×
Ad

‘ಲೈಂಗಿಕ ಕಿರುಕುಳ’ ಆರೋಪದಿಂದ ನೊಂದು ವ್ಯಕ್ತಿ ಆತ್ಮಹತ್ಯೆ | ವೀಡಿಯೊ ಚಿತ್ರೀಕರಿಸಿದ್ದ ಕೇರಳ ಮಹಿಳೆ ವಿರುದ್ಧ ಪ್ರಕರಣ

Update: 2026-01-20 21:50 IST

ದೀಪಕ್ ಯು | Photo Credit : X

ಕೋಝಿಕ್ಕೋಡ್, ಜ.20: 42 ವರ್ಷದ ವ್ಯಕ್ತಿಯೊಬ್ಬರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿ ವೀಡಿಯೊವನ್ನು ಆನ್‌ಲೈನ್‌ ನಲ್ಲಿ ಪೋಸ್ಟ್ ಮಾಡಿದ್ದ ಶಿಮ್‌ಜಿತಾ ಮುಸ್ತಫಾ (35) ಎಂಬ ಮಹಿಳೆಯ ವಿರುದ್ಧ ಆತ್ಮಹತ್ಯೆಗೆ ಪ್ರಚೋದಿಸಿದ ಆರೋಪದಲ್ಲಿ ಸ್ಥಳೀಯ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ.

ವೈರಲ್ ಆಗಿರುವ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದ ದೀಪಕ್ ಯು. ಅವರು ರವಿವಾರ ಆತ್ಮಹತ್ಯೆಗೆ ಶರಣಾಗಿದ್ದರು. ಅವರ ತಾಯಿ ಸಲ್ಲಿಸಿರುವ ದೂರಿನ ಆಧಾರದಲ್ಲಿ ಸೋಮವಾರ ಮಹಿಳೆಯ ವಿರುದ್ಧ ಜಾಮೀನುರಹಿತ ಕಲಮ್‌ನಡಿ ಪ್ರಕರಣ ದಾಖಲಾಗಿದೆ.

ಇಲ್ಲಿನ ಗೋವಿಂದಪುರ ನಿವಾಸಿ ದೀಪಕ್ ರವಿವಾರ ತನ್ನ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಲೈಂಗಿಕ ಕಿರುಕುಳದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ಅವರು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ.

ದೀಪಕ್ ಶುಕ್ರವಾರ ಕಾರ್ಯನಿಮಿತ್ತ ಬಸ್‌ನಲ್ಲಿ ಕಣ್ಣೂರಿಗೆ ಪ್ರಯಾಣಿಸಿದ್ದರು. ಅದೇ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಶಿಮ್‌ಜಿತಾ ಅವರು ಲೈಂಗಿಕ ದುರ್ವರ್ತನೆಯ ಆರೋಪ ಮಾಡಿ ವೀಡಿಯೊ ಚಿತ್ರೀಕರಿಸಿದ್ದರು.

ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ದೀಪಕ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಲೈಂಗಿಕ ಕಿರುಕುಳದ ಆರೋಪವನ್ನು ನಿರಾಕರಿಸಿದ್ದರು. ಶಿಮ್‌ಜಿತಾ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಿದ್ಧಿಗಾಗಿ ಅವರ ಚಾರಿತ್ರ್ಯಹನನ ಮಾಡಿದ್ದಾಳೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

ವೀಡಿಯೊ ಇಂಟರ್ನೆಟ್‌ನಲ್ಲಿ ಕಾಣಿಸಿಕೊಂಡ ಬೆನ್ನಲ್ಲೇ ದೀಪಕ್ ಭಾರೀ ಆಕ್ರೋಶವನ್ನು ಎದುರಿಸಿದ್ದರು ಎಂದೂ ಅವರು ತಿಳಿಸಿದ್ದಾರೆ.

ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗವು ಘಟನೆಯ ಕುರಿತು ಪೊಲೀಸ್ ತನಿಖೆಗೆ ಆದೇಶಿಸಿದೆ. ಒಂದು ವಾರದೊಳಗೆ ವರದಿಯನ್ನು ಸಲ್ಲಿಸುವಂತೆ ಅದು ಉತ್ತರ ವಲಯ ಡಿಜಿಪಿಗೆ ನಿರ್ದೇಶನ ನೀಡಿದೆ.

ಫೆ.19ರಂದು ಕೋಝಿಕ್ಕೋಡ್‌ನಲ್ಲಿ ನಡೆಯುವ ಆಯೋಗದ ಸಭೆಯಲ್ಲಿ ಈ ಪ್ರಕರಣವನ್ನು ಪರಿಶೀಲಿಸಲಾಗುವುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News