ಅತಿವೇಗ ಹಾಗೂ ಅಜಾಗ್ರತೆಯ ಚಾಲನೆಯಿಂದಾಗಿ ಸಾವಿಗೆ ವಿಮಾ ಕಂಪನಿಗಳು ಪರಿಹಾರ ನೀಡಬೇಕಿಲ್ಲ: ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: ತಮ್ಮ ಅತಿವೇಗ ಮತ್ತು ಅಜಾಗ್ರತೆಯ ಚಾಲನೆಯಿಂದಾಗಿ ಸಂಭವಿಸಿದ ಅಪಘಾತಗಳಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರವನ್ನು ಪಾವತಿಸಲು ವಿಮಾ ಕಂಪನಿಗಳು ಬದ್ಧವಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ.
ಅತಿವೇಗದಿಂದ ಕಾರನ್ನು ಚಲಾಯಿಸಿದ ಪರಿಣಾಮ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದ ವ್ಯಕ್ತಿಯ ಪತ್ನಿ,ಮಗ ಮತ್ತು ಹೆತ್ತವರು ಕೋರಿದ್ದ 80 ಲಕ್ಷ ರೂ.ಪರಿಹಾರವನ್ನು ಮಂಜೂರು ಮಾಡಲು ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಆರ್. ಮಹಾದೇವನ್ ಅವರ ಪೀಠವು ನಿರಾಕರಿಸಿದೆ.
ಮೃತ ವ್ಯಕ್ತಿಯ ಕುಟುಂಬಸ್ಥರು ಪರಿಹಾರವನ್ನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ಕಳೆದ ವರ್ಷದ ನ.23ರ ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಸರ್ವೋಚ್ಚ ನ್ಯಾಯಾಲಯವು ನಿರಾಕರಿಸಿದೆ.
‘ಉಚ್ಚ ನ್ಯಾಯಾಲಯದ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡಲು ನಾವು ಒಲವು ಹೊಂದಿಲ್ಲ. ಹೀಗಾಗಿ ವಿಶೇಷ ರಜಾ ಅರ್ಜಿಯನ್ನು ವಜಾಗೊಳಿಸಲಾಗಿದೆ’ ಎಂದು ಪೀಠವು ಬುಧವಾರ ಹೊರಡಿಸಿದ ತೀರ್ಪಿನಲ್ಲಿ ಹೇಳಿದೆ.
2014,ಜೂ.18ರಂದು ಎನ್.ಎಸ್. ರವೀಶ್ ಎನ್ನುವವರು ಕಾರನ್ನು ಸ್ವತಃ ಚಲಾಯಿಸಿಕೊಂಡು ಮಲ್ಲಸಂದ್ರ ಗ್ರಾಮದಿಂದ ಅರಸೀಕರೆ ಪಟ್ಟಣಕ್ಕೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಈ ಸಂದರ್ಭ ಕಾರಿನಲ್ಲಿ ಅವರ ತಂದೆ,ಸೋದರಿ ಮತ್ತು ಅವರ ಮಕ್ಕಳು ಪ್ರಯಾಣಿಸುತ್ತಿದ್ದರು.
ರವೀಶ ಸಂಚಾರ ನಿಯಮಗಳನ್ನು ಪಾಲಿಸದೆ ನಿರ್ಲಕ್ಷ್ಯದಿಂದ ಕಾರನ್ನು ಚಲಾಯಿಸುತ್ತಿದ್ದರು ಮತ್ತು ನಿಯಂತ್ರಣ ಕಳೆದುಕೊಂಡ ಕಾರು ರಸ್ತೆಯಲ್ಲಿ ಪಲ್ಟಿಯಾಗಿತ್ತು ಎನ್ನುವುದನ್ನು ನ್ಯಾಯಾಲಯವು ಗಮನಕ್ಕೆ ತೆಗೆದುಕೊಂಡಿದೆ.
ಮೃತ ವ್ಯಕ್ತಿಯ ಅತಿವೇಗ ಮತ್ತು ಅಜಾಗ್ರತೆಯ ಚಾಲನೆಯಿಂದಾಗಿ ಅಪಘಾತ ಸಂಭವಿಸಿತ್ತು ಮತ್ತು ಅವರು ತನ್ನದೇ ತಪ್ಪಿನಿಂದಾಗಿ ಸಾವನ್ನಪ್ಪಿದ್ದರು. ಹೀಗಾಗಿ ಅವರ ಸಾವಿಗಾಗಿ ಕುಟುಂಬಸ್ಥರು ಯಾವುದೇ ಪರಿಹಾರವನ್ನು ಕೋರುವಂತಿಲ್ಲ,ಏಕೆಂದರೆ ಅದು ನಿಯಮಗಳನ್ನು ಉಲ್ಲಂಘಿಸಿದ ವ್ಯಕ್ತಿ ತನ್ನದೇ ತಪ್ಪುಗಳಿಗೆ ಪರಿಹಾರವನ್ನು ಪಡೆದಂತಾಗುತ್ತದೆ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಎತ್ತಿ ಹಿಡಿದಿತ್ತು.