ಆದ್ಯತೆ ಆಧಾರದಲ್ಲಿ ವಿಶೇಷ ಪೊಕ್ಸೊ ನ್ಯಾಯಾಲಯ ಸ್ಥಾಪಿಸಿ: ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ
ಸುಪ್ರೀಂ ಕೋರ್ಟ್ | PTI
ಹೊಸದಿಲ್ಲಿ: ಮಕ್ಕಳ ವಿರುದ್ಧದ ಲೈಂಗಿಕ ಅಪರಾಧಗಳ ಪ್ರಕರಣಗಳ ವಿಚಾರಣೆಯ ಏಕೈಕ ಉದ್ದೇಶಕ್ಕಾಗಿ ಪೊಕ್ಸೊ ನ್ಯಾಯಾಲಯಗಳನ್ನು ಆದ್ಯತೆ ಆಧಾರದಲ್ಲಿ ಸ್ಥಾಪಿಸಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ ಕೇಂದ್ರ ಸರಕಾರಕ್ಕೆ ನಿರ್ದೇಶಿಸಿದೆ.
ನ್ಯಾಯಮೂರ್ತಿಗಳಾದ ಬೇಳಾ ಎಂ. ತ್ರಿವೇದಿ ಹಾಗೂ ಪಿ.ಬಿ. ವರಾಲೆ ಅವರನ್ನು ಒಳಗೊಂಡ ಪೀಠ, ಪೊಕ್ಸೊ ಕಾಯ್ದೆಯ ಅಡಿಯ ಪ್ರಕರಣಗಳಿಗೆ ವಿಶೇಷ ನ್ಯಾಯಾಲಯಗಳ ಸಂಖ್ಯೆಯ ಕೊರತೆಯಿಂದಾಗಿ, ಕಾನೂನಿನಡಿಯಲ್ಲಿ ಕಡ್ಡಾಯವಾಗಿ ನಿಗದಿಪಡಿಸಿರುವ ಸಮಯದ ಒಳಗೆ ಪ್ರಕರಣಗಳ ವಿಚರಣೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎಂದು ಹೇಳಿದೆ.
ಆದುದರಿಂದ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳು ಪೊಕ್ಸೊ ಪ್ರಕರಣಗಳ ತನಿಖೆಗೆ ಸಂಬಂಧಿಸಿದ ಅಧಿಕಾರಿಗಳನ್ನು ಸಂವೇದನಾಶೀಲರನ್ನಾಗಿಸಲು ಹಾಗೂ ಪೊಕ್ಸೊ ಪ್ರಕರಣಗಳ ವಿಚಾರಣೆ ನಡೆಸಲು ಆದ್ಯತೆಯ ಆಧಾರದಲ್ಲಿ ಪ್ರತ್ಯೇಕ ನ್ಯಾಯಾಲಯಗಳನ್ನು ಸ್ಥಾಪಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನಿರೀಕ್ಷಿಸಲಾಗಿದೆ ಎಂದು ಪೀಠ ಹೇಳಿದೆ.
ಇದಲ್ಲದೆ ಕಾನೂನಿನಲ್ಲಿ ನಿಗದಿಪಡಿಸಲಾದ ಕಡ್ಡಾಯ ಅವಧಿಯ ಒಳಗಡೆ ಆರೋಪ ಪಟ್ಟಿಯನ್ನು ಸಲ್ಲಿಸುವಂತೆ ಹಾಗೂ ವಿಚಾರಣೆಯನ್ನು ನಿಗದಿತ ಸಮಯದ ಚೌಕಟ್ಟಿನ ಒಳಗಡೆ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
ಹೆಚ್ಚಿನ ರಾಜ್ಯ ಸರಕಾರಗಳು ಕೇಂದ್ರ ಸರಕಾರ ಒದಗಿಸುವ ಹಣದಿಂದ ಪೊಕ್ಸೊ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವ ಕೇಂದ್ರ ಸರಕಾರದ ನಿರ್ದೇಶನವನ್ನು ಪಾಲಿಸಿವೆ. ಆದರೆ, ತಮಿಳುನಾಡು, ಬಿಹಾರ, ಉತ್ತರಪ್ರದೇಶ, ಪಶ್ಚಿಮಬಂಗಾಳ, ಒರಿಸಾ, ಮಹಾರಾಷ್ಟ್ರ ಹಾಗೂ ಇತರ ಕೆಲವು ರಾಜ್ಯಗಳಲ್ಲಿ ಇಂತಹ ಪ್ರಕರಣಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಹೆಚ್ಚಿನ ಪೊಕ್ಸೊ ನ್ಯಾಯಾಲಯಗಳನ್ನು ಸ್ಥಾಪಿಸುವ ಅಗತ್ಯತೆ ಇದೆ ಎಂದು ಸುಪ್ರೀಂ ಕೋರ್ಟ್ ಗಮನ ಸೆಳೆದಿದೆ.
ಪೊಕ್ಸೊ ನ್ಯಾಯಾಲಯಗಳ ಸ್ಥಿತಿಗತಿ ಕುರಿತು ರಾಜ್ಯವಾರು ವಿವರಗಳನ್ನು ಸಲ್ಲಿಸುವಂತೆ ಹಿರಿಯ ನ್ಯಾಯವಾದಿ ಹಾಗೂ ಆ್ಯಮಿಕಸ್ ಕ್ಯೂರಿ ವಿ. ಗಿರಿ ಹಾಗೂ ಹಿರಿಯ ವಕೀಲರಾದ ಉತ್ತರಾ ಬಬ್ಬರ್ ಅವರಿಗೆ ಈ ಮೊದಲು ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು.