ಮುಂಬೈ ಬಾಂಬ್ ಸ್ಫೋಟ ಪ್ರಕರಣ: 12 ಮಂದಿ ಆರೋಪಿಗಳ ಖುಲಾಸೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮಹಾರಾಷ್ಟ್ರ ಸರಕಾರ
ಸುಪ್ರೀಂ ಕೋರ್ಟ್ | PTI
ಹೊಸದಿಲ್ಲಿ: ಜುಲೈ 21ರಂದು 2006ರ ಮುಂಬೈ ಬಾಂಬ್ ಸ್ಫೋಟ ಪ್ರಕರಣದಲ್ಲಿ 12 ಮಂದಿಯನ್ನು ಖುಲಾಸೆಗೊಳಿಸಿರುವ ಬಾಂಬೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ, ಮಂಗಳವಾರ ಮಹಾರಾಷ್ಟ್ರ ಸರಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಈ ಮೇಲ್ಮನವಿಯನ್ನು ವಿಚಾರಣೆಗೆ ತುರ್ತಾಗಿ ಪಟ್ಟಿ ಮಾಡಬೇಕು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ನೇತೃತ್ವದ ನ್ಯಾಯಪೀಠಕ್ಕೆ ಮನವಿ ಮಾಡಿದರು.
ಮೇಲ್ಮನವಿ ಅರ್ಜಿಯ ವಿಚಾರಣೆ ನಡಸಿದ ನ್ಯಾಯಪೀಠ, ಅರ್ಜಿಯನ್ನು ಜುಲೈ 24ರಂದು ವಿಚಾರಣೆ ನಡೆಸಲು ಸಮ್ಮತಿಸಿತು.
"ರಜಾಕಾಲದ ವಿಶೇಷ ಅರ್ಜಿ ಸಿದ್ಧವಾಗಿದೆ. ದಯವಿಟ್ಟು ಈ ಅರ್ಜಿಯನ್ನು ನಾಳೆಯ ವಿಚಾರಣೆಗೆ ಪಟ್ಟಿ ಮಾಡಿ. ಬಹಳ ತುರ್ತಿದೆ" ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮನವಿ ಮಾಡಿದರು.
ಅದಕ್ಕೆ ಪ್ರತಿಯಾಗಿ, ಮುಖ್ಯ ನ್ಯಾಯಮೂರ್ತಿ ಗವಾಯಿ ಅವರು, "ಹೈಕೋರ್ಟ್ ತೀರ್ಪಿನನ್ವಯ ಈಗಾಗಲೇ ಎಂಟು ಮಂದಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ ಎಂದು ನಾನು ಪತ್ರಿಕೆಯಲ್ಲಿ ಓದದ್ದೇನೆ", ಎಂದು ಪ್ರತಿಕ್ರಿಯಿಸಿದರು.
ಇದಕ್ಕೂ ಮುನ್ನ, ಸೋಮವಾರದಂದು 2006ರ ಮುಂಬೈ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ 12 ಮಂದಿಯನ್ನು ಖುಲಾಸೆಗೊಳಿಸಿತು. ಐವರು ಆರೋಪಿಗಳಿಗೆ ಮರಣದಂಡನೆ ಹಾಗೂ ಏಳು ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದ ಮೋಕಾ ನ್ಯಾಯಾಲಯದ ಆದೇಶವನ್ನು ಬದಿಗಿರಿಸಿದ್ದ ಬಾಂಬೆ ಹೈಕೋರ್ಟ್, ಈ ಆರೋಪಿಗಳು ಅಪರಾಧವೆಸಗಿದ್ದಾರೆ ಎಂದು ನಂಬಲು ತೀರಾ ಕಷ್ಟವಾಗುತ್ತಿದೆ ಎಂದು ಅಭಿಪ್ರಾಯ ಪಟ್ಟಿತ್ತು.
ಪೊಲೀಸರ ತನಿಖೆಯಲ್ಲಿ ಲೋಪವಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದ್ದ ನ್ಯಾಯಾಲಯ, ಆರೋಪಿಗಳ ತಪ್ಪೊಪ್ಪಿಗೆ ಹೇಳಿಕೆಗಳು ಹಾಗೂ ಸಾಕ್ಷಿದಾರರ ಸಾಕ್ಷ್ಯಗಳ ಬಗ್ಗೆ ಶಂಕೆ ವ್ಯಕ್ತಪಡಿಸಿತ್ತು.
ಜುಲೈ 11, 2006ರಲ್ಲಿ ಮುಂಬೈನ ಸ್ಥಳೀಯ ರೈಲುಗಳಲ್ಲಿ ಸಂಭವಿಸಿದ್ದ ಆರು ಬಾಂಬ್ ಸ್ಫೋಟಗಳಲ್ಲಿ 189 ಮಂದಿ ಮೃತಪಟ್ಟು, 820 ಮಂದಿ ಪ್ರಯಾಣಿಕರು ಗಾಯಗೊಂಡಿದ್ದರು. ಗರಿಷ್ಠ ಪ್ರಮಾಣದ ಜೀವಹಾನಿಯೆಸಗಲು ಟೈಮರ್ ಅಳವಡಿಸಿದ್ದ ಭಯೋತ್ಪಾದಕರು, ಅವನ್ನು ಸ್ಥಳೀಯ ರೈಲುಗಳಲ್ಲಿ ಭಾರಿ ಜನದಟ್ಟಣೆ ಇರುವ ಸಂಜೆಯ ವೇಳೆಯೇ ಸ್ಫೋಟಿಸಿದ್ದರು. ಹೀಗಾಗಿ, ಸಾವು-ನೋವಿನ ಪ್ರಮಾಣ ಗರಿಷ್ಠ ಪ್ರಮಾಣಕ್ಕೆ ತಲುಪಿತ್ತು.