಶೇ. 10ರಷ್ಟು ಪೊಲೀಸ್ ಸಿಬ್ಬಂದಿ ದೊಡ್ಡ ಪ್ರಮಾಣದಲ್ಲಿ ಪರಿಶಿಷ್ಟ ಜಾತಿಗಳ ಬಗ್ಗೆ ಪಕ್ಷಪಾತಿ ಧೋರಣೆ ಹೊಂದಿದ್ದರೆ, ಶೇ. 36ರಷ್ಟು ಪೊಲೀಸ್ ಸಿಬ್ಬಂದಿ ಸ್ವಲ್ಪ ಮಟ್ಟಿಗೆ ಪಕ್ಷಪಾತಿ ಧೋರಣೆ ಹೊಂದಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಆದಿವಾಸಿಗಳಿಗೆ ಅಪರಾಧ ಕೃತ್ಯಗಳನ್ನೆಸಗುವುದರತ್ತ ಸಹಜವಾಗಿಯೇ ಒಲವಿದೆ ಎಂಬ ಭಾವನೆಯನ್ನು ಗುಜರಾತ್ (ಶೇ. 56) ಹಾಗೂ ಒಡಿಶಾ (ಶೇ. 51) ರಾಜ್ಯಗಳ ದೊಡ್ಡ ಪ್ರಮಾಣದ ಪೊಲೀಸ್ ಸಿಬ್ಬಂದಿ ಹೊಂದಿದ್ದಾರೆ. ವಲಸಿಗರು ಸಹಜವಾಗಿಯೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಾರೆ ಎಂದು ಪ್ರತಿ ಐವರು ಪೊಲೀಸ್ ಸಿಬ್ಬಂದಿ ಪೈಕಿ ಇಬ್ಬರು ಪೊಲೀಸ್ ಸಿಬ್ಬಂದಿ ಭಾವಿಸಿದ್ದಾರೆ.

ಪೊಲೀಸ್ ಪಡೆಯಲ್ಲಿ ರಾಜಸ್ಥಾನ, ಗುಜರಾತ್, ಅಸ್ಸಾಂ ಹಾಗೂ ಕರ್ನಾಟಕದ ಪೊಲೀಸ್ ಸಿಬ್ಬಂದಿ ಅತ್ಯಧಿಕ ಪ್ರಮಾಣದಲ್ಲಿದ್ದು, ಅರ್ಧಕ್ಕಿಂತ ಹೆಚ್ಚು ಪ್ರಮಾಣದ ಪೊಲೀಸ್ ಸಿಬ್ಬಂದಿ ತೃತೀಯ ಲಿಂಗಿಗಳು, ಲಿಂಗಾಂತರಿಗಳು ಹಾಗೂ ಸಲಿಂಗ ಕಾಮಿಗಳಿಂದ ಸಮಾಜದ ಮೇಲೆ ಕೆಟ್ಟ ಪ್ರಭಾವವಾಗುತ್ತಿದ್ದು, ಪೊಲೀಸರು ಅವರೊಂದಿಗೆ ಕಟ್ಟುನಿಟ್ಟಾಗಿ ವರ್ತಿಸಬೇಕಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.

ಸೌಜನ್ಯ: deccanherald.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News