ಆಂತರಿಕ ತನಿಖಾ ಸಮಿತಿಯ ವರದಿ ಪ್ರಶ್ನಿಸಿ ನ್ಯಾ.ಯಶವಂತ್ ವರ್ಮಾ ಸಲ್ಲಿಸಿದ್ದ ಅರ್ಜಿ ಕುರಿತ ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್
ನ್ಯಾ.ಯಶವಂತ್ ವರ್ಮಾ | PTI
ಹೊಸದಿಲ್ಲಿ : ನಗದು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನನ್ನು ತಪ್ಪಿತಸ್ಥ ಎಂದು ಘೋಷಿಸಿದ ಆಂತರಿಕ ತನಿಖಾ ಸಮಿತಿಯ ವರದಿ ಪ್ರಶ್ನಿಸಿ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಯಶವಂತ್ ವರ್ಮಾ ಸಲ್ಲಿಸಿದ್ದ ಮೇಲ್ಮನವಿಯ ತೀರ್ಪನ್ನು ಸುಪ್ರೀಂ ಕೋರ್ಟ್ ಬುಧವಾರ ಕಾಯ್ದಿರಿಸಿದೆ.
ನ್ಯಾಯಮೂರ್ತಿ ವರ್ಮಾ ಮತ್ತು ಇತರರನ್ನು ವಿಚಾರಣೆ ನಡೆಸಿದ ನಂತರ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ಅಗಸ್ಟೀನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಾಧೀಶರ ಪೀಠ ತೀರ್ಪನ್ನು ಕಾಯ್ದಿರಿಸಿದೆ.
ನಗದು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ನೇತೃತ್ವದ ಸಮಿತಿಯ ಶಿಫಾರಸನ್ನು ಪ್ರಶ್ನಿಸಿ ವರ್ಮಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಆಂತರಿಕ ಸಮಿತಿ ಅವರ ವಿರುದ್ಧ ಶಿಫಾರಸು ಮಾಡಿದ ನಂತರವೇ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆಂತರಿಕ ಸಮಿತಿಯು ಸಂವಿಧಾನಬಾಹಿರ ಎಂದು ನೀವು ಭಾವಿಸಿದ್ದರೆ ಆರಂಭದಲ್ಲಿಯೇ ಏಕೆ ಪ್ರಶ್ನಿಸಲಿಲ್ಲ ಎಂದು ಪೀಠವು ವರ್ಮಾ ಅವರಿಗೆ ಪ್ರಶ್ನಿಸಿದೆ.
ನೀವು ಎತ್ತಿರುವ ಅಂಶಗಳು ಪ್ರಮುಖವಾದವು, ಸಮಿತಿ ರಚನೆಯಾದಾಗ ನೀವೇಕೆ ಮಾತನಾಡಲಿಲ್ಲ. ಶಿಫಾರಸು ಬಳಿಕ ಅರ್ಜಿ ಸಲ್ಲಿಕೆ ಮಾಡಿರುವುದರಿಂದ ನಿಮ್ಮ ನಡವಳಿಕೆಯು ವಿಶ್ವಾಸಾರ್ಹದಂತೆ ಕಂಡು ಬಂದಿಲ್ಲ. ನಿಮ್ಮ ನಡವಳಿಕೆಯು ಬಹಳಷ್ಟು ಹೇಳುತ್ತದೆ ಎಂದು ನ್ಯಾಯಾಲಯ ಹೇಳಿದೆ.
ನ್ಯಾಯಮೂರ್ತಿ ವರ್ಮಾ ಅವರ ದಿಲ್ಲಿಯ ನಿವಾಸದಲ್ಲಿ ಸಂಭವಿಸಿದ ಅಗ್ನಿ ಅವಘಡದ ವೇಳೆ, ಭಾರಿ ಪ್ರಮಾಣದ ನಗದು ಪತ್ತೆಯಾಗಿತ್ತು. ಈ ಘಟನೆ ನಂತರ, ಅವರನ್ನು ದಿಲ್ಲಿ ಹೈಕೋರ್ಟ್‌ನಿಂದ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸಲಾಯಿತು. ಭ್ರಷ್ಟಾಚಾರದ ಆರೋಪಗಳ ಹಿನ್ನಲೆಯಲ್ಲಿ, ಆಗಿನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ತ್ರಿಸದಸ್ಯ ಸಮಿತಿಯನ್ನು ರಚಿಸಿದ್ದರು.