×
Ad

ಕಾನೂನು ಸಲಹೆ ನೀಡುವ ವಕೀಲರಿಗೆ ಸಮನ್ಸ್ ನೀಡುವಂತಿಲ್ಲ: ಸುಪ್ರೀಂ ಕೋರ್ಟ್

Update: 2025-07-29 20:41 IST

ಸುಪ್ರೀಂ ಕೋರ್ಟ್ | PC :  PTI 

ಹೊಸದಿಲ್ಲಿ, ಜು. 28: ಓರ್ವ ವ್ಯಕ್ತಿಯು ಕೇವಲ ವಕೀಲನ ಕೆಲಸವನ್ನು ಮಾಡುತ್ತಿದ್ದರೆ, ತನಿಖೆ ಎದುರಿಸುತ್ತಿರುವ ತನ್ನ ಕಕ್ಷಿಗಾರನಿಗೆ ಕಾನೂನು ಅಭಿಪ್ರಾಯ ನೀಡಿರುವುದಕ್ಕಾಗಿ ಅವರನ್ನು ತನಿಖಾ ಸಂಸ್ಥೆಗಳು ವಿಚಾರಣೆಗೆ ಕರೆಯುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.

ಯಾವುದೇ ವಕೀಲರು ‘‘ಅಪರಾಧದಲ್ಲಿ ತನ್ನ ಕಕ್ಷಿಗಾರನಿಗೆ ನೆರವು ನೀಡುತ್ತಿದ್ದರೆ’’, ಆಗ ಅವರನ್ನು ವಿಚಾರಣೆಗೆ ಕರೆಯಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ತನಿಖೆಗಳ ಸಮಯದಲ್ಲಿ ಕಕ್ಷಿಗಾರರಿಗೆ ಕಾನೂನು ಸಲಹೆಯನ್ನು ನೀಡಿರುವುದಕ್ಕಾಗಿ ಅಥವಾ ಅವರನ್ನು ಪ್ರತಿನಿಧಿಸಿರುವುದಕ್ಕಾಗಿ ವಕೀಲರನ್ನು ತನಿಖಾ ಸಂಸ್ಥೆಗಳು ವಿಚಾರಣೆಗೆ ಕರೆಯುವುದಕ್ಕೆ ಸಂಬಂಧಿಸಿದ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ಬಿ.ಆರ್. ಗವಾಯಿ ಮತ್ತು ನ್ಯಾಯಾಧೀಶ ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ನ್ಯಾಯಪೀಠವೊಂದು ಈ ತೀರ್ಪು ನೀಡಿದೆ.

‘‘ಯಾವುದೇ ವಕೀಲರು ಅಪರಾಧದಲ್ಲಿ ತಮ್ಮ ಕಕ್ಷಿಗಾರರಿಗೆ ಸಹಾಯ ಮಾಡುತ್ತಿದ್ದರೆ ಅವರನ್ನು ವಿಚಾರಣೆಗೆ ಕರೆಯಬಹುದು ಎನ್ನುವುದನ್ನು ನಾವು ಮೊದಲೇ ಹೇಳಿದ್ದೇವೆ. ಆದರೆ, ಕೇವಲ ಕಾನೂನು ಸಲಹೆ ನೀಡಿರುವುದಕ್ಕಾಗಿ ಅವರನ್ನು ವಿಚಾರಣೆಗೆ ಕರೆಯುವಂತಿಲ್ಲ’’ ಎಂದು ನ್ಯಾಯಾಲಯ ಹೇಳಿತು.

ಈ ವಿಷಯದಲ್ಲಿ, ವಕೀಲರ ಸಂಘಗಳಾದ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್ ಮತ್ತು ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್ ಆನ್ ರೆಕಾರ್ಡ್ ಅಸೋಸಿಯೇಶನ್ ನ ಪ್ರತಿನಿಧಿಗಳ ವಾದವನ್ನು ನ್ಯಾಯಾಲಯವು ಆಲಿಸಿತು.

ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್ನ್ನು ಪ್ರತಿನಿಧಿಸಿದ ಅದರ ಅಧ್ಯಕ್ಷರೂ ಆಗಿರುವ ವಿಕಾಸ್ ಸಿಂಗ್, ಕಾನೂನು ವೃತ್ತಿಯ ಮೇಲೆ ‘‘ಸ್ವೇಚ್ಛಾಚಾರದ ಸಮನ್ಸ್’’ ಬೀರಬಹುದಾದ ‘‘ಆತಂಕಕಾರಿ ಪರಿಣಾಮ’’ದ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಕೇವಲ ಕಾನೂನು ಸಲಹೆ ನೀಡಿರುವುದಕ್ಕಾಗಿ ವಕೀಲರನ್ನು ವಿಚಾರಣೆಗೆ ಕರೆಯಬಾರದು ಎನ್ನುವುದಕ್ಕೆ ಅನುಷ್ಠಾನ ನಿರ್ದೇಶನಾಲಯವನ್ನು ಪ್ರತಿನಿಧಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸಹಮತ ವ್ಯಕ್ತಪಡಿಸಿದರು.

ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್ 12ಕ್ಕೆ ಮುಂದೂಡಲಾಗಿದೆ.

ಪ್ರಕರಣಗಳಿಗೆ ಸಂಬಂಧಿಸಿ ತನ್ನೆದುರು ವಿಚಾರಣೆಗೆ ಹಾಜರಾಗುವಂತೆ ಇತ್ತೀಚೆಗೆ ಜಾರಿ ನಿರ್ದೇಶನಾಲಯ(ಈಡಿ)ವು ಕೆಲವು ವಕೀಲರಿಗೆ ಸಮನ್ಸ್ ಜಾರಿಗೊಳಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News