ನ್ಯಾ. ಯಶವಂತ್ ವರ್ಮಾ ವಿರುದ್ಧ ಮೊಕದ್ದಮೆ ದಾಖಲಿಸಬೇಕೆನ್ನುವ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
ಯಶವಂತ್ ವರ್ಮಾ | pc : PTI
ಹೊಸದಿಲ್ಲಿ: ಹೈಕೋರ್ಟ್ ನ್ಯಾಯಾಧೀಶ ಯಶವಂತ್ ವರ್ಮಾರ ಅಧಿಕೃತ ನಿವಾಸದಲ್ಲಿ ಅಪಾರ ಪ್ರಮಾಣದ ನಗದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಮೊಕದ್ದಮೆ ದಾಖಲಿಸಬೇಕು ಎಂಬುದಾಗಿ ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರು ಈ ಪ್ರಕರಣವನ್ನು ರಾಷ್ಟ್ರಪತಿ ಮತ್ತು ಪ್ರಧಾನಿಯ ಪರಿಶೀಲನೆಗೆ ಒಪ್ಪಿಸಿದ್ದಾರೆ ಎಂದು ನ್ಯಾಯಾಲಯ ಹೇಳಿತು. ಅರ್ಜಿದಾರರು ನ್ಯಾಯಾಲಯಕ್ಕೆ ಬರುವ ಮೊದಲು, ಸಂಬಂಧಿತ ನ್ಯಾಯಾಧೀಶರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೋರಿ ರಾಷ್ಟ್ರಪತಿ ಮತ್ತು ಪ್ರಧಾನಿಗೆ ಮನವಿ ಸಲ್ಲಿಸಬೇಕಾಗಿತ್ತು ಎಂದು ಅದು ಅಭಿಪ್ರಾಯಪಟ್ಟಿತು.
ವಕೀಲ ಮ್ಯಾಥ್ಯೂಸ್ ಜೆ. ನೆಡುಂಪರ ನೇತೃತ್ವದಲ್ಲಿ ವಕೀಲರ ಗುಂಪೊಂದು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಅಭಯ್ ಎಸ್. ಓಕಾ ನೇತೃತ್ವದ ಹಾಗೂ ನ್ಯಾ. ಉಜ್ಜಲ್ ಭೂಯನ್ ಸದಸ್ಯರಾಗಿರುವ ನ್ಯಾಯಪೀಠವೊಂದು ವಜಾಗೊಳಿಸಿತು.
ಮಾರ್ಚ್ 14ರ ರಾತ್ರಿ, ದಿಲ್ಲಿ ಹೈಕೋರ್ಟ್ ನ್ಯಾಯಾಧೀಶ ಯಶವಂತ್ ವರ್ಮಾರ ಅಧಿಕೃತ ನಿವಾಸದಲ್ಲಿ ಬೆಂಕಿ ಕಾಣಿಸಿಕೊಂಡಿತು. ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿಗೆ ಮನೆಯ ಕೋಣೆಯೊಂದರಲ್ಲಿ ಸಂಗ್ರಹಿಸಿಡಲಾಗಿದ್ದ ಅಗಾಧ ಪ್ರಮಾಣದ ನಗದು ಹಣ ಕಾಣಿಸಿತು. ಅದರಲ್ಲಿ ಸ್ವಲ್ಪ ಭಾಗ ಸುಟ್ಟು ಹೋಗಿತ್ತು. ಬಳಿಕ ನ್ಯಾಯಾದೀಶರನ್ನು ಅಲಹರಾಬಾದ್ ಹೈಕೋರ್ಟ್‌ಗೆ ವರ್ಗಾಯಿಸಲಾಗಿತ್ತು.