×
Ad

ಯಾವುದೇ ಹೇಳಿಕೆ, ಸುದ್ದಿ, ಅಭಿಪ್ರಾಯ ಪ್ರಕಟಿಸುವ ಮುನ್ನ ಮಾಧ್ಯಮಗಳು ಅತ್ಯಂತ ಎಚ್ಚರಿಕೆ ವಹಿಸಬೇಕು: ಸುಪ್ರೀಂ

Update: 2025-02-19 20:57 IST

 ಸುಪ್ರೀಂ ಕೋರ್ಟ್‌ | PC : PTI 

ಹೊಸದಿಲ್ಲಿ: ಮಾಧ್ಯಮಗಳಲ್ಲಿ ಪ್ರಮುಖ ಹುದ್ದೆಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳು ಯಾವುದೇ ಹೇಳಿಕೆಗಳು, ಸುದ್ದಿಗಳು ಅಥವಾ ಅಭಿಪ್ರಾಯಗಳನ್ನು ಪ್ರಕಟಿಸುವ ಮುನ್ನ ಅತ್ಯಂತ ಎಚ್ಚರಿಕೆ ಮತ್ತು ಜವಾಬ್ದಾರಿಯನ್ನು ವಹಿಸಬೇಕು ಎಂದು ಹೇಳಿರುವ ಸರ್ವೋಚ್ಚ ನ್ಯಾಯಾಲಯವು, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಅತ್ಯುನ್ನತವಾಗಿದೆ ಎಂದು ಅಭಿಪ್ರಾಯಿಸಿದೆ.

ಮಂಗಳವಾರ ಮಾನನಷ್ಟ ಪ್ರಕರಣವೊಂದರ ವಿಚರಣೆ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಜೆ.ಬಿ.ಪರ್ಡಿವಾಲಾ ಮತ್ತು ಆರ್.ಮಹಾದೇವನ್ ಅವರ ಪೀಠವು, ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವಲ್ಲಿ ಮಾಧ್ಯಮಗಳ ಶಕ್ತಿ ಮಹತ್ವದ್ದಾಗಿದೆ. ಪತ್ರಿಕಾರಂಗವು ಗಮನಾರ್ಹ ವೇಗದಲ್ಲಿ ಸಾರ್ವಜನಿಕರ ಭಾವನೆಗಳನ್ನು ಪ್ರಭಾವಿಸುವ ಮತ್ತು ಗ್ರಹಿಕೆಗಳನ್ನು ಬದಲಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಒತ್ತಿ ಹೇಳಿತು.

ಬಿಡ್ ಆ್ಯಂಡ್ ಹ್ಯಾಮರ್ ಸಂಸ್ಥೆಯು ಹರಾಜು ಮಾಡಲಿರುವ ಕೆಲವು ವರ್ಣಚಿತ್ರ ಕಲಾಕೃತಿಗಳ ಸತ್ಯಾಸತ್ಯತೆಯ ಕುರಿತು ಮಾನಹಾನಿಕರ ವರದಿಯನ್ನು ಪ್ರಕಟಿಸಿದ ಆರೋಪದಲ್ಲಿ ಇಂಗ್ಲಿಷ್ ದೈನಿಕ ಟೈಮ್ಸ್ ಆಫ್ ಇಂಡಿಯಾದ ಸಂಪಾದಕೀಯ ನಿರ್ದೇಶಕರು ಮತ್ತು ಇತರ ಪತ್ರಕರ್ತರ ವಿರುದ್ಧ ದಾಖಲಿಸಲಾಗಿದ್ದ ಮಾನನಷ್ಟ ಪ್ರಕರಣವನ್ನು ರದ್ದುಗೊಳಿಸಿದ ಸಂದರ್ಭದಲ್ಲಿ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.

‘ಭಾರತೀಯ ಸಂವಿಧಾನದ ವಿಧಿ 19(1)(ಎ) ಅಡಿ ಖಾತರಿಪಡಿಸಲಾಗಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಅತ್ಯುನ್ನತವಾಗಿದೆ ಎಂದು ನಾವು ಒತ್ತಿ ಹೇಳುವುದು ಅಗತ್ಯವಾಗಿದೆ. ಇದೇ ವೇಳೆ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವವರು, ವಿಶೇಷವಾಗಿ ಪ್ರಮುಖ ಹುದ್ದೆಗಳಲ್ಲಿರುವ ವ್ಯಕ್ತಿಗಳು,ಲೇಖಕರು ಮತ್ತಿತರರು ಯಾವುದೇ ಹೇಳಿಕೆಗಳು, ಸುದ್ದಿಗಳು ಅಥವಾ ಅಭಿಪ್ರಾಯಗಳನ್ನು ಪ್ರಕಟಿಸುವ ಮುನ್ನ ಅತ್ಯಂತ ಎಚ್ಚರಿಕೆ ಮತ್ತು ಜವಾಬ್ದಾರಿಯನ್ನು ವಹಿಸಬೇಕು ಎಂದು ತನ್ನ ತೀರ್ಪಿನಲ್ಲಿ ಹೇಳಿರುವ ಪೀಠವು, ಇಂಗ್ಲಿಷ್ ಲೇಖಕ ಬುಲ್ವರ್ ಲಿಟ್ಟನ್ ಅವರ ‘ಖಡ್ಗಕ್ಕಿಂತ ಲೇಖನಿ ಬಲಿಷ್ಠ ’ಎಂಬ ಹೇಳಿಕೆಯನ್ನು ಉಲ್ಲೇಖಿಸಿದೆ.

ವಿಶಾಲ ವ್ಯಾಪ್ತಿಯನ್ನು ಪರಿಗಣಿಸಿದರೆ ಒಂದೇ ಲೇಖನ ಅಥವಾ ವರದಿಯು ಲಕ್ಷಾಂತರ ಜನರೊಂದಿಗೆ ಅನುರಣಿಸುತ್ತದೆ. ಅವರ ನಂಬಿಕೆಗಳನ್ನು ಮತ್ತು ಅಭಿಪ್ರಾಯಗಳನ್ನು ರೂಪಿಸುತ್ತದೆ. ದೂರಗಾಮಿ ಮತ್ತು ಶಾಶ್ವತವಾಗಿರಬಹುದಾದ ಪರಿಣಾಮಗಳೊಂದಿಗೆ ಸಂಬಂಧಿಸಿದವರ ಪ್ರತಿಷ್ಠೆಗೆ ತೀವ್ರ ಹಾನಿಯನ್ನುಂಟು ಮಾಡುವ ಸಾಮರ್ಥ್ಯವನ್ನು ಅದು ಹೊಂದಿದೆ ಎಂದು ಬೆಟ್ಟು ಮಾಡಿದ ಪೀಠವು,ಇದು ಮಾಧ್ಯಮ ವರದಿಗಾರಿಕೆಯಲ್ಲಿ, ವಿಶೇಷವಾಗಿ ವ್ಯಕ್ತಿಗಳು ಅಥವಾ ಸಂಸ್ಥೆಗಳ ಸಮಗ್ರತೆಯ ಮೇಲೆ ಪರಿಣಾಮವನ್ನು ಬೀರುವ ಸಾಮರ್ಥ್ಯವನ್ನು ಹೊಂದಿರುವ ವಿಷಯಗಳನ್ನು ನಿರ್ವಹಿಸುವಾಗ ನಿಖರತೆ ಮತ್ತು ನ್ಯಾಯ ಸಮ್ಮತತೆಯ ನಿರ್ಣಾಯಕ ಅಗತ್ಯವನ್ನು ಎತ್ತಿ ತೋರಿಸುತ್ತದೆ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸುದ್ದಿ ಲೇಖನಗಳನ್ನು ಸಾರ್ವಜನಿಕ ಹಿತಾಸಕ್ತಿಯಲ್ಲಿ ಮತ್ತು ಉತ್ತಮ ನಂಬಿಕೆಯೊಂದಿಗೆ ಪ್ರಕಟಿಸಬೇಕು ಎಂದು ಹೇಳಿತು.

ತಮ್ಮ ವಿರುದ್ಧ ಕ್ರಿಮಿನಲ್ ಕಾನೂನು ಕ್ರಮಗಳನ್ನು ಪ್ರಶ್ನಿಸಿದ್ದ ತಮ್ಮ ಅರ್ಜಿಗಳನ್ನು ವಜಾಗೊಳಿಸಿದ್ದ ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪತ್ರಕರ್ತರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ಕೈಗೆತ್ತಿಕೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News